ಕಟೀಲು: ರಾಜ್ಯದಲ್ಲಿನ ಧಾರ್ಮಿಕ ಕ್ಷೇತ್ರದಲ್ಲಿಯೇ ಹೊಸ ಇತಿಹಾಸಕ್ಕೆ ನಾಂದಿ ಆಡಲಿರುವ ಪ್ರಯತ್ನವಾಗಿ ರಾಜ್ಯದ ಮೊದಲ ಅತಿದೊಡ್ಡ ಚಿನ್ನದ ರಥವು ಇಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆ.8ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ದೇವಳದ ಕಾರ್ಯನಿರ್ವಾಹಣಾಧಿಕಾರಿ ನಿಂಗಯ್ಯ ಹೇಳಿದರು.
ಅವರು ಗುರುವಾರ ದೇವಸ್ಥಾನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, 2002ರಿಂದ ಚಿನ್ನದ ರಥ ನಿರ್ಮಾಣಕ್ಕೆ ಚಿನ್ನ, ಬೆಳ್ಳಿ ಹಾಗೂ ನಗದು ರೂಪದಲ್ಲಿ ಸಂಗ್ರಹಕ್ಕೆ ಪ್ರಾರಂಭಿಸಲಾಯಿತು. ಈವರೆಗೆ 8.45 ಕೆ.ಜಿ, 190 ಕೆ.ಜಿ. ಬೆಳ್ಳಿ ಹಾಗೂ ನಗದು ರೂಪದಲ್ಲಿ 1.64 ಕೋಟಿ ರೂ. ಸಂಗ್ರಹವಾಗಿದೆ. ಅಂದಾಜು 4.5ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾದ ಚಿನ್ನದ ರಥಕ್ಕೆ 11ಕೆ.ಜಿ. ಚಿನ್ನ ಹಾಗೂ 190 ಕೆ.ಜಿ. ಬೆಳ್ಳಿಯನ್ನು ಬಳಸಲಾಗಿದೆ. ದೇವಳದ ಉಗ್ರಾಣದಲ್ಲಿರುವ ಹೆಚ್ಚುವರಿ ಚಿನ್ನವನ್ನು ಬಳಸಲಾಗಿದ್ದು. 14 ಅಡಿ ಒಂದು ಇಂಚು ಎತ್ತರ ಇರುವುದರಿಂದ ಇದು ರಾಜ್ಯದಲ್ಲಿಯೇ ಪ್ರಥಮವಾಗಿದೆ ಎಂದರು.
ಚಿನ್ನದ ರಥದ ಭದ್ರತೆಗಾಗಿ ಓರ್ವ ಗನ್‍ಮ್ಯಾನ್ ಹಾಗೂ ಸಿ.ಸಿ.ಟಿ.ವಿಯ ಜೊತೆಗೆ ಹೆಚ್ಚುವರಿ ಭದ್ರತೆಯನ್ನು ನೀಡಲಾಗುವುದು. ರಾಜ್ಯ ಮುಜುರಾಯಿ ಸಚಿವ ಟಿ.ಬಿ.ಜಯಚಂದ್ರರವರು ಫೆ.8ರಂದು ಲೋಕಾರ್ಪಣೆ ಮಾಡಲಿದ್ದಾರೆ. ಫೆ.9ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಮೂಲ ಸ್ಥಳವಾದ ಕುದ್ರುವಿನಲ್ಲಿ ಅರುಣಾಸುರನ ಸಂಹಾರವಾದ ಸ್ಥಳದಲ್ಲಿ ಎರ್ಮಾಳುಗುತ್ತು ರಾಧಾ ವಿಠಲ ಶೆಟ್ಟಿ ಕಲ್ಲಟೆಗುತ್ತುವಿನ ಕುಟುಂಬಸ್ಥರು ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ವಿಶಿಷ್ಠ ಗರ್ಭಗುಡಿಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೋಂದಿಗೆ ಕೇಂದ್ರ ಸರ್ಕಾರದ ಸಚಿವ ಶ್ರೀಪಾದ ಎಸ್.ಒ.ನಾಯಕ್ ಅನಾವರಣಗೊಳಿಸಲಿದ್ದಾರೆ ಎಂದು ಹೇಳಿದರು.
ಈ ಎರಡೂ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ನಾಯಕರು, ಸಚಿವರು, ಸಂಸದರು, ಶಾಸಕರ ಸಹಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಟೀಲು ದೇವಸ್ಥಾನದಲ್ಲಿ ಸ್ವಚ್ಚತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಯಾವುದೇ ತ್ಯಾಜ್ಯವನ್ನು ನಂದಿನಿ ನದಿಗೆ ಬಿಡುತ್ತಿಲ್ಲ, ಸ್ಥಳೀಯ ಹೋಟೆಲ್, ಅಂಗಡಿಗಳ ತ್ಯಾಜ್ಯಕ್ಕೆ ಗ್ರಾಮ ಪಂಚಾಯಿತಿಯೇ ಹೊಣೆ ಆಗಿದೆ. ಕುದ್ರುವಿಗೆ ತೆರಳುವ ರಸ್ತೆಯಲ್ಲಿರುವ ಶೌಚಾಲಯವನ್ನು ತೆರವುಗೊಳಿಸುವ ಚಿಂತನೆ ಇದೆ. ಅಭಿವೃದ್ಧಿ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಚಿನ್ನದ ರಥವನ್ನು ತಯಾರಿಸಿದ ಉಡುಪಿ ಸ್ವರ್ಣದ ಗುಜ್ಜಾಡಿ ರಾಮದಾಸ ನಾಯಕ್, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹಾಜರಿದ್ದರು.
ಕಟೀಲು ಮೂಲಕುದ್ರು…
ಕಟೀಲು ಕ್ಷೇತ್ರದ ಸ್ವಯಂ ಭೂಲಿಂಗದ ಮೂಲ ಸನ್ನಿಧಾನವನ್ನು ವಾಸ್ತು ತಜ್ಞ ಸುಬ್ಬಹ್ಮಣ್ಯ ಭಟ್ ಗುಂಡಿಬೈಲ್‍ರವರ ನೇತೃತ್ವದಲ್ಲಿ ಶಿಲ್ಪಿ ವಿಷ್ಣುಮೂರ್ತಿ ಭಟ್ ಎಲ್ಲೂರುರವರು ನಿರ್ಮಿಸಿದ್ದು ಉತ್ತರ ಕೇರಳ ಶೈಲಿಯಲ್ಲಿ ದಾರು ಶಿಲ್ಪ ದಶಾವತಾರದ ರೂಪದಲ್ಲಿ ನಿರ್ಮಾಣವಾಗಿದ್ದು, ಮೇಲ್ಛಾವಣಿಯಲ್ಲಿಯೂ ಸಂಪ್ರದಾಯವನ್ನು ಪಾಲಿಸಲಾಗಿದೆ. ಪಕ್ಕದಲ್ಲಿಯೇ ನಾಗಪ್ರತಿಷ್ಠೆಯನ್ನು ಮುರಕಲ್ಲಿನಲ್ಲಿಯೇ ನಿರ್ಮಿಸಲಾಗಿದೆ. ಮುಂದಿನ ದಿನದಲ್ಲಿ ಸಾನ್ನಿಧ್ಯ ಪ್ರದಕ್ಷಿಣಾ ಪಥ, ಧ್ಯಾನ ಕೇಂದ್ರ, ಯಾಗ ಮಂಟಪ, ನಾಗಕೂಪದ ಬಾವಿ, ಕ್ಷೇತ್ರವನ್ನು ವರ್ಣಿಸುವ ಸ್ತಬ್ಧ ಚಿತ್ರದ ಶಿಲ್ಪಕಲೆಯನ್ನು ನಿರ್ಮಿಸಲಾಗುವುದು. 2.65 ಎಕ್ರೆ ಸ್ಥಳದಲ್ಲಿ 1977ರವರೆಗೆ ಇಲ್ಲಿ ವಾರ್ಷಿಕ ಜಾತ್ರಾ ಪೂಜಾ ಕೈಂಕರ್ಯ ನಡೆಯುತ್ತಿತ್ತು ಎಂದು ಅರ್ಚಕ ಹರಿನಾರಾಯಣ ಆಸ್ರಣ್ಣ ಮಾಹಿತಿ ನೀಡಿದರು.





