ಮೀರ್ ಪುರ್: ಟಿ20 ವಿಶ್ವಕಪ್ ಫೈನಲ್’ಗೆ ಶ್ರೀಲಂಕಾ ಪ್ರವೇಶ ಪಡೆದಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಡಕ್’ವರ್ತ್ ಲೂಯಿಸ್ ನಿಯಮದಡಿ ಲಂಕಾ 27 ರನ್’ಗಳಿಂದ ಜಯ ಸಾಧಿಸಿತು. ಈ ಮೂಲಕ ಲಂಕಾ ಮೂರನೇ ಬಾರಿ ಟಿ20 ವಿಶ್ವಕಪ್ ಫೈನಲ್’ಗೆ ಪ್ರವೇಶ ಪಡೆದ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯ್ತು. ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಶ್ರೀಲಂಕಾ ತಂಡ, ಸ್ಪೋಟಕ ಆರಂಭ ಕಂಡಿತು. ಆರಂದಲ್ಲೇ ಕುಸಾಲ್ ಪೆರೇರ ಮತ್ತು ದಿಲ್ಷಾನ್ ಅಬ್ಬರಿಸಿದರು. ಮೊದಲ ವಿಕೆಟ್’ಗೆ 41 ರನ್’ಗಳ ಜೊತೆಯಾಟವಾಡಿದರು. 26 ರನ್ಗಳಿಸಿದ ಕುಸಾಲ ಪೆರೆರ ಮೊದಲನೆಯವರಾಗಿ ಔಟಾದರು. ಪೆರೇರಾ ಔಟಾಗಿದ್ದೇ ತಡ ಪಟಪಟನೇ ಮಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕರ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು. ದಿಲ್ಷಾನ್ ಜೊತೆಗೂಡಿದ ಲಾಹಿರು ತಿರುಮನ್ನೆ ನಾಲ್ಕನೇ ವಿಕೆಟ್’ಗೆ ಆಕರ್ಷಕ 42 ರನ್ ಸೇರಿಸಿದರು.
ಮೈದಾನದ ತುಂಬೆಲ್ಲಾ ಅದ್ಭುತ ಹೊಡೆತಗಳಿಂದ ಮಿಂಚಿದ ದಿಲ್ಷಾನ್ 39 ರನ್ ಗಳಿಸಿ, ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ದಿಲ್ಷಾನ್ ನಂತರ ತಿರುಮನ್ನೆ ಅದ್ಭುತ ಆಟವಾಡಿದರು. ಏಂಜೆಲೋ ಮ್ಯಾಥ್ಯೂಸ್ ಜೊತೆಗೂಡಿ ರನ್ ಗತಿ ಏರಿಸಿದರು. 44 ರನ್ಗಳಿಸಿದ ಲಹಿರು ತಿರುಮನ್ನೆ ಐದನೆಯವರಾಗಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಏಂಜೆಲೋ ಮ್ಯಾಥ್ಯೂಸ್ ಆಕರ್ಷಕ 40 ರನ್ ಗಳಿಸಿದರು. ಈ ಮೂಲಕ ಲಂಕಾ 6 ವಿಕೆಟ್ ನಷ್ಟಕ್ಕೆ 160 ರನ್ ದಾಖಲಿಸಲು ಕಾರಣರಾದರು.
ಗೆಲ್ಲಲು ಬೇಕಾದ 161 ರನ್ ಬೆನ್ನತ್ತಿದ ವೆಸ್ಟ್ ಇಂಡೀಸ್ ಆರಂಭಿಕ ಆಘಾತಕ್ಕೆ ಒಳಗಾಯಿತು. ಕ್ರಿಸ್ ಗೇಲ್ ಮತ್ತು ಡ್ವೈನ್ ಸ್ಮಿತ್ ಅವರನ್ನ ಔಟ್ ಮಾಡುವ ಮೂಲಕ ಲಸಿತ್ ಮಾಲಿಂಗ ವಿಂಡೀಸ್’ಗೆ ಡಬಲ್ ಶಾಕ್ ನೀಡಿದರು. ಲೆಂಡ್ಲ್ ಸಿಮನ್ಸ್ ಕೂಡಾ ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರು. ಆರಂಭದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವಿಂಡೀಸ್ಗೆ ಮರ್ಲಾನ್ ಸ್ಯಾಮ್ಯೂಲ್ಸ್, ಡ್ವೈನ್ ಬ್ರಾವೋ ಆಸರೆಯಾದರು. ನಾಲ್ಕನೇ ವಿಕೆಟ್ಗೆ 43 ರನ್ ಸೇರಿಸಿದರು. ಆಕರ್ಷಕ 30 ರನ್’ಬಾರಿಸಿ ಬ್ರಾವೋ ಗಮನಸೆಳೆದರು. ಬ್ರಾವೋ ಔಟಾಗುತ್ತಿದ್ದಂತೆ ಆಲಿಕಲ್ಲು ಮಳೆಯಿಂದ ಆಟ ನಿಲ್ಲಿಸಬೇಕಾಯಿತು. ಆಗ ವಿಂಡೀಸ್ 13.5 ಓವರ್ನಲ್ಲಿ, 4 ವಿಕೆಟ್ ನಷ್ಟಕ್ಕೆ 77ರನ್ ಗಳಿಸಿತ್ತು. ಡಕ್’ವರ್ತ್ ಲೂಯಿಸ್ ನಿಯಮದ ಪ್ರಕಾರ ಲಂಕಾ 27 ರನ್’ಗಳಿಂದ ಜಯ ದಾಖಲಿಸಿತು. ಇನ್ನು, ಶುಕ್ರವಾರ ನಡೆಯಲಿರುವ ಎರಡನೇ ಸೆಮಿಫೈನಲ್’ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

