ಸುದ್ದಿ9 ಕೈಕಂಬ: ದಕ್ಷಿಣ ಕನ್ನಡ ಜಿಲ್ಲೆಗೆ ನರೇಂದ್ರ ಮೋದಿ ಸರಕಾರ ಸುಮಾರು 5000 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ವಿವಿಧ ರಸ್ತೆ ಕಾಮಗಾರಿಯನ್ನು ನಡೆಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಜೂ. 28 ಭಾನುವಾರ ಗುರುಪುರ ಕೈಕಂಬದ ಪ್ರೀಮಿಯರ್ ಹಾಲ್ ನಲ್ಲಿ ನಡೆದ ಮಂಗಳೂರ ಉತ್ತರ ಕ್ಷೇತ್ರದಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಗ್ರಾ.ಪಂ ಅಭ್ಯರ್ಥಿಗಳ ಹಾಗೂ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕೇವಲ ಒಂದು ವರ್ಷದ ಅವಧಿಯಲ್ಲಿ ನರೇಂದ್ರ ಮೋದಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದ ಅನುದಾನ ಅಮೋಘವಾದುದು. ಈಗಾಗಲೇ ರೂಪುರೇಷೆ ಸಿದ್ದಗೊಂಡಂತೆ ವಿವಿಧ ರಸ್ತೆ ಕಮಗಾರಿಗೆ ಈ ಅನುದಾನವನ್ನು ವಿನಿಯೋಗಿಸಲಾಗಿದೆ. ಮಂಗಳೂರಿನಿಂದ ಕಾರ್ಕಳಕ್ಕೆ ತೆರಳುವ ರಾ.ಹೆ. ಕಾಮಗಾರಿಗೆ 1800 ಕೋಟಿ ರೂ. ಬಿ.ಸಿ.ರೋಡ್ನಿಂದ ಹಾಸನಕ್ಕೆ ತೆರಳುವ ಹೆದ್ದಾರಿಗೆ 1400 ಕೋಟಿ ರೂ. ವೆಚ್ಚದಲ್ಲಿ ಶೀಘ್ರದಲ್ಲಿ ಕಾಮಗಾರಿ ನಡೆಸಲಾಗುವುದು, ಉಳಿದ ಹಣವನ್ನು ಜಿಲ್ಲೆಯ ವಿವಿಧ ಭಾಗದ ರಸ್ತೆ ಮೇಲ್ದರ್ಜೆ ಗೊಳಿಸಲು ವಿನಿಯೋಗಿಸಲಿದೆ ಎಂದು ವಿವರಿಸಿದರು.
ಕೇವಲ ಒಂದು ವರ್ಷದ ಅವಧಿಯಲ್ಲಿ ನರೇಂದ್ರ ಮೋದಿ ಸರಕಾರ ಸಾಧಿಸಿದ್ದು ಅಮೋಘ. ಯಾವ ಮೋದಿಗೆ ಅಮೇರಿಕಾ ಸರಕರ ವೀಸ ನಿರಾಕರಿಸಿತ್ತೋ ಅದೇ ಸರಕಾರ ಇಂದು ಮೋದಿಗೆ ಕೆಂಪು ಹಾಸಿನ ಸ್ವಾಗತ ನೀಡಿ ಆಹ್ವಾನಿಸಿದೆ. ಗಡಿತಂಟೆಯಲ್ಲಿ ತೊಡಗಿದ್ದ ಚೀನಾ ಸರಕಾರಕ್ಕೆ ನಿಮ್ಮ ಉತ್ಮನ್ನಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಹೇಳಿ ಚೀನಾದ ಬಾಯಿ ಮುಚ್ಚಿಸಿದ್ದಾರೆ. ಒಂದು ಕಾಲದಲ್ಲಿ ಭಾರತದ ಸೈನಿಕರನ್ನು ಪಾಕಿಸ್ತಾನ ಕೊಲ್ಲುತ್ತಿತ್ತು. ಆದರೆ ಇಂದು ಭಾರತಕ್ಕೆ ನುಗ್ಗಿದ ಭಯೋತ್ಪಾಕರನ್ನು ಮಯನ್ಮಾರ್ವರೆಗೆ ಅಟ್ಟಾಡಿಸಿ, ಕೊಂದು ತನ್ನ ಪ್ರತೀಕಾರ ತೀರಿಸಿತ್ತು.
ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಜೀವ ವಿಮೆ ಯೋಜನೆ, ಗ್ಯಾಸ್ ಸಬ್ಸಿಡಿ, ಇದೆಲ್ಲಾ ನರೇಂದ್ರ ಮೋದಿಯವರ ಒಂದು ವರ್ಷದ ಸಾಧನೆಯಾಗಿದೆ ಎಂದು ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ ಸೋತವರು ಯಾರೂ ಕೂಡಾ ಧೃತಿಗೆಡುವುದು ಬೇಡ. ಸೋತವರು ನಿಜವಾಗಿಯೂ ಗೆದ್ದಂತೆ. ನಾನೂ ಕೂಡಾ ಕಳೆದ ಚುನಾವಣೆಯಲ್ಲಿ ಸೋತಿದ್ದೇನೆ ಸೋಲು ಶಾಶ್ವತವಲ್ಲ ಎಂದು ವಿವರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಳಿನ್ ಕುಮಾರ್ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ನಾಗರಾಜ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾದ್ಯಕ್ಷ ಉಮನಾಥ್ ಕೋಟ್ಯಾನ್, ಬಿಜೆಪಿ ಮುಖಂಡರಾದ ರಾಜೇಶ್ ನಾಯಕ್ ಉಳಿಪಾಡಿ ಗುತ್ತು, ದ.ಕ. ಜಿ. ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಕಿಶೋರ್ ರೈ ಮುಂತಾದ ಪಕ್ಷದ ಪ್ರಮುಕರು ಉಪಸ್ಥಿತರಿದ್ದರು. ರಾಜೀವ ಶೆಟ್ಟಿ ಕಲ್ಲಾಜೆ ಸ್ವಾಗತಿಸಿದರು. ಜನಾರ್ದನ ಗೌಡ ಪ್ರಾಸ್ತಾವಿಕ ಮಾತನಾಡಿದರು. ಗೋಕುಲ್ದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಉತ್ತರ ವಿಧಾನ ಸಭಾ ಕ್ಷೇತ್ರದ ಗ್ರಾಮಪಂಚಾಯತ್ ಗಳ ಚುನಾವಣೆಯಲ್ಲಿ ಗೆದ್ದ ಪಂ. ಸದಸ್ಯರನ್ನು ಹಾಗೂ ಕಾರ್ಯಕರ್ತರನ್ನು ಅಭಿನಂದಿಸಲಾಯಿತು. ಜಿಲ್ಲೆಯ ನಂ.1 ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.

















