ಕೈಕಂಬ: ಕಳೆದ ಎರಡು ತಿಂಗಳಿಂದ ಮೂಡಬಿದ್ರೆಯಲ್ಲಿ ಭುಸುಗುಡುತ್ತಿದ್ದ ಕೋಮುಗಲಭೆ ಅಮಾಯಕ ಯುವಕನ ಕೊಲೆಯಲ್ಲಿ ಅಂತ್ಯಕಂಡಿದ್ದು, ಪೊಲೀಸ್ ನಿರ್ಲಕ್ಷ್ಯತೆಗೆ ಸಾಕ್ಷಿ ನುಡಿದಿದೆ. ಗಂಟಾಲಕಟ್ಟೆ ಕಸಾಯಿ ಅಡ್ಡೆಯಿಂದ ಹಿಡಿದು, ಹಂಡೆಲ್‍ಸುತ್ತಿನ ಅಮಾಯಕ ಯುವಕರ ಹತ್ಯಾ ಯತ್ನದಿಂದ ಮುಂದುವರಿದ ಪ್ರಕರಣ ಕೊನೆಗೆ ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆಯವರೆಗೂ ಮುಂದುವರಿದಿದೆ. ಮುಂದೇನಾಗಬಹುದೆಂಬ ಆತಂಕದಲ್ಲಿ ಸಾಮಾನ್ಯ ಜನತೆ ಮುಳುಗುವಂತಾಗಿದ್ದು, ಈ ಘಟನೆಗೆ ತಾರ್ಕಿಕ ಅಂತ್ಯ ಕಾಣಿಸುವುದು ರಾಜ್ಯ ಪೊಲೀಸರ ಕರ್ತವ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಅದೇನು ಗಂಟಾಲ್ಕಟ್ಟೆ ಪ್ರಕರಣ?
ಕಳೆದ ಆಗಸ್ಟ್ 20ರಂದು ಮೂಡಬಿದ್ರೆ ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆಯ ಹಾಡಿಯೊಂದರಲ್ಲಿ 30ಕ್ಕೂ ಅಧಿಕ ಜಾನುವಾರುಗಳನ್ನು ಕಟ್ಟಿ ಹಾಕಿರುವ ವಿಚಾರ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ತಿಳಿದು, ಅಡ್ಡೆಗೆ ದಾಳಿ ನಡೆಸಿದ್ದರು. ದಾಳಿ ನಡೆಯುತ್ತಿದ್ದ ಕ್ರುದ್ಧರಾದ ಇನ್ನೊಂದು ಕೋಮಿನ ಯುವಕ ತಂಡ ಪ್ರತಿಭಟಿಸಿದ ಪರಿಣಾಮ ಸಂಘರ್ಷದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಬಂದ 4 ಮಂದಿ ಪೊಲೀಸರು ತಂಡಗಳನ್ನು ನಿಯಂತ್ರಿಸಲು ವಿಫಲರಾಗಿದ್ದು, ಉದ್ವಿಗ್ನ ಸ್ಥಿತಿ ಉಂಟಾಗಿತ್ತು.
ಈ ಗಲಾಟೆಯನ್ನು ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ಪತ್ರಕರ್ತನಿಗೆ ತಿಳಿಗೇಡಿ ಯುವಕನೊಬ್ಬ ಪ್ಯಾಂಟ್ ಜಿಪ್ ಜಾರಿಸಿ ಅಟ್ಟಹಾಸ ಮೆರೆದಿದ್ದ ಘಟನೆಯೂ ನಡೆದಿತ್ತು. ಈ ಬಗ್ಗೆ ಹಿಂದೂ ಹಾಗೂ ಮುಸ್ಲಿಂ ಯುವಕರು ಒಬ್ಬರಿಗೊಬ್ಬರು ದೂರು-ಪ್ರತಿದೂರು ನೀಡಿದ್ದು, ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದಾದ ಕೆಲವು ದಿನಗಳ ತರುವಾಯ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ನೇತೃತ್ವದಲ್ಲಿ ಗಂಟಾಲ್‍ಕಟ್ಟೆ ಪ್ರಕರಣಕ್ಕೆ ಸಂಬಂಧಿಸಿ ಸಾವಿರಾರು ಹಿಂದೂ ಸಂಘಟನೆಯ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದ್ದ ಘಟನೆಯೂ ನಡೆದಿತ್ತು.
ಕೇಸರಿ ಮುಂಡು ಧರಿಸಿದ್ದಕ್ಕೆ
ಮಾರಣಂತಿಕ ಹಲ್ಲೆ:
ಗಂಟಾಲ್ಕಟ್ಟೆ ಘಟನೆ ನಡೆದು ಒಂದು ತಿಂಗಳ ಬಳಿಕ ಮೂಡಬಿದ್ರೆಯ ಹಂಡೇಲ್‍ಸುತ್ತು ಎಂಬಲ್ಲಿ ಕೇಸರಿ ಮುಂಡು ಧರಿಸಿದ್ದಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ನಾರಾವಿ ನಿವಾಸಿಗಳಾದ ವಾಸು ಆಚಾರ್ಯ ಹಾಗೂ ಅಶೋಕ್ ಗಂಭೀರ ಗಾಯಗೊಂಡ ವ್ಯಕ್ತಿಗಳು.
ಕುಲಶೇಖರದಲ್ಲಿ ನಡೆದಿದ್ದ ಗಣೇಶ ಉತ್ಸವದಲ್ಲಿ ಬ್ಯಾಂಡ್ ವಾದನದಲ್ಲಿ ಪಾಲ್ಗೊಂಡು ಮರಳಿ ಬೈಕ್‍ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಮೂರು ಬೈಕ್‍ನಲ್ಲಿ ಬಂದ ಆರು ಮಂದಿ ಮುಸುಕುಧಾರಿಗಳು ಯದ್ವಾತದ್ವಾ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಆದರೆ ಹಲ್ಲೆ ಆರೋಪಿಗಳನ್ನು ಹಿಡಿಯಲು ಪೊಲೀಸರು ಮಾತ್ರ ಸಂಪೂರ್ಣವಾಗಿ ವಿಫಲವಾಗಿದ್ದಾರೆ.
ಹಾಡಹಗಲೇ ಕೊಲೆ:
ಇದಾದ ಒಂದು ತಿಂಗಳು ಕಳೆಯುವಷ್ಟರಲ್ಲಿ ಮೂಡಬಿದ್ರೆಯ ಸಮಾಜ ಮಂದಿರದ ಗೇಟ್ ಎದುರಿರುವ ಹೂವಿನ ವ್ಯಾಪಾರಿ, ಹಿಂದೂ ಸಂಘಟನೆಯ ಕಾರ್ಯಕರ್ತ ಹೊಸಬೆಟ್ಟು ಗ್ರಾಮದ ನಿವಾಸಿ ಪ್ರಶಾಂತ್ ಎಂಬವರನ್ನು ಹಾಡಹಗಲೇ ಮುಸುಕುಧಾರಿ ಯುವಕರು ಕೊಲೆಗೈದು ಪರಾರಿಯಾಗಿದ್ದಾರೆ.
ಹೀಗೆ ಆಗಸ್ಟ್‍ನಿಂದ ಅಕ್ಟೋಬರ್‍ವರೆಗಿನ ಮೂರು ತಿಂಗಳ ಅವಧಿಯಲ್ಲಿ ಮೂಡಬಿದರೆ ವ್ಯಾಪ್ತಿಯಲ್ಲಿ, ಕೋಮು ಗಲಭೆ, ಹಲ್ಲೆ ಕೊಲೆ ನಡೆಯುತ್ತಿದೆ. ಪೆರ್ಮುದೆ ಹುಣ್ಸೆಕಟ್ಟೆ ಬಳಿ ಬೇಕರಿ ಮಾಲಕ ಜಯ ಕೋಟ್ಯಾನ್ ಎಂಬವರ ಮೇಲೂ ಮುಸುಕುಧಾರಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿತ್ತು. ಪ್ರತೀ ಹಲ್ಲೆಯನ್ನೂ ಮುಸುಕುಧಾರಿಗಳ ತಂಡವೇ ನಡೆಸಿದ್ದು, ಒಂದಕ್ಕೊಂದರಲ್ಲಿ ಸಾಮ್ಯತೆ ಕಂಡುಬರುತ್ತಿದೆ.
ಕೋಮುಪ್ರೇರುತವಾಗಿ ನಡೆಯುವ ಈ ಹಲ್ಲೆ-ಕೊಲೆಗಳಿಗೆ ಇತಿಶ್ರೀ ಹಾಡಲು ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದು, ಸಂಘರ್ಷ ಮುಂದುವರಿಯುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.


