oppo_2

ಬಂಟ್ವಾಳ: ಇಲ್ಲಿಗೆ ಸಮೀಪದ  ಆರಂಬೋಡಿ ಗ್ರಾಮದ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದ ಗದ್ದೆಯಲ್ಲಿ ದೊರಕಿದ ಪ್ರಾಚೀನ ಶಿಲಾಶಾಸನ ೭ನೇ ಶತಮಾನದ ಮಧ್ಯಭಾಗದ್ದಾಗಿದ್ದು,ಇದರ  ಪ್ರಕಾರ  ಸುಮಾರು ೧೨೦೦ ವರ್ಷಗಳ ಹಿಂದೆ ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ ಎಂದು ಪುರಾತತ್ವ ಇತಿಹಾಸ ತಜ್ಞ, ಸಂಶೋಧಕರಾದ   ಡಾ.ವೈ. ಉಮಾನಾಥ ಶೆಣೈ ಅವರು ತಿಳಿಸಿದ್ದಾರೆ.

oppo_2

ದೇವಸ್ಥಾನದ ಪಕ್ಕದ ಪಾಳು ಬಿದ್ದ ಗದ್ದೆಯಲ್ಲಿದ್ದ ಶಿಲೆಕಲ್ಲು ಸುಮಾರು ನಾಲ್ಕು ಅಡಿ ಎತ್ತರವಿದ್ದು, ಎರಡು ಅಡಿಯಷ್ಟು ಕಲ್ಲು  ಭೂಮಿಯೊಳಗೆ ಹೂತು ಹೋಗಿತ್ತು.ಪಾಳು ಭೂಮಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು ಶಿಲೆಯನ್ನು ಮರೆ ಮಾಡಿತ್ತು. ಅದನ್ನು ಹೊರತೆಗೆಯುವಲ್ಲಿ ಈ ಹಿಂದೆ ಪ್ರಯತ್ನಗಳು ನಡೆದಿದ್ದು, ಸುಮಾರು ಎರಡು ತಿಂಗಳ ಹಿಂದೆ ಹೊರ ತೆಗೆಯಲಾಗಿತ್ತು. ಬಳಿಕ ಪತ್ತೆಯಾದ ಶಿಲಾಶಾಸನದ ಅಧ್ಯಯನ ನಡೆಸಿದ ಶೆಣೈ ಅವರು
ಸೋಮವಾರ  ದೇವಸ್ಥಾನದಲ್ಲಿ ಈ ಬಗ್ಗೆ ಭಕ್ತರ ಹಾಗೂ ಗ್ರಾಮಸ್ಥರನ್ನೊಳಗೊಂಡ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಶಿಲಾಶಾಸನದ ಅಕ್ಷರವನ್ನು ಅಧ್ಯಯನ ನಡೆಸಿದಾಗ ಸುಮಾರು ೮ ನೇ ಶತಮಾನದಲ್ಲಿ ಇಡೀ ತುಳುನಾಡನ್ನು ಆಳುತ್ತಿದ್ದ ಅಲೂಪ ವಂಶದ ಪೃಥ್ವಿಂದ್ರ ಅರಸರು  ಈ ಶಾಸನವನ್ನು ಲಿಪಿಕಾರ ಹರಿಪಾದ ಎಂಬವರಿಂದ ಬರೆಸಿರುವುದು ಕಂಡು ಬಂದಿದೆ ಎಂದರು.
ಶಿಲಾಶಾಸನವನ್ನು ಹಳೇ ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟ  ಆರು ಪಂಕ್ತಿಗಳಲ್ಲಿದ್ದು, ಬರೆದ ಕಾಲ,ಶಕ,ಸಂವತ್ಸರ,ದಿನಾಂಕವನ್ನು ಉಲ್ಲೇಖಿಸಿಲ್ಲ, ಲಿಪಿಯ ವಿನ್ಯಾಸದಿಂದ ಇದನ್ನು ಕ್ರಿ.ಶ.೮ ನೇ ಶತಮಾನದ್ದು ಎಂದು ಖಚಿತಪಡಿಸಿದೆ ಎಂದರು.
ಈ ಸಂದರ್ಭದಲ್ಲಿ ಉದ್ಯಾವರ ಮತ್ತು ಮಂಗಳೂರನ್ನು ಆಳುತ್ತಿದ್ದ ಅರಸ ಪ್ರಥ್ವೀಂದ್ರ ಯಾನೆ ಚಿತ್ರವಾಹನ ಅದಾಗಲೇ ಪೂಂಜ ದೇವಾಲಯಕ್ಕೆ ದೇಣಿಗೆ ಒದಗಿಸಿದ್ದು, ದೇವಸ್ಥಾನ ಮತ್ತು ಇಲ್ಲಿನ ನಾಗಬನದ ಜಮೀನಿನ  ಒಡೆತನದ ವಿವಾದವನ್ನು ದೇವರ ಪ್ರೇರಣೆಯೆಂಬಂತೆ ಬಗೆಹರಿಸಿ,ಗಡಿರೇಖೆಯನ್ನು ನಿರ್ಣಯಿಸಿಕೊಂಡು ಈ ಶಾಸನ ಬರೆಸಿರುವುದು ಕಂಡು ಬರುತ್ತಿದೆ ಎಂದು ವಿವರಿಸಿದರು.
ಭಾರತೀಯ ಶಾಸನ ಪರಂಪರೆಯಂತೆ ಪಶ್ಚಿಮ ಘಟ್ಟ ಮತ್ತು ಕರಾವಳಿ ಕರ್ನಾಟಕದ ಪರಿಸರ ಸಂರಕ್ಷಣೆಯ ಧಾರ್ಮಿಕ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ನಾಗಬನಗಳ ಪರಿಧಿಯನ್ನು ಅತಿಕ್ರಮಣವಾಗದಂತೆ ಕಾಯ್ದುಕೊಳ್ಳಲು ಶಿಲಾಶಾಸನಗಳನ್ನು ನೆಡುವ ಪದ್ಧತಿ ಇತ್ತು. ಆ ಪ್ರಕಾರ ದಕ್ಷಿಣದಲ್ಲಿರುವ ನಾಗಬನದಿಂದ ಉತ್ತರಕ್ಕಿರುವ ದೇವಾಲಯಕ್ಕಿರುವ ಉತ್ತರ ದಿಕ್ಕಿನಲ್ಲಿರುವ ದೇವಾಲಯದವರೆಗೆ ಇದ್ದ ಭೂಮಿಯು ನಾಗಬನದ ಒಡೆತನಕ್ಕೆ ಸೇರಿದ್ದೆಂದು ತಿಳಿಸಲಾಗಿದೆ.
 ದೈವದ ಪ್ರೇರಣೆ ಹಾಗೂ ಅನುಗ್ರಹದಿಂದ ಉತ್ತರ ದಿಕ್ಕಿನ ದೇವಾಲಯದಿಂದ ಆರಂಭವಾಗುವ ಈ ನಾಗಬನದ ಪರಿಧಿಯನ್ನು ಭದ್ರಾಕ್ಷಿ ವೃಕ್ಷದವರೆಗೆ  ಗುರುತಿಸಿ ಸ್ಥಾಪಿಸಿದ ಸೀಮಾಕಲ್ಲು ಇದಾಗಿದೆ. ಎಂದು ಶಾಸನದಲ್ಲಿ ಬರೆಯಲಾಗಿದೆ. ಕಲ್ಲಿನ ಮೇಲ್ಭಾಗದಲ್ಲಿ ತ್ರಿಶೂಲ ಲಾಂಛನವನ್ನು ಹೊಂದಿದ್ದು, ಇದು ಶೈವ ಹಾಗೂ ದುರ್ಗೆ ಶಕ್ತಿಯ ಸಂಕೇತವಾಗಿದೆ.ಶಾಸನವು ಸ್ವಸ್ತಿ ಶ್ರೀ ಪೃಥ್ವೀಂದ್ರ ಭಟರು ದೈವ ಪ್ರಭಾವಎಂದು ಆರಂಭಗೊಂಡಿದ್ದು,  ಮೂರನೇ ಪಂಕ್ತಿಯಲ್ಲಿರುವ ’ದಿದೋರಿ’ ಎಂಬ ಹಳೆಕನ್ನಡ ಪದವು ’ಕೊಟ್ಟ’, ’ಕೊಡಲ್ಪಟ್ಟ’ ಎಂಬ ಅರ್ಥವನ್ನು ಕೊಡುತ್ತದೆ. ಹಾಗಾಗಿ ಈ ಶಾಸನ ಅವನಿಂದ ಕೊಡಲ್ಪಟ್ಟಿತ್ತು ಎಂದು ಅರ್ಥವಾಗುತ್ತದೆ. ದೀರ್ಘಕಾಲ ಬದುಕುವ ಬದರಿ ಎಂಬ ಮರದ ಉಲ್ಲೇಖ ಈ ನಾಗಬನದ ಸಂಬಂಧದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಒಟ್ಟಿನಲ್ಲಿ ಉತ್ತರಲ್ಲಿರುವ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಾಲಯದಿಂದ ದಕ್ಷಿಣದಲ್ಲಿ ಬದರಿ ಮರವನ್ನು ಒಳಗೊಂಡ ನಾಗಬನದವರೆಗಿನ ಭೂಮಿಯು ದೇವತಾ ವಿನಿಯೋಗಕ್ಕಾಗಿ ಕೊಡಲ್ಪಟ್ಟಿತ್ತು ಎಂದು ಅವರು ವಿವರಿಸಿದರು.
  ಇಲ್ಲಿಯ ಶ್ರೀ ಪಂಚದುರ್ಗಾ ಪರಮೇಶ್ವರಿಯ ಮೂರ್ತಿಯ ಪ್ರಭಾವಳಿಯಲ್ಲಿ ೧೦ ನೇ ಶತಮಾನದ ಬಳಿಕದ ರಚನೆಯ ಮಕರ ತೋರಣವಾಗಲೀ, ಸ್ತಂಭಗಳ ರಚನೆಯಾಗಲೀ ಇಲ್ಲದಿರುವುದರಿಂದ, ಇದು ಕ್ರಿ.ಶ. ೮ನೇ ಶತಮಾನಕ್ಕಿಂತ ಸ್ವಲ್ಪ ಹಿಂದಿನ ಕಾಲಕ್ಕೆ ಸೇರಿದ ದೇವತಾ ಬಿಂಬ. ಆದುದರಿಂದ ಮೊದಲು ಈ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸಿದ ಬಳಿಕ ಭೂಮಿಯ ವಿವರಗಳನ್ನು ಸ್ಪಷ್ಟಪಡಿಸಲು, ಆಲೂಪ ಅರಸ ಪೃಥ್ವಿಂದ್ರ ಚಿತ್ರವಾಹನನು ಶಾಸನ ಬರೆಸಿದ ಎಂದು ತಿಳಿಯ ಪಟ್ಟಿದೆ ಅವರು ಹೇಳಿದರು.
ಕ್ಷೇತ್ರದ ತಂತ್ರಿಯವರಾದ ಕೃಷ್ಣ ಪ್ರಸಾದ ಆಚಾರ್ಯ ಅವರು ಮಾತನಾಡಿ, ದೇವಸ್ಥಾನ ಹಿರಿಯರಿಂದ ತಿಳಿದು ಬಂದಂತೆ ೭೦೦ ವರ್ಷಗಳ ಐತಿಹ್ಯ ಹೊಂದಿತ್ತೆಂದು ಪ್ರತೀತಿ ಇತ್ತು. ಇದೀಗ ಶಾಸನದ ಅನಾವರಣದಿಂದ ೧,೨೦೦ ವರ್ಷ ಪುರಾತನದ್ದೆಂದು ತಿಳಿದು ಬಂದಿರುವುದು ಸಂತಸ ತಂದಿದೆ.ಈ ಶಿಲಾಶಾಸನವನ್ನು ಸಂರಕ್ಷಿಸುವ ಕಾರ್ಯ ದೇವಳದ ವತಿಯಿಂದ ನಡೆಸುವ ಚಿಂತನೆ ಇದೆಎಂದರು. 

ಕ್ಷೇತ್ರದ ಪ್ರ.ಅರ್ಚಕ ಪ್ರಕಾಶ ಆಚಾರ್ಯ ಅವರು ಮಾತನಾಡಿ, ಸಂಶೋಧನಾತ್ಮಕ ಅಧ್ಯಯನದಿಂದ ತಿಳಿದು ಬಂದ ವಿಚಾರಗಳು ಅಮೂಲ್ಯವಾಗಿದೆ. ಕ್ಷೇತ್ರದ ದೇವಿ ಮೂರ್ತಿ ಅತ್ಯಂತ ಕುಸುರಿಯ ಸೂಕ್ಷ್ಮ ರಚನೆಯ ಮಹಿಷ ಮರ್ಧಿನಿಯದ್ದಾಗಿದೆ. ಇದನ್ನು ದುರ್ಗಾ ಪರಮೇಶ್ವರಿ ಸ್ವರೂಪದಲ್ಲಿ ಆರಾಧಿಸಲಾಗುತ್ತಿದೆ ಎಂದರು.

ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುದರ್ಶನ ಶೆಟ್ಟಿ ಹಕ್ಕೇರಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಉಮೇಶ್ ಶೆಟ್ಟಿ ಪಾಲ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.  

By Suddi9