ನವದೆಹಲಿ: ಒಂದು ಕಾಲದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪರಮಾಪ್ತನಾಗಿದ್ದ ಛೋಟಾ ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ್ ನಿಕ್ಲಾಜೆ(55) ಎಂಬಾತನನ್ನು ಇಂಡೋನೇಶಿಯಾದ ಬಾಲಿ ದ್ವೀಪದ ಸಮೀಪ ಬಂಧಿಸಲಾಗಿದೆ ಎಂಬುವುದಾಗಿ ಸುದ್ದಿವಾಹಿನಿಗಳು ತಿಳಿಸಿವೆ.
ಸುಮಾರು 20 ವರ್ಷಗಳ ಕಾಲ ಭೂಗತ ಜಗತ್ತನ್ನು ಆಳಿದ ಛೋಟಾ ರಾಜನ್ ತನ್ನ ಪರಮಾಪ್ತರು ಮಾಡಿದ ಕುತಂತ್ರಕ್ಕೆ ಬಲಯಾಗಿ ಇಂಡೋನೇಶಿಯಾದ ಪಲೀಸರ ಖೆಡ್ಡಾಕ್ಕೆ ಬಿದ್ದಿದ್ದಾನೆ ಎಂಬ ಸುದ್ದಿ ಹರಡುತ್ತಿದೆ. ಛೋಟಾ ಅರೆಸ್ಟ್ ಆದ ಸುದ್ದಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಭಾರತದ ಪೊಲೀಸರು ಈಗಾಗಲೇ ಇಂಡೋನೇಶಿಯಾದ ಪೊಲೀಸರ ಜೊತೆ ಸಂಪರ್ಕದಲ್ಲಿದ್ದು, ಆತನನ್ನು ಶೀಘ್ರವೇ ಭಾರತಕ್ಕೆ ಕಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಅರೆಸ್ಟ್ ಆದವನು ಛೋಟಾ ರಾಜನ್ ಎಂದು ಖಚಿತಪಡಿಸಿ ನ್ಯಾಯಾಧೀಶರ ಮುಂದೆ ಪರೇಡ್ ನಡೆಸಿದ ಬಳಿಕ ಇಂಡೋನೇಶಿಯಾ ಹಾಗೂ ಭಾರತದ ಮಧ್ಯೆ ಇರುವ ವಿದೇಶಾಂಗ ನೀತಿಗನುಸಾರ ಆತನನ್ನು ಭಾರತದ ವಶಕ್ಕೆ ಒಪ್ಪಿಸಲಿಕ್ಕಿದೆ.

ಈತನ್ಮಧ್ಯೆ ಆತನ ಮೇಲೆ ಭಾರತದಲ್ಲಿರುವ ಆರೋಪ ಪಟ್ಟಿಯನ್ನು ಸಿದ್ಧ ಪಡಿಸಿ ಅದನನು ಇಂನೇಶಿಯಾದ ಭಾಷೆಗೆ ತರ್ಜುಮೆಗೊಳಿಸಿ ನ್ಯಾಯಾಧೀಶರಿಗೆ ಸಲ್ಲಿಸದ ಬಳಿಕ ಆತನನ್ನು ಭಾರತಕ್ಕೆ ಒಪ್ಪಿಸುವ ಸಾಧ್ಯತೆ ಇದೆ.
ಚೋಟಾ ರಾಜನ್ ಮೇಲೆ 15ರಿಂದ 20ರ ತನಕ ಕೊಲೆ, ಗಲಭೆ, ಹಿಂಸಾಚಾರ ಮುಂತಾದ ಪ್ರಕರಣಗಳು ಸುತ್ತಿಕೊಂಡಿವೆ. ಅಲ್ಲದೆ 1993ರ ಸರಣಿ ಬಾಂಬ್ ಸ್ಫೋಟದಲ್ಲಿ ದಾವೂದ್ ಇಬ್ರಾಹಿಂ ಜೊತೆ ಕೈಜೋಡಿಸಿ ವಿದೇಶಕ್ಕೆ ಪರಾರಿಯಾಗಿದ್ದಾನೆ.
2014ರಲ್ಲಿ ಚೋಟಾ ಸತ್ತಿದ್ದ ವದಂತಿ
2014ರಲ್ಲಿ ಚೋಟಾ ರಾಜನ್ ಕಿಡ್ನಿ ವೈಫಲ್ಯದಿಂದ ಸತ್ತಿದ್ದಾನೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಕೆಲದಿನಗಳ ನಂತರ ಅದೆಲ್ಲಾ ದಾವೂದ್ ಇಬ್ರಾಹಿಂದ ಮಾಡಿದ ಪಿತೂರಿ ಎಂಬುವುದನ್ನು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಕರೆ ಮಾಡಿ ತಿಳಿಸಿದ್ದ.
ಚೋಟಾ ಹತ್ಯೆಗೆ ದಾವೂದ್ ಸ್ಕೆಚ್
ಒಂದು ಕಾಲದಲ್ಲಿ ದಾವೂದ್ ಹಾಗೂ ಛೋಟಾ ರಾಜನ್ ಪರಮಾಪ್ತರಾಗಿದ್ದು, ಬಳಿಕ ಹಾವು ಮುಂಗುಸಿ ತರ ವರ್ತಿಸುತ್ತಿದ್ದರು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಬಳಿಕ ದಾವೂದ್ ಗ್ಯಾಂಗ್‍ನಿಂದ ಹೊರಬಂದ ಛೋಟಾ ಆ ಬಳಿಕ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದ. ದಾವೂದ್ ಇಬ್ರಾಹಿಂ ತನ್ನನ್ನು ಯಾವಾಗ ಬೇಕಾದರೂ ಕೊಲ್ಲಬಹುದೆಂಬ ಭೀತಿಯಲ್ಲಿ ಕಳೆಯುತ್ತಿದ್ದ ಛೋಟಾ ಕೂಡಾ ದಾವೂದ್‍ನನ್ನು ಕೊಲ್ಲಲು ಕೂಡಾ ಸ್ಕೆಚ್ ರೂಪಿಸಿದ್ದ. ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದ ಸಂದರ್ಭ ಛೋಟಾ ರಾಜನ್ ತನ್ನ ಆರೇಳು ಮಂದಿ ಸಹಚರರನ್ನು ನೇಪಾಳದ ಮೂಲಕ ಅಲ್ಲಿಗೆ ಕಳುಹಿಸಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ದಾವೂದ್ ಮನೆ ಸಮೀಪದ ದರ್ಗಾಕ್ಕೆ ಭೇಟಿ ನೀಡುವುದನ್ನೇ ಆತನ ಸಹಚರರು ಕಾಯುತ್ತಿದ್ದರು. ಆದರೆ ಇದರ ಮಾಹಿತಿ ದಾವೂದ್ ಅಲ್ಲಿಗೆ ಬಾರದೆ ಇರುವುದರಿಂದ ಪಾರಾಗಿದ್ದ ಎನ್ನಲಾಗಿದೆ. ಯೋಜನೆ ವಿಫಲವಾಗಿದ್ದರಿಂದ್ದ ಛೋಟಾ ಸಹಚರರು ಮರಳಿದ್ದರು.
ಮತ್ತೊಬ್ಬ ವೈರಿ ಛೋಟಾ ಶಕೀಲ್:
ಛೋಟಾ ರಾಜನ್ ಹತ್ಯೆಗೆ ದಾವೂದ್‍ನಿಂದ ಯತ್ನ ನಡೆಯುತ್ತಿರುವಾಗಲೇ ಮತ್ತೊಬ್ಬ ಪಾತಕಿ ಛೋಟಾ ಶಕೀಲ್ ಆತನ ಮುಗಿಸಲು ಸಂಚು ರೂಪಿಸಿದ್ದ. ಮೂಲಗಳ ಪ್ರಕಾರ ದಾವೂದ್ ಪರಮಾಪ್ತನಾಗಿರುವ ಚೋಟಾ ಶಕೀಲ್‍ನನ್ನು ದಾವುದು ಖುದ್ದಾಗಿ ರಾಜನ್‍ನನ್ನು ಮುಗಿಸಲು ಸುಪಾರಿ ನೀಡಿದ್ದ ಎನ್ನಲಾಗಿದೆ. 2000ರ ಸೆ.17ರಂದು ಛೋಟಾ ಶಕೀಲ್ ಅನುಚರರು ರಾಜನ್ ಮೇಲೆ ಶೂಟ್ ಮಾಡಿದ್ದರು. ಆದರೆ ರಾಜನ್ ಕೂದಲೆಳೆಯ ಅಂತರದಿಂದ ಪಾರಾಗಿದ್ದ. ಆದರೆ ಈ ಘಟನೆಯಲ್ಲಿ ರಾಜನ್‍ಗೆ ಗಂಭೀರ ಗಾಯವಾಗಿದ್ದು, ಥಾಯ್‍ಲ್ಯಾಂಡ್ ಪೊಲೀಸರ ಕಣ್ಗಾವಲಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ. ಆದರೆ ಪೊಲೀಸರ ಕಣ್ಣೆರಚಿ ಮತ್ತಿಬ್ಬರು ಭೂಗತ ಪಾತಕಿಗಳಾದ ಭರತ್ ನೇಪಾಳಿ ಹಾಗೂ ಶಂತೋಷ್ ಶೆಟ್ಟಿ ಸಹಾಯದಿಂದ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ.
ಮತ್ತೊಬ್ಬ ಪಾತಕಿ ಸಂತೋಷ್ ಶೆಟ್ಟಿ:
ಭೂಗತ ಪಾತಕಿ ಸಂತೋಷ್ ಶೆಟ್ಟಿ ಒಂದು ಕಾಲದಲ್ಲಿ ರಾಜನ್‍ನ ಪರಮಾಪ್ತ. ದಾವೂದ್ ಗ್ಯಾಂಗ್‍ನಿಂದ ರಾಜ್ನ ಹೊರದ್ದಬಲ್ಪಟ್ಟ ಸುದ್ದಿ ಕೇಳುತ್ತಿದ್ದಂತೆ ರಾಜನ್‍ಗೆ ಹತ್ತಿರನಾದ ಸಂತೋಷ್ ಶೆಟ್ಟಿ ಆ ಬಳಿಕ ಅಂದರೆ 2004ರ ನಂತರ ದೂರವಾಗಿದ್ದು ಮಾತ್ರ ವಿಪರ್ಯಾಸ. ಥಾಯ್‍ಲ್ಯಾಂಡ್‍ನಿಂದ ರಾಜನ್‍ಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಸಂತೋಷ್ ಶೆಟ್ಟಿ `ಎಸ್‍ಎಸ್ ಸಿಂಡಿಕೇಟ್’ ಎಂಬ ಹೊಸ ಗ್ಯಾಂಗ್ ಸ್ಥಾಪಿಸಿದ್ದ. ಇದರಿಂದ ಎರಡೂ ತಂಡಗಳ ಮಧ್ಯೆ ಕತ್ತಿ ಮಸೆಯಲು ಆರಂಭವಾಯಿತು. ಅಲ್ಲದೆ ಹಣಕಾಸಿನ ವೈಮನಸ್ಸು ಕೂಡಾ ಅವರಿಬ್ಬರನ್ನು ಪರಸ್ಪರ ದೂರ ಮಾಡಿತು. 2008ರಲ್ಲಿ ಭರತ್ ನೇಪಾಳಿ ಕೂಡಾ ರಾಜನ್ನನ್ನು ಬಿಟ್ಟು ದೂರವಾದ.
ಚೋಟಾ ರಾಜನ್ ಅರೆಸ್ಟ್ ಆದ ಸುದ್ದಿ ಕೇಳಿತ್ತಿದ್ದಂತೆ ಸಂತೋಷ್ ಶೆಟ್ಟಿ ಭೂಗತ ಜಗತ್ತನ್ನು ಆಳಲು ಸಿದ್ಧತೆ ಮಾಡುವ ಸಾಧ್ಯತೆ ಇದೆ ಎಂಬ ಗುಮಾನಿ ಪೊಲೀಸರಿಂದ ವ್ಯಕ್ತವಾಗುತ್ತಿದೆ.
ಹೀಗೆ ಹಲವಾರು ಭೂಗತ ಪಾತಕಿಗಳ ವಿರೋಧ ಕಟ್ಟಿಕೊಂಡು ಹಿಂದೂ ಡಾನ್ ಆಗಿ ಮೆರೆದಿದ್ದ ಛೋಟಾ ರಾಜನ್ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಈಗಾಗಲೇ ದಾವೂದ್ ಇಬ್ರಾಹಿಂನನ್ನು ಮುಗಿಸಲು ಅಥವಾ ಜೀವಂತವಾಗಿ ಹಿಡಿಯಲು ಪ್ರಯತ್ನ ನಡೆಸುತ್ತಿರುವ ಭಾರತ ಸರಕಾರ ಚೋಟಾ ರಾಜನ್ ನೀಡುವ ಸುಳಿವಿನಿಂದ ಆತನನ್ನು ಬಂಧಿಸಲು ಪ್ರಯತ್ನ ನಡೆಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


