ವಿಟ್ಲ: ಜೀಪು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಪುತ್ತೂರು ರಸ್ತೆಯ ಕಂಬಳಬೆಟ್ಟು ಜಂಕ್ಷನ್ನಲ್ಲಿ ಸೋಮವಾರ ನಡೆದಿದೆ.

ಕೇಪು ಗ್ರಾಮದ ಅಡ್ಯನಡ್ಕ ನಿವಾಸಿ ರೂಪೇಶ್(28) ಗಂಭೀರ ಗಾಯಗೊಂಡ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಇವರು ಬೆಳಿಗ್ಗೆ ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಕಂಬಳಬೆಟ್ಟು ಜಂಕ್ಷನ್ನಲ್ಲಿ ಪುತ್ತೂರು ಕಡೆಯಿಂದ ಬಂದ ಜೀಪು ಡಿಕ್ಕಿ ಹೊಡೆದಿದೆ. ಘಟನೆ ತೀವ್ರತೆ ಸವಾರ ರಸ್ತೆಗೆಸೆಯಲ್ಪಟ್ಟು ಕಾಲಿಗೆ ಹಾಗೂ ಕೈಗೆ ತೀವ್ರ ಸ್ವರೂಪದ ಗಾಯವಾಗಿದೆ. ಬಳಿಕ ಅವರನ್ನು 108 ವಾಹನ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಸ್ಪತ್ರೆಗೆ ಕೊಂಡೊಯ್ಯಲು ಹಿಂದೇಟು ಹಾಕಿದ ಚಾಲಕರು:
ಗಾಯಾಳು ಗಂಭೀರ ಗಾಯಗೊಂಡು ರಸ್ತೆಯಲ್ಲಿ ಹೊರಲಾಡುತ್ತಿದ್ದರೂ ಸ್ಥಳೀಯರು ಅವರನ್ನು ಆಟೋ ರಿಕ್ಷದಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲು ಮುಂದಾದಾಗ ಕೆ.ಎ.19 ನೋಂದಾಣಿಯ ಆಟೋ ಚಾಲಕರು ನಾವು ಪುತ್ತೂರಿಗೆ ಹೋಗಲ್ಲ. ಕೆ.ಎ.19 ಸಂಖ್ಯೆಯ ಆಟೋಗಳಿಗೆ ಅಲ್ಲಿಯ ಪೊಲೀಸರು ಬೇಕಾಬಿಟ್ಟಿ ದಂಡ ಹಾಕುತ್ತಾರೆ ಎಂದು ಹೆದರಿ ಗಾಯಾಳುವನ್ನು ಕೊಂಡೊಯ್ಯಲು ಹಿಂದೇಟು ಹಾಕಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಅರ್ಧ ಗಂಟೆಯ ಬಳಿಕ 108ಗೆ ಕರೆ ಮಾಡಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.
ವಿಟ್ಲ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಪುತ್ತೂರು ಆಸ್ಪತ್ರೆ ಅನಿವಾರ್ಯವಾಗಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಕೊಂಡೊಯ್ಯುತ್ತಿರುವ ವೇಳೆ ಅಲ್ಲಿಯ ಪೊಲೀಸರು ಅರ್ಧ ದಾರಿಯಲ್ಲಿ ಕೆ.ಎ.19 ನೋಂದಾಣಿಯ ರಿಕ್ಷಾಗಳನ್ನು ತಡೆ ಹಿಡಿದು ನಿರಂತರವಾಗಿ ತಂಡ ಹಾಕುತ್ತಾರೆ. ಈ ಕಾರಣದಿಂದ ನಾವು ಅಲ್ಲಿಗೆ ಹೋಗುವುದಿಲ್ಲ ಎಂದು ಆಟೋ ಚಾಲಕರು ಆರೋಪಿಸಿದ್ದಾರೆ.

