ಬಂಟ್ವಾಳ: ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳು ಕಾಲೇಜಿನ ಜೊತೆಗಿನ ಸಂಬಂಧವನ್ನು ಉತ್ತಮವಾಗಿ ಮುಂದುವರಿಸಿಕೊಂಡು ಹೋಗಿ ಕಾಲೇಜಿನ ಘನತೆಯನ್ನು ಇಮ್ಮಡಿಗೊಳಿಸಬೇಕು. ಕೇವಲ ಆರ್ಥಿಕವಾಗಿ ಮಾತ್ರವಲ್ಲದೆ, ಇತರ ರೀತಿಯಲ್ಲಿ ಕಾಲೇಜಿಗೆ ಹಳೇ ವಿದ್ಯಾರ್ಥಿಗಳ ಸಹಕಾರ ಅವಶ್ಯಕ. ಇದಕ್ಕಾಗಿ ವಿದ್ಯಾರ್ಥಿ ದೆಸೆಯಿಂದಲೇ ಕಾರ್ಯಪ್ರವೃತರಾಗಿ ಚಿಂತಿಸುವಂತವರಾಗಬೇಕು ಎಂದು ಡಾ|ಸೀತಾರಾಮ ಮಯ್ಯ ನಿಕಟಪೂರ್ವ ಪ್ರಾಂಶುಪಾಲರು ಎಸ್.ವಿ.ಎಸ್ ಕಾಲೇಜು, ಬಂಟ್ವಾಳ ಇವರು ಹೇಳಿದರು.
ಪ್ರಸ್ತುತ ಅಂತಿಮ ಪದವಿ ವಿದ್ಯಾರ್ಥಿಗಳನ್ನು ಹಳೇ ವಿದ್ಯಾರ್ಥಿ ಸಂಘಕ್ಕೆ ಆಮಂತ್ರಿಸುವ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಯುತರು ತಮ್ಮ ಮೂರು ದಶಕಗಳ ಸೇವೆಯಲ್ಲಿ ಹಳೇ ವಿದ್ಯಾರ್ಥಿಗಳ ಕೊಡುಗೆಯನ್ನು ತಮ್ಮ ಅನುಭವದ ಮಾತುಗಳೊಂದಿಗೆ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀ ಪಿ. ನಾರಾಯಣ ಕಾಮತ್ ಉಪಾಧ್ಯಕ್ಷ ಶ್ರೀ ಎನ್.ಲಕ್ಷಿನಾರಾಯಣ ಮಲ್ಯ, ಪದಾಧಿಕಾರಿಗಳಾದ ಶ್ರೀ ಪ್ರಕಾಶ್ ಬಾಳಿಗಾ, ಶ್ರೀ ಸರ್ವೋತ್ತಮ ಬಾಳಿಗ ಮತ್ತು ಶ್ರೀ ವಸಂತ ಪ್ರಭು ಇವರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಔಪಚಾರಿಕವಾಗಿ ಹಳೇ ವಿದ್ಯಾರ್ಥಿ ಸಂಘಕ್ಕೆ ಸ್ವಾಗತಿಸಿದರು. ಗೌರವಾನ್ವಿತ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅತಿಥಿಗಳಿಗೆ ಸ್ವಾಗತ ಕೋರಿದರು.
ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀ ರಮಾನಂದ ಭಟ್ ಇವರು ಪ್ರಾರ್ಥಿಸಿದರು. ಶ್ರೀ ವಸಂತ ಪ್ರಭು ವಂದಿಸಿದರು. ಶ್ರೀ ವಿನಾಯಕ ಪೈ ಕಾರ್ಯಕ್ರಮ ನಿರ್ವಹಿಸಿದರು.
