ಮಂಗಳೂರು: ಕಾವೂರು ಪಳನೀರು ಫ್ರೆಂಡ್ಸ್ ಸರ್ಕಲ್ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು.
ಸಮಾರಂಭವನ್ನು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಸಮಾರಂಭದಲ್ಲಿ ಊರಿನ ಬಡಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅಲ್ಲದೆ ಅನಾರೋಗ್ಯದಿಂದ ಬಳಲುತ್ತಿರುವ ಸ್ಥಳೀಯ ನಿವಾಸಿ ಪವನ್ ಗೆ ಚಿಕಿತ್ಸಾ ವೆಚ್ಚಕ್ಕಾಗಿ ಧನ ಸಹಾಯವನ್ನು ನೀಡಲಾಯಿತು.
ಬಿಜೆಪಿ ಮುಖಂಡ ಪ್ರಾಂಕ್ಲಿನ್ ಮೊಂತೆರೋ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಪ್ರತಿಯೊಂದು ಸಂಘಟನೆಗಳು ಸಾಮಾಜಿಕ ಚಟುವಟಿಕೆಗೆ ವಿಶೇಷ ಆದ್ಯತೆ ನೀಡಬೇಕು. ಜನತೆಯ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಪಳನೀರು ಫ್ರೆಂಡ್ಸ್ ಸರ್ಕಲ್ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಮನಪಾ ಸದಸ್ಯ ದೀಪಕ್ ಪೂಜಾರಿ ಮಾತನಾಡಿ, ಸದಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುತ್ತ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಫ್ರೆಂಡ್ಸ್ ಸರ್ಕಲ್ ಇತರ ಸಂಘಟನೆಗಳಿಗಿಂತ ಭಿನ್ನವಾಗಿದೆ. ಸಾಮಾಜಿಕ ಚಟುವಟಿಕೆಯ ಕಾರ್ಯಗಳು ನಿರಂತರವಾಗಿ ಮುಂದುವರೆಯಲಿ ಎಂದವರು ಆಶಿಸಿದರು.
ಇದೇ ವೇಳೆ ಯಕ್ಷಗಾನ ಕಲಾವಿದ ಜಿ.ಕೆ.ಶ್ರೀನಿವಾಸ್ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಪುರುಷೋತ್ತಮ, ಉಪಾಧ್ಯಕ್ಷ ರಮೇಶ್, ಕೋಶಾಧಿಕಾರಿ ಅಜಿತ್ ಶೆಟ್ಟಿ, ಉದ್ಯಮಿಗಳಾದ ಸೋಮು, ಲೋಕೇಶ್ ಭಂಡಾರಿ, ಮತ್ತಿತರು ಉಪಸ್ಥಿತರಿದ್ದರು.
ಲೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿ, ಕುಮಾರ್ ವಂದಿಸಿದರು.


