ಕೈಕಂಬ: ಮೂಡಬಿದ್ರೆಯ ವಿದ್ಯಾಗಿರಿ ಸಮೀಪದ ಹಂಡೇಲು ತಿರುವಿನಲ್ಲಿ ಉಂಟಾದ ದ್ವಿಚಕ್ರ ವಾಹನ ಅಪಘಾತಕ್ಕೆ ಗುರುಪುರ ಕೈಕಂಬದ ಯುವಕನೋರ್ವ ದಾರುಣವಾಗಿ ಮೃತ್ಯುವಶವಾಗಿದ್ದಾನೆ.
ಗುರುಪುರ ಕೈಕಂಬ ಸಮೀಪದ ಕಂದಾವರ ಪಡ್ಡಾಯಿ ಪದವು ನಿವಾಸಿ ಸ್ಟ್ಯಾನಿ ಎಂಬವರ ಪುತ್ರ ವಿಲ್ಸನ್ ಮಿಸ್ಕಿತ್(18) ಮೃತಪಟ್ಟ ಯುವಕ.

ಬೇಸಿಗೆ ರಜಾವಾಗಿರುವುದರಿಂದ ವಿಲ್ಸನ್ ಮಿಸ್ಕಿತ್ ತನ್ನ ನಾಲ್ಕು ಗೆಳೆಯರ ಜೊತೆಗೆ ತಲಾ ಎರಡು ಬೈಕ್ನಲ್ಲಿ ಮೂಡಬಿದ್ರೆಗೆ ತೆರಳಿದ್ದರು. ಆದರೆ ಸೋಮವಾರ ಸಂಜೆ ಮೂಡಬಿದ್ರೆಯಿಂದ ಕೈಕಂಬಕ್ಕೆ ವಾಪಸಾಗುವ ವೇಳೆಯಲ್ಲಿ ಹಂಡೇಲು ಸಮೀಪದ ತಿರುವಿನಲ್ಲಿ ವಿಲ್ಸನ್ ಇದ್ದ ಡಿಯೋ ಎನ್ನುವ ದ್ವಿಚಕ್ರವಾಹನ ಮೂಡಬಿದ್ರೆಗೆ ತೆರಳುತ್ತಿದ್ದ ಇನ್ನೊಂದು ಬೈಕ್ಗೆ ಡಿಕ್ಕಿಹೊಡೆದ ಪರಿಣಾಮ ವಿಲ್ಸನ್ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ. ಈತನ ಜೊತೆಯಿದ್ದ ಸಹಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ಗಂಭೀರ ಗಾಯಗೊಂಡ ವಿಲ್ಸನ್ನನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ಸ್ಟ್ಯಾನಿ ಎಂಬವರ ಮೂವರು ಮಕ್ಕಳಲ್ಲಿ ಈತ ಹಿರಿಯ ಮಗ ಆಗಿದ್ದ.
ವಿಲ್ಸನ್ ಇತ್ತೀಚೆಗಷ್ಟೇ ಬಜ್ಪೆ ಸೈಂಟ್ ಜೋಸೆಫ್ ಪ.ಪೂ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ತಾಂತ್ರಿಕ ಶಿಕ್ಷಣ ಪಡೆಯುವ ಇಚ್ಛೆಯಲ್ಲಿದ್ದರು. ಡಿಯೋದಲ್ಲಿದ್ದ ಸಹಸವಾರ ಹಾಗೂ ಬೈಕ್ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದಾರೆ. ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


