ಮಕ್ಕಳ ಸಂತಸವನ್ನು ಕಸಿಯದಿರಲಿ ಬರುತ್ತಿದೆ ಬೇಸಿಗೆ ಶಿಬಿರಗಳು
ಚಿತ್ರಕ್ಕೆ 100, ಸಂಗೀತಕ್ಕೆ 150, ನೃತ್ಯಕ್ಕೆ 200, ನಾಟಕಕ್ಕೆ 250, ಯಕ್ಷಗಾನಕ್ಕೆ 300…. ಎಲ್ಲವೂ ಬೇಕಿದ್ದರೆ ಒಂದು ಸಾವಿರ. ನಾಲ್ಕು ದಿನದ ಶಿಬಿರ. ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ……
ಇದು ಬೇಸಿಗೆ ಶಿಬಿರಗಳ ಬಗ್ಗೆ ಈಗ ಕೆಲವು ಖಾಸಗಿ ಶಾಲೆಗಳಿಂದ ಮಕ್ಕಳ ಮೂಲಕ ಮನೆಗೆ ರವಾನೆಯಾಗುವ ಸೂಚನಾ ಪತ್ರದ ಒಂದು ಮಾದರಿ. ಬೇಸಿಗೆ ಶಿಬಿರದ ಸೀಸನ್ ಆರಂಭವಾಗಿರುವ ಹಿನ್ನೆಲೆಯಲ್ಲಿ ಇದೀಗ ಅಲ್ಲಲ್ಲಿ ಇಂತಹ ಸೂಚನಾ ಪತ್ರಗಳು, ಕರಪತ್ರಗಳು, ಬ್ಯಾನರ್ಗಳು ಗಮನ ಸೆಳೆಯುತ್ತಿವೆ. ವಷರ್ಾರಂಭದಲ್ಲಿ ಫೀಸು ತೆತ್ತು, ವರ್ಷವಿಡೀ ಶಾಲೆಯೆಂಬ ಅಂಕಖಾನೆಯಲ್ಲಿ ಬಂಧಿಯಾಗಿ ಶಿಕ್ಷೆ ಅನುಭವಿಸುವ ಮಕ್ಕಳಿಗೆ ವರ್ಷದ ಕೊನೆಗೆ ಮತ್ತೊಮ್ಮೆ ಒಂದಷ್ಟು ದಿನಗಳಿಗೆ ಒಂದಷ್ಟು ಫೀಸು ಪಾವತಿಸಿ, ಬೇಸಿಗೆ ಶಿಬಿರ ಎಂಬ ಶಿಕ್ಷಾಲಯದಲ್ಲಿ ಪಳಗಬೇಕಾದ ದುಸ್ಥಿತಿ ಕೆಲವೆಡೆ ಸದ್ದಿಲ್ಲದೆ ನಿಮರ್ಾಣಗೊಳ್ಳುತ್ತಿದೆ. ಹಾಗೆಂದು ಎಲ್ಲಾ ಶಾಲೆಗಳು ಬೇಸಿಗೆ ಶಿಬಿರ ನಡೆಸುವುದಿಲ್ಲ. ನಡೆಸಿದರೂ ಮಕ್ಕಳಿಂದ ವಂತಿಗೆ ಪಡೆಯುವುದಿಲ್ಲ. ಅಲ್ಲದೇ ಎಲ್ಲಾ ಶಿಬಿರಗಳು ಶಿಕ್ಷಾಲಯಗಳಲ್ಲ. ಕೆಲವೊಂದು ಮುಕ್ತಾಲಯಗಳು ಹೌದು. ಆದರೆ ಬಹುತೇಕ ಶಾಲೆಗಳಲ್ಲಿ ನಡೆಯುವ ಇಂತಹ ಬೇಸಿಗೆ ಶಿಬಿರಗಳು ಡೊನೇಶನ್ ಹಾವಳಿ ಹಾಗೂ ಸ್ಪಧರ್ೆಯ ಪ್ರತಿರೂಪಗಳಾಗುತ್ತಿರುವುದು ಮಾತ್ರ ದುರಂತವೇ.
ಇಂದು ಬಹುತೇಕ ಕಡೆಗಳಲ್ಲಿ ಶಾಲೆಯ ಬದಲಾಗಿ ಸಂಘ-ಸಂಸ್ಥೆಗಳೇ ಇಂತಹ ಶಿಬಿರವನ್ನು ಆಯೋಜಿಸುತ್ತಿದ್ದು, ಇಲ್ಲಿಯೂ ಶುಲ್ಕ, ಡೊನೇಷನ್ ವಸೂಲಿ ನಡೆಯುತ್ತಿರುವುದು ಕಂಡಾಗ, ಇದು ಶಿಬಿರದ ತಾಣವೋ, ವ್ಯಾಪಾರ ಕೇಂದ್ರವೋ ಎಂಬ ಪ್ರಶ್ನೆ ಕಾಡುತ್ತದೆ. ಹಾಗೆಂದು ಹಣ ಇದೆ, ಕೊಡುತ್ತಾರೆ ಬಿಡಿ, ಎಂದು ಹೇಳಬಹುದಾದರೂ ಹಣ ಇಲ್ಲದವರ ಮಕ್ಕಳ ಪಾಡೇನು ? ಆ ಮಕ್ಕಳಿಗೆ ಶಿಬಿರದ ಸಂತಸ ಸಂಭ್ರಮ ಅನುಭವಿಸುವ ಹಕ್ಕಿಲ್ಲ ಎಂದು ಅರ್ಥವೇ ? ಎಂದು ಗಂಭೀರವಾಗಿ ಯೋಚಿಸಬೇಕಾಗಿದೆ.

ಘೋರ ದುರಂತವಲ್ಲವೇ?:
ಅಷ್ಟೋ-ಇಷ್ಟೋ ಫೀಸು ತೆಗೆದುಕೊಂಡರೂ ಕೆಲವು ಶಿಬಿರಗಳಿಂದ ಮಕ್ಕಳು ಹೊಸದಾಗಿ ಏನನ್ನು ಕಲಿಯುತ್ತಾರೆ ? ಮಕ್ಕಳಿಗೆ ಇಷ್ಟವಿರುವ, ಆಸಕ್ತಿ ಇರುವ ವಿಷಯಗಳನ್ನು ಆಯ್ಕೆ ಮಾಡಿ ಮುಕ್ತವಾಗಿ ಕಲಿಯುವ ವಾತಾವರಣ ಎಷ್ಟು ಶಿಬಿರಗಳಲ್ಲಿ ಇದೆ ? ಶಾಲೆಯಲ್ಲೂ, ಮನೆಯಲ್ಲೂ ತೋರ್ಪಡಿಸಲಾಗದ-ತೋರ್ಪಡಿಸಲು ಅವಕಾಶವಾಗದ ಮಗುವಿನೊಳಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಎಷ್ಟು ಶಿಬಿರಗಳು ವೇದಿಕೆಯಾಗುತ್ತಿದೆ ? ಇಂತಹ ಹತ್ತಾರು ಪ್ರಶ್ನೆಗಳನ್ನು ಶಿಬಿರಕ್ಕೆ ಮಕ್ಕಳನ್ನು ಕಳಿಸುವ ಮುನ್ನ ಪೋಷಕರು ಇಂದು ಯೋಚಿಸಿದರೆ ಉತ್ತಮ. ಇಲ್ಲದಿದ್ದಲ್ಲಿ ಮಕ್ಕಳ ರಜೆಯ ಸಂಭ್ರಮವನ್ನು ಕಸಿದುಕೊಳ್ಳುವುದರಲ್ಲಿ ಪೋಷಕರು ತಮ್ಮ ಪಾಲನ್ನು ನೀಡಿದಂತಾಗುತ್ತದೆ. .
ಈಗಿನ ವಷರ್ಾಂತ್ಯ ಮಕ್ಕಳ ಪಾಲಿಗೆ ಸಂಭ್ರಮವಲ್ಲ. ಪರೀಕ್ಷೆಯನ್ನು ರಾಕ್ಷಸನಂತೆ ಚಿತ್ರಿಸಿ, ಮಕ್ಕಳ ಮನಪಟಲದಲ್ಲಿ ಭಯವನ್ನು ಸೃಷ್ಟಿಸಿ, ಮಕ್ಕಳ ವರ್ಷಾಂತ್ಯದ ಸಂತಸವನ್ನು ಕಸಿದುಕೊಂಡವರು ನಾವು. ಈ ಭಯದಿಂದ ಒಂದಷ್ಟು ಹೊರ ಬರುತ್ತಿರುವಾಗಲೇ ಮಕ್ಕಳಿಗೆ ಎದುರಾಗುವುದು ಈ ಬೇಸಿಗೆ ಶಿಬಿರಗಳು. ಈ ಶಿಬಿರಗಳಾದರೂ ಮಕ್ಕಳ ಭಯವನ್ನು ಹೋಗಲಾಡಿಸಿ, ಮುಕ್ತ ಕಲಿಕೆಗೆ ಅವಕಾಶ ಕಲ್ಪಿಸಿ, ಎಲ್ಲರನ್ನೂ ಒಂದಾಗಿಸಿ, ಸಂತಸದ ಸಂಭ್ರಮದ ವಾತಾವರಣ ಕಲ್ಪಿಸಿದರೆ ಮಕ್ಕಳ ಪುಣ್ಯ. ಬದಲಾಗಿ ಅನೇಕ ಶಿಬಿರಗಳು ಮಕ್ಕಳ ರಜೆಯ ಮಜದ ಹಕ್ಕನ್ನು ಕಸಿದು, ಸಜೆ ನೀಡುವ ತಾಣಗಳಾಗುತ್ತಿರುವುದು ಮಕ್ಕಳ ಪಾಲಿನ ಘೋರ ದುರಂತ.
ಏನನ್ನೂ ಕಲಿಸುತ್ತಾರೆ?:
ಇಂದು ಬೇಸಿಗೆ ಶಿಬಿರ, ರಜಾ ಶಿಬಿರ, ಕಲಿಕಾ ಶಿಬಿರ, ಸೃಜನಶೀಲ ಶಿಬಿರ, ರಂಗ ಶಿಬಿರ ಎಂಬ ಹೆಸರಿನಲ್ಲಿ ನಡೆಯುವ ಅನೇಕ ರಜಾ ಶಿಬಿರಗಳು ನಿಜಾರ್ಥದಲ್ಲಿ ಮಕ್ಕಳಲ್ಲಿ ಬಿಸಿ ಏರಿಸುತ್ತಿದೆ ವಿನಃ ಮಕ್ಕಳನ್ನು ಮಾನಸಿಕವಾಗಿ, ದೈಹಿಕವಾಗಿ ತಂಪಾಗಿಸುತ್ತಿಲ್ಲ. ಕೆಲವೊಂದು ಬೇಸಿಗೆ ಶಿಬಿರಗಳಲ್ಲಿ ಈಗಲೂ ನಡೆಯುತ್ತಿರುವುದು ಚಿತ್ರಕಲೆ, ಸಂಗೀತ, ನಾಟಕ, ನೃತ್ಯ, ಯಕ್ಷಗಾನ, ಬ್ಯಾಡಿಂಟನ್, ಕೇರಂ, ಟೆನ್ನಿಸ್ ಇತ್ಯಾದಿ ಚಟುವಟಿಕೆಗಳು. ಅಥರ್ಾತ್ ಮಕ್ಕಳಿಗೆ ಇದೇನೂ ಹೊಸ ಕಲಿಕೆಯಲ್ಲ. ಇಲ್ಲಿ ನಡೆಯುವುದು ತರಬೇತಿ, ಕೋಚಿಂಗ್. ಬಹುತೇಕ ಶಾಲೆಗಳಲ್ಲಿ ನಡೆಯುವ ಇಂತಹ ಶಿಬಿರಗಳಲ್ಲಿ ಹೊಸತೇನೂ ಇರುವುದಿಲ್ಲ. ಶಾಲೆಯಲ್ಲಿ ವರ್ಷವಿಡೀ ಆಟ-ಪಾಠ ಎಂಬ ಹೆಸರಿನಲ್ಲಿ ಕಲಿತದ್ದನ್ನೇ ಮತ್ತೆ ಶಿಬಿರದಲ್ಲಿ ಮಕ್ಕಳು ನಾಲ್ಕೈದು ದಿನ ಕಲಿಯಬೇಕು. ಇಷ್ಟವಿರಲಿ, ಇಲ್ಲದಿರಲಿ ಶಿಬಿರದ ನಿಯಮದಂತೆ ಮಕ್ಕಳು ಇಲ್ಲಿಯೂ ಎಲ್ಲವನ್ನೂ ಕಲಿಯಬೇಕು. ಹೀಗಾದಾಗ ಇದು ಮಕ್ಕಳ ಶಿಬಿರಗಳಾಗುವುದು, ಮುಕ್ತ ಕಲಿಕೆಯ ತಾಣಗಳಾಗುವುದು, ಸ್ವ-ಆಸಕ್ತಿಯ ಸ್ವ-ಕಲಿಕೆಯ ಜಾಗವಾಗುವುದಾದರೂ ಹೇಗೆ ?
ಶಿಬಿರವೋ ಸ್ಪರ್ಧೆಯೋ?:
ಹಾಗೆಂದು ಇಂತಹ ಶಿಬಿರಗಳಿಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳು ಬರುತ್ತಾರೆ. ಆದರೆ ಇಲ್ಲಿ ಮಕ್ಕಳು ಹೊಸ ಸಂಪನ್ಮೂಲ ವ್ಯಕ್ತಿಗಳಿಂದ ಹೊಸ ಸಂಪನ್ಮೂಲವನ್ನು ಪಡೆಯುವ ಬದಲಾಗಿ ಶಾಲೆಯಲ್ಲಿ ಶಿಕ್ಷಕರಿಂದ ಕಲಿತ ಚಟುವಟಿಕೆಯನ್ನೇ ಮತ್ತೇ ಹೊಸ ಮಾಸ್ಟರ್ಗಳಿಂದ ಕಲಿಯುವಂತಾಗುವುದು ನಿಜಕ್ಕೂ ವಿಷಾದನೀಯ. ಇಂತಹ ಶಿಬಿರಗಳ ಉದ್ದೇಶವೇ ಮಕ್ಕಳಿಗೆ ಹೊಸತನ್ನು ಕೊಡುವುದಲ್ಲ. ಬದಲಾಗಿ ಶಾಲೆಯಲ್ಲಿ ಇದ್ದದ್ದನ್ನೇ ಗಟ್ಟಿ ಮಾಡಿಸಿ, ಒಂದಷ್ಟು ಕಸರತ್ತಿನ ತರಬೇತಿಯೊಂದಿಗೆ ಮುಂದಿನ ವರ್ಷವಿಡೀ ನಡೆಯುವ ಸ್ಪರ್ಧೆಗಳನ್ನು ಎದುರಿಸಲು, ಮಕ್ಕಳನ್ನು ತಯಾರು ಮಾಡುವುದು. ಸ್ಪರ್ಧೆಯ ಗೆಲುವಿನ ಉದ್ದೇಶವನ್ನಿಟ್ಟುಕೊಂಡೇ ನಡೆಯುವ ಇಂತಹ ಶಿಬಿರಗಳು ಮಕ್ಕಳಲ್ಲಿ ಮತ್ತಷ್ಟು ಭಯವನ್ನು ಹುಟ್ಟಿಸುತ್ತದೆ. ಮಕ್ಕಳ ಸಂತಸದ ಹಕ್ಕನ್ನು ಕಸಿಯುತ್ತದೆ. ಮಕ್ಕಳ ಪಾಲಿಗೆ ಇವೆಲ್ಲವೂ ಹೊಸ ಅನುಭವವಾಗದೇ ಹಳೆಯದ್ದನ್ನೇ ಹೇರುವ ಕ್ಲಾಸ್ರೂಂ ಆಗುತ್ತದೆ. ಮತ್ತೊಂದು ಶಾಲೆಯಾಗುತ್ತದೆ. ಮಕ್ಕಳು ಇಲ್ಲಿಯೂ ಸ್ವತಂತ್ರರಾಗಿರುವುದಿಲ್ಲ. ಕೋಣೆಯೊಳಗಿನ ಬಂಧಿಯಾಗುತ್ತಾರೆ ಅಷ್ಟೇ.ಮಕ್ಕಳನ್ನೂ ಮತ್ತಷ್ಟು ಬಂಧಿಸುವ, ತೆರೆದುಕೊಳ್ಳಲು ಅವಕಾಶವಿಲ್ಲದ ಇಂತಹ ಶಿಬಿರಗಳು ಬೇಕೇ ಎಂದು ಪೋಷಕರು ಆಲೋಚಿಸಬೇಕಾಗಿದೆ.
ಪಲಿತಾಂಶವೇನು:
ಶಾಲೆಗೆ ಮಕ್ಕಳನ್ನು ಕಲಿಸಿ ಪಲಿತಾಂಶವನ್ನು ಬಯಸುವ ಪೋಷಕರು ಶಿಬಿರಗಳಿಂದಲೂ ಪಲಿಶಾಂಶವನ್ನೇ ಬಯಸುವುದು ಸರಿಯಲ್ಲ. ಯಾವುದೇ ಶಿಬಿರಗಳಲ್ಲಿ ನಾಲ್ಕೈದು ದಿನಗಳಲ್ಲಿ ಯಾವುದೇ ಮಗುವನ್ನು ಸಂಗೀತಗಾರನೋ, ಚಿತ್ರ ಕಲಾವಿದನೋ, ನೃತ್ಯ ಕಲಾವಿದನೋ, ನಾಟಕ ಕಲಾವಿದನೋ ಆಗಿ ರೂಪಿಸಲು ಸಾಧ್ಯವಿಲ್ಲ. ಆಗೆ ಆಗುವುದು ಸಾಧುವೂ ಅಲ್ಲ. ನಿಮ್ಮಲ್ಲಿ ಏನನ್ನು ಕಲಿಸುತ್ತಾರೆ, ಮಕ್ಕಳಿಗೆ ಏನು ಸಿಗುತ್ತದೆ ಶಿಬಿರ ಇದೆ ಎಂದಾಗಲೇ ಕೆಲವು ಪೋಷಕರ ಬಾಯಿಯಿಂದ ಪ್ರಶ್ನೆಗಳು ಇದು. ಶಿಬಿರ ಮುಗಿಯುತ್ತಿದ್ದಂತೆ ಎನನ್ನು ಕಲಿತಿದ್ದಿ, ಎನನ್ನು ತಂದಿದ್ದಿ, ಕಲಿತದ್ದನ್ನು ಮಾಡಿ ತೋರಿಸು…ಎಂದೆಲ್ಲಾ ಮಕ್ಕಳ ಮುಂದೆ ಪೋಷಕರ ಸವಾಲುಗಳು. ಅಂದರೆ ಶಿಬಿರಕ್ಕೆ ಹೋಗುವ ಮಕ್ಕಳು ಪೋಷಕರ ಪಾಲಿಗೆ ಈ ರೀತಿಯ ಪ್ರೊಡಕ್ಟ್, ರಿಸಲ್ಟ್ ತರಬೇಕಾದ ಯಂತ್ರಗಳಾಗುವುದು ನಿಜಕ್ಕೂ ಶೋಚನೀಯ. ಶಿಬಿರದಲ್ಲಾದರೂ ಮಕ್ಕಳನ್ನು ಮಕ್ಕಳ ಹಾಗೆ ಇರಲು ಬಿಡಬೇಕಾದುದು ಇಂದಿನ ತುತರ್ು ಅಗತ್ಯ,
ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳಿಂದ ಕಣ್ಣಿಗೆ ಕಾಣುವ, ಕಿವಿಗೆ ಕೇಳುವ ಪಲಿತಾಂಶವನ್ನಷ್ಟೇ ಬಯಸದೇ-ಮಕ್ಕಳು ಅರಳುವ ಜೀವಂತ ಕುಸುಮಗಳು, ಅವರಿಗೂ ಕನಸಿದೆ, ಭಾವನೆ ಇದೆ, ಖುಷಿ ಪಡುವ ಹಕ್ಕಿದೆ, ಕಲ್ಪನೆ ಇದೆ, ಅವರಿಗೂ ಆಟ-ತುಂಟಾಗಳು ಅಗತ್ಯವಿದೆ, ಒಂದಷ್ಟು ದಿನವಾದರೂ ಅವರು ಎಲ್ಲಾ ಒತ್ತಡಗಳಿಂದ ಮುಕ್ತರಾಗಿ ಬಾಲ್ಯವನ್ನು ಅನುಭವಿಸಿ ಸಂತಸ ಅನುಭವಿಸಿದರಷ್ಟೇ ಸಾಕು ಎಂದು ಪೋಷಕರು ಭಾವಿಸಬೇಕಾಗಿದೆ. ಪೋಷಕರು ಶಿಬಿರಗಳಿಂದ ಇಷ್ಟನ್ನೇ ನಿರೀಕ್ಷಿಸಿ ಇದು ಒಂದು ಕಲಿಕೆಯೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಮಕ್ಕಳ ಪಾಲಿಗಂತೂ ಇಂತಹ ಸಂತಸದ ಬದುಕು ಅನಿವಾರ್ಯವೇ ಆಗಿದೆ.
ಶಿಬಿರವೆಂದರೆ ಶಾಲೆಯೇ?:
ಶಿಬಿರಗಳು ಯಾವುದೇ ಹೆಸರಿನಲ್ಲಿ ನಡೆಯಲಿ, ಆದರೆ ಅದು ಮತ್ತೊಂದು ಶಾಲೆಯಾಗುವುದು ಸರಿಯಲ್ಲ. ಅಲ್ಲೂ ಓದು, ಬರೆ, ಮಾಡು, ಉತ್ತರಿಸು ಎಂಬ ಆದೇಶಗಳು ಮಕ್ಕಳಿಗೆ ಬೇಕಾಗಿಲ್ಲ. ಶಿಬಿರಗಳೆಂದರೆ ಮಕ್ಕಳಲ್ಲಿ ಕುತೂಹಲ ಮೂಡಿಸುವ, ಪ್ರಶ್ನಿಸುವ ಮನೋಭಾವ ಬೆಳೆಸುವ, ಚೈತನ್ಯ ನೀಡುವ, ಸಂತಸ ಚಿಮ್ಮಿಸುವ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ-ಪ್ರೋತ್ಸಾಹಿಸುವ, ಮಕ್ಕಳು ತಮಗಿಷ್ಠವಾದುದನ್ನು ಆಯ್ಕೆ ಮಾಡಿ ಕಲಿಯುವ ಮುಕ್ತ ವಲಯ.
ಶಿಬಿರಗಳಲ್ಲಿ ಮೇಲು-ಕೀಳು, ಶ್ರೇಷ್ಠ-ಕನಿಷ್ಠ, ಹೆಣ್ಣು-ಗಂಡು, ಬಡವ-ಬಲ್ಲಿದ ಮೊದಲಾದ ತಾರತಮ್ಯದ ಗೋಡೆ ಇರಬಾರದು. ಇದು ಎಲ್ಲರನ್ನೂ ಒಂದಾಗಿಸುವ, ಎಲ್ಲರೂ ಸಮಾನರೆಂದು ಕಾಣುವ, ಎಲ್ಲರೂ ಮಾತಾನಾಡುವ ಪ್ರೀತಿಯ ಮನೆ. ಇಲ್ಲಿ ಶಿಕ್ಷೆ, ಒತ್ತಡ, ಶಿಸ್ತಿನ ಭಯವಿಲ್ಲ. ಇಂತದ್ದನ್ನೇ ಕಲಿಯಬೇಕೆಂಬ ಹಠವೂ ಇಲ್ಲ. ತನಗೆ ಗೊತ್ತಿದ್ದನ್ನು ಮಕ್ಕಳಿಗೆ ಕಲಿಸಲೇಬೇಕೆಂಬ ಚಟವೂ ಸರಿಯಲ್ಲ. ಮಕ್ಕಳ ಮುಂದೆ ಎಲ್ಲಾ ಸಾಧ್ಯತೆಗಳನ್ನು ತೆರೆದಿಡುವ ಶಿಬಿರವೆಂಬ ಜಾಗದಲ್ಲಿ ಸಂಘಟಕರು ಎಲ್ಲಾ ರೀತಿಯ ಅವಕಾಶಗಳನ್ನು ಸೃಷ್ಟಿಸಬೇಕೇ ವಿನಃ ಮಕ್ಕಳಿಗೆ ಎಲ್ಲವನ್ನೂ ಹೇರುವುದಲ್ಲ. ಅಲ್ಲಿ ಮಕ್ಕಳಿಗೇನು ಬೇಕೋ ಕಲಿಯುತ್ತಾರೆ, ಹಾಡುತ್ತಾರೆ, ಬೆರೆಯುತ್ತಾರೆ, ಆಟವಾಡುತ್ತಾರೆ. ಇದರಿಂದಲೇ ಒಂದಷ್ಟು ಹೊಸತನ್ನು ಕಲಿಯುತ್ತಾರೆ. ಅನುಭವಿಸುತ್ತಾರೆ. ಇದೇ ಶಿಬಿರಗಳಿಂದ ಆಗಬೇಕಾದದ್ದು ಕೂಡ.
ಪೋಷಕರು ಯಾಕೆ ಬರುತ್ತಿಲ್ಲ?:
ಇಂತಹ ಶಿಬಿರಗಳಿಗೆ ಕೆಲವೆಡೆ ಪೋಷಕರು ಬರುತ್ತಿಲ್ಲ. ಕೆಲವರು ಉದ್ಘಾಟನೆಗೊಮ್ಮೆ ಬಂದು, ಕೊನೆಗೆ ಮಕ್ಳಳ ಪಲಿತಾಂಶ, ಪ್ರದರ್ಶನ ನೋಡಲು ಬರುತ್ತಾರೆ. ಮಕ್ಕಳ ಶಿಬಿರಗಳೆಂದರೆ ಖುಷಿ ಪಡುವ ಪೋಷಕರೂ ಇದ್ದಾರೆ, ಮನೆಯಲ್ಲಿ ಉಪದ್ರ ಬೇಡ-ಅಲ್ಲಿಯಾದರೂ ನಾಲ್ಕು ದಿನ ಇರಲಿ ಎಂದು ಮಕ್ಕಳನ್ನು ಶಿಬಿರಕ್ಕೆ ಕಳುಹಿಸಿ ಕೈ ತೊಳೆಯುವವರು ಇದ್ದಾರೆ. ಈ ಮನಸ್ಥಿತಿ ಬದಲಾಗಬೇಕು. ಪೋಷಕರು ಒಂದಷ್ಟು ದಿನ ಮಕ್ಕಳೊಡನೆ ಶಿಬಿರದಲ್ಲಿ ಇದ್ದು ಖುಷಿ ಅನುಭವಿಸುವುದೆಂದರೆ ಮಕ್ಕಳಿಗೆ ಅದಕ್ಕಿಂತ ದೊಡ್ಡ ಕಾಣಿಕೆ ಏನೂ ಬೇಕಾಗಿಲ್ಲ. ಪೋಷಕರು ಶಿಬಿರದಲ್ಲಿ ಮಕ್ಕಳ ಜತೆ ಇದ್ದರೆ ತಮ್ಮ ಮಕ್ಕಳ ಆಸಕ್ತಿ, ಪ್ರತಿಭೆ, ಕೌಶಲ್ಯವನ್ನು ಅರಿಯಲು ಸಾಧ್ಯವಾಗುತ್ತದೆ, ಅದೇ ಹಾದಿಯಲ್ಲಿ ಮುಂದೆ ಅವರನ್ನು ಬೆಳೆಸಲು ಸಹಕಾರಿಯಾಗುತ್ತದೆ.
ಎಲ್ಲೆಲ್ಲೂ ನಡೆಯಲಿ:
ರಜಾ ಶಿಬಿರಗಳು ಕಾಂಕ್ರೀಟ್ ಕಟ್ಟಡದೊಳಗೇ ನಡೆಯಬೇಕೆಂದಿಲ್ಲ. ಹೊರ ಪ್ರಪಂಚ, ಪರಿಸರದ ಸಂಬಂಧವನ್ನೇ ಕಳೆದುಕೊಳ್ಲುತ್ತಿರುವ ಇಂದಿನ ಮಕ್ಕಳಿಗೆ ಇಂದಿನ ಶಿಬಿರಗಳು ಒಂದಷ್ಟು ಪರಿಸರ ಪ್ರೀತಿಯನ್ನು ಕಟ್ಟಿಕೊಡಬೇಕು. ಹೊರ ಜಗತ್ತಿನೊಡನೇ ಬೆರೆತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು. ಮರದ ಬುಡದಲ್ಲೋ, ನದಿ ತೀರದಲ್ಲೋ, ಗುಡ್ಡೆಯಲ್ಲೋ, ಅನಾಥಾಶ್ರಮಗಳಲ್ಲೋ, ಪೃಕೃತಿ ಸಹಜ ಪರಿಸರದಲ್ಲೋ ಶಿಬಿರಗಳು ಸಂಘಟಿಸುವ ಮೂಲಕ ಮಕ್ಕಳಿಗೆ ಪ್ರಾಕ್ಟಿಕಲ್ ಅನುಭವ ದೊರೆಯುವಂತಾಗಬೇಕು. ಇದರಿಂದಲೇ ಮಕ್ಕಳು ಸಾಕಷ್ಟು ಕಲಿಯುತ್ತಾರೆ, ಬೆಳೆಯುತ್ತಾರೆ…
ಲೇಖನ: ಗೋಪಾಲ ಅಂಚನ್
