ಸುದ್ದಿ9ಬಜ್ಪೆ: ಮಳೆಗಾಲ ಬಂತೆಂದರೆ ಸಾಕು, ಪ್ರಕೃತಿಯಲ್ಲಿ ನಾನಾ ಬಗೆಯ, ಹಲವು ವಿಧದ ಬಣ್ಣ-ಬಣ್ಣದ ಹೂವುಗಳು ಕಾಣಸಿಗುತ್ತವೆ. ಇವುಗಳನ್ನು ಕೆಲವೊಂದು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ನಾವು ಕಾಣಲು ಸಾಧ್ಯ. ಮಳೆಯ ಮೊದಲ ಹನಿ ಸೋಕಿದಾಗ ಅದೆಲ್ಲಿಂದಲೋ ಭೂಮಿಯ ಮೇಲೆ ಮೊಗ್ಗಾಗಿ ಅರಳಿ ಹೂವಾಗಿ ಬಿರಿಯುವ ಹೂವುಗಳ ಸಾಲಿಗೆ ಸ್ಕಾಡಾಕ್ಸಸ್ ಅಥವಾ ರಕ್ತದ ಹೂವು ಕೂಡಾ ಸೇರುತ್ತದೆ.
ಕೆಂಪು ಬಣ್ಣದ ಸುಮಾರು ಇನ್ನೂರರಷ್ಟು ಹೂವಿನ ಎಸಳುಗಳಿಂದ ತುಂಬಿ ಕಂಗೊಳಿಸುವ ಸ್ಕಾಡಾಕ್ಸಸ್ ಹೂವನ್ನು ನವು ನೋಡಿದ್ದರೂ ಇರಬಹುದು. ಭೂಮಿಯ ಮೇಲೆ ಕಾಂಡ, ಗಿಡದ ಯಾವುದೇ ಕುರುಹು ಕಾಣಿಸದಿದ್ದರೂ ಮಳೆಗಾಲ ಆರಂಭಕ್ಕೆ ಪೂರ್ವ ಸೂಚನೆಯೆಂಬಂತೆ ಮೊದಲ ಮಳೆಗೆ ಅರಳಿ ನೋಡುಗರ ಕಣ್ಣಿಗೆ ಮುದ ನೀಡುವ ಈ ಹೂವಿನ ಪೂರ್ತಿ  ಹೆಸರು ಸ್ಕಾಡಾಕ್ಸಾಸ್ ಮಲ್ಟೀಫ್ಲೋರಸ್. ಆಫ್ರಿಕಾ ಖಂಡದ ಅರಣ್ಯ ಭಾಗದಲ್ಲಿ ಹೇರಳವಾಗಿ ಕಂಡುಬರುವ ಸ್ಕಾಡಾಕ್ಸಸ್ ಹೂವನ್ನು ಬ್ಲಡ್ ಫ್ಲವರ್, ಕ್ಯಾಥರೀನ್ ಲೀಫ್, ಫೈರ್ಬಾಲ್, ಗಿಫೆರ್ಟಲ್ ಎಂದೂ ಕರೆಯುತ್ತಾರೆ.
ಹೆಮಾಂಥಸ್ ಹೂವಿನ ಪ್ರಬೇಧಕ್ಕೆ ಸೇರಿರುವ ಸ್ಕಾಡಾಕ್ಸಸ್ ಹೂವು ನೋಡಲು ಕಣ್ಣಿಗೆ ಹಬ್ಬ ಉಂಟು ಮಾಡುತ್ತದಾದರೂ ಆರೋಗ್ಯದ ದೃಷ್ಟಿಯಿಂದ ಇದನ್ನು ಕೀಳುವುದು ಒಳಿತಲ್ಲವಂತೆ. ಸೌತ್ ಆಫ್ರಿಕಾ, ಸ್ವಿಝರ್ಲ್ಯಾಂಡ್, ಜಿಂಬಾಬ್ವೆ ರಾಷ್ಟ್ರಗಳಲ್ಲಿ ಈ ಹೂವಿನಿಂದ ತೆಗೆಯುವ ರಸವನ್ನು ಮೀನು ಸಾಯಿಸಲು ಬಳಸುತ್ತಾರಂತೆ. ಹೀಗಾಗಿ ಮಕ್ಕಳು ಹೂವಿನಿಂದ ಬರುವ ದ್ರವವನ್ನು ಸೇವಿಸಿದರೆ ಅಪಾಯ ತಪ್ಪಿದ್ದಲ್ಲ.
ಸ್ಕಾಡಾಕ್ಸಸ್ ಗಿಡವನ್ನು ಹೆಚ್ಚಾಗಿ ಮನೆಯ ಒಳಾಂಗಣ ಅಲಂಕಾರಕ್ಕೆ ಬಳಸುತ್ತಾರೆ. ಸುಮಾರು 70 ಸೆಂ.ಮೀ. ಉದ್ದ ಮತ್ತು 110 ಸೆಂ.ಮೀ. ವಿಸ್ತೀರ್ಣ ಹೊಂದಿರುವ ಸ್ಕಾಡಾಕ್ಸಸ್ ಹೂವು ಮಳೆಗಾಲದಲ್ಲಿ ಮಾತ್ರ ಕಂಡುಬರುವುದು ವಿಶೇಷ. ಸುಮಾರು ಒಂದು ವಾರಗಳ ಕಾಲ ಗಿಡದಲ್ಲಿ ಕಂಗೊಳಿಸುವ ಸ್ಕಾಡಾಕ್ಸಸ್ ಅಂತಿಮವಾಗಿ ಉದುರಿ ಬಿದ್ದು ಮಾಯವಾಗುತ್ತದೆ. ಆಮೇಲೆ ಗಿಡದ ಕುರುಹು ಮೇಲ್ನೋಟಕ್ಕೆ ಗೋಚರವಾಗದು. ಈರುಳ್ಳಿ ಗೆಡ್ಡೆಯನ್ನು ಹೋಲುವ ಇದರ ಗೆಡ್ಡೆ ಭೂಮಿಯಡಿಯಲ್ಲಿ ಹಾಗೇ ಇದ್ದು, ಮುಂದಿನ ಮಳೆಗಾಲಕ್ಕೆ ಮತ್ತೆ ಹೂವು ಬಿಡುತ್ತದೆ.

12-2-p--

12-3p

12-2p-

By suddi9

Leave a Reply

Your email address will not be published. Required fields are marked *