ಮುಂಬಯಿ : ನಗರದ ಹಿರಿಯ ಪ್ರತಿಷ್ಟಿತ ಕನ್ನಡ ಸಂಘಟನೆಗಳಲ್ಲೊಂದಾದ , ಚೆಂಬೂರು ಕರ್ನಾಟಕ ವಿದ್ಯಾ ಸಂಸ್ಥೆಗಳ ಮಾತೃ ಸಂಸ್ಥೆಯಾದ ಚೆಂಬೂರು ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಖ್ಯಾತ ನ್ಯಾಯವಾದಿ, ಸಮಾಜ ಸೇವಕ ಶ್ರೀ ಎಚ್ ಕೆ. ಸುಧಾಕರ ಆರಾಟೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಘದ ಆಡಳಿತ ಮಂಡಳಿಗೆ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಎಚ್ ಕೆ ಸುಧಾಕರ ಅವರನ್ನು ಸರ್ವಾನುಮತದಿಂದ ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಯಿತು.
ಇದೇವೇಳೆ, ಸಂಘದ ಉಪಾಧ್ಯಕ್ಷರಾಗಿ ಶ್ರೀ ಪ್ರಭಾಕರ್ ಬಿ ಬೋಳಾರ್, ಗೌರವ ಕಾರ್ಯದರ್ಶಿಗಳಾಗಿ ಶ್ರೀ ರಂಜನ್ ಕುಮಾರ್ ಆರ್ ಅಮೀನ್ ,ಗೌರವ ಕೋಶಾಧಿಕಾರಿಗಳಾಗಿ ಶ್ರೀ ಟಿ. ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿಯಗಿ ಶ್ರೀ ದೇವದಾಸ್ ಕೆ. ಶೆಟ್ಟಿಗಾರ್ ಮತ್ತು ಜೊತೆ ಕೋಶಾಧಿಕಾರಿಯಾಗಿ ಶ್ರೀ ಸುಂದರ್ ಎನ್. ಕೋಟ್ಯಾನ್ ನೇಮಕಗೊಂಡರು. ಚೆಂಬೂರುತಿಲಕ್ ನಗರ, ಮಾನ್ಕುರ್ಡ್, ಟ್ರಾಂಬೆಯ ವ್ಯಾಪ್ತಿಯನ್ನೊಳಗೊಂಡ ಕನ್ನಡಿಗರ ಪ್ರಾತಿನಿದ್ಯವನ್ನು ಹೊಂದಿರುವ ಚೆಂಬೂರು ಕರ್ನಾಟಕ ಸಂಘ ಆರು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದು ಮುಂಬಯಿ ಮಹಾನಗರ ಆದ್ಯ ಕನ್ನಡ ಸಂಘಗಳಲ್ಲೊಂದಾಗಿ ಪ್ರವರ್ಧಮನಕ್ಕೆ ಬಂದಿತು. ಸುಮಾರು ಐದು ದಶಕಗಳಿಂದ ಪರಿಸರದಲ್ಲಿ ಶಿಕ್ಷಣ ಸೇವೆಯನ್ನೂ ಆರಂಭಿಸಿದ ಸಂಘ , ಮುಂದೆ ಚೆಂಬೂರು ಹೊರವಲಯದ ಘಾಟ್ಲಾದಲ್ಲಿ ತನ್ನದಾದ ಸ್ವಂತ ನಿವೇಶನ ಹೊಂದಿತು. ಇಲ್ಲಿ ಇಂದು ಪ್ರೀ ಪ್ರೈಮರಿ ಹಂತದಿಂದ ತೊಡಗಿ ಪದವಿ ಪೂರ್ವ ಕಾಲೇಜಿನ ತನಕ ಸುಮಾರು ನಾಲ್ಕೂವರೆ ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿದೆ. ಸಂಸ್ಥೆಯ ಕರ್ನಾಟಕ ಹೈಸ್ಕೂಲು ಮತ್ತು ಜೂನಿಯರ್ ಕಾಲೇಜು ತನ್ನ ಸ್ಥಾಪನೆಯ ವರ್ಷದಿಂದ ಇದು ತನಕವೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಹಾನಗರ ಕನ್ನಡ ಶಾಲೆಗಳಲ್ಲೇ ಮುಂಚೂಣಿಯ ಸ್ಥಾನದಲ್ಲಿದೆ. ಸಂಸ್ಥೆಯ ವಾರ್ಷಿಕ ಸಾಂಸ್ಕೃತಿಕ ಉತ್ಸವ ` ಸಾಹಿತ್ಯ ಸಹವಾಸ ‘ ಪ್ರಸಿದ್ದಿ ಪಡೆದಿದ್ದು , ಪ್ರತಿ ವರ್ಷ ಕೊಡಮಾಡುವ ವೈ ಜಿ ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, `ರಾಷ್ಟ್ರೀಯ ಕನ್ನಡ ರತ್ನ’ ಪುರಸ್ಕಾರ ಈಗಾಗಲೇ ಖ್ಯಾತಿ ಪಡೆದಿದೆ.
ಎಚ್ ಕೆ ಸುಧಾಕರ : ಎಳೆ ಹರಯದಲ್ಲೇ ಮುಂಬಯಿಗೆ ವಲಸೆ ಬಂದ ಶ್ರೀ ಎಚ್ ಕೆ ಸುಧಾಕರ ಮೂಲತಹ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆರಾಟೆಯವರು.ನಗರದಲ್ಲಿ ದುಡಿಮೆಯೊಂದಿಗೆ ಕಲಿಕೆಯನ್ನು ಮುಂದುವರಿಸಿ ಕಾನೂನು ವ್ಯಾಸಂಗ ಪೂರೈಸಿದ ಅವರು ಭಾರತ ಸರಕಾರದ ನೋಟರಿಯಾಗಿ, ದೇಶದ ಪ್ರಸಿದ್ದ ಲಾ ಫಮರ್ ಗಳ ಸಲಹಾಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕವಾಗಿಯೂ ಸಕ್ರಿಯರಾಗಿರುವ ಎಚ್ ಕೆ ಸುಧಾಕರ ಲಯನ್ಸ್ ಕ್ಲ ಬ್ , ಆರ್ಯ ಸಮಾಜ ಸಂಘಟನೆಗಳಲ್ಲಿ ಉನ್ನತ ಹುದ್ದೆಯಲ್ಲಿ ದುಡಿದ ಅನುಭವ ಹೊಂದಿದ್ದಾರೆ. ಕಲೆ ಸಂಸ್ಕೃತಿಯ , ವಿಶೇಷವಾಗಿ ಯಕ್ಷಗಾನದ ಪೋಷಕರಾಗಿಯೂ ಅವರು ಹೆಸರು ಪಡೆದಿದ್ದು ಸಂಘದಲ್ಲಿ ಯಕ್ಷಗಾನ ತಾಳಮದ್ದಳೆ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ.ಎಚ್ ಕೆ ಸುಧಾಕರ ಅವರು ಹೊರನಾಡ ತುಳುವ ಕನ್ನಡಿಗರಿಗಾಗಿ ಸ್ಥಾಪಿಸಿದ `ಆರಾಟೆ ನಾಗಮ್ಮ ಸೇಸಪ್ಪ ಪೂಜಾರಿ ಮೆಮೋರಿಯಲ ಸೌಹಾರ್ದ ಪ್ರಶಸ್ತಿ’ ಹೊರನಾಡಿನ ಪ್ರಶಸ್ತಿ ,ಪುರಸ್ಕಾರಗಳ ಪೈಕಿ ಅತಿ ಹೆಚ್ಚಿನ ಗೌರವ ನಿಧಿಯನ್ನೊಳಗೊಂಡಿದೆ.

