ಪಾದಾಯಾತ್ರೆಯನ್ನು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸುತ್ತಿರುವ ಭಕ್ತರು
ಸುದ್ದಿ9 ಬಜ್ಪೆ: ಮರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ (ಮರವೂರು ಸೇತುವೆ ಬಳಿ) ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 2ನೇ ವರ್ಷದ `ಅಮ್ಮನೆಡೆಗೆ ನಮ್ಮ ನಡೆ’ ಪಾದಯಾತ್ರೆ ಜನವರಿ 25ರಂದು ಭಾನುವಾರ ಬೆಳಿಗ್ಗೆ ಕೆ.ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ಪಣ್ಣ, ಅನಂತ ಪದ್ಮನಾಭ ಆಸ್ರಣ್ಣ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವಾ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.ಸಕಲ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದ ಗಣ್ಯರು ಕಟೀಲಿನ ದುರ್ಗಾಪರಮೇಶ್ವರಿ ದೇವಿಯ ಹಲವು ಶ್ಲೋಕಗಳನ್ನು ಪಠಿಸಿದರು.
ಮರವೂರಿನಿಂದ ಕಟೀಲುವರೆಗೆ ನಡೆದ ಪಾದಯಾತ್ರೆಯಕ್ಕೆ ಸಾವಿರಾರು ಮಂದಿ ಭಕ್ತರು ಕೇವಲ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಮೂಲಕ ಭಕ್ತಿಯ ಪರಾಕಾಷ್ಟೆ ಮೆರೆದರು. ಭಜನೆ, ಚೆಂಡೆವಾದನ ಪಾದಯಾತ್ರೆಗೆ ಮೆರಗನ್ನು ನೀಡಿತು.
ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಜಯಘೋಷ. ಮಂತ್ರಪಠಣ, ವಂದೇಮಾತರಂ ಮುಂತಾದ ಘೋಷ ವಾಕ್ಯಗಳನ್ನು ಕೂಗಿದರು. ಸಾವಿರಕ್ಕೂ ಅಧಿಕ ಮಂದಿ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಪಾದಾಯಾತ್ರೆಯ ಕೊನೆಗೆ ಕಟೀಲು ದುರ್ಗಾಪರಮೇಶ್ವರಿ ದೇವಳದಲ್ಲಿ ಅನ್ನ ಪ್ರಸಾದವನ್ನು ನೀಡಲಾಗಿತ್ತು. ತಮ್ಮ ಸಕಲ ದೋಷಗಳ ಪರಿಹಾರವನ್ನು ದುರ್ಗಾಪರಮೇಶ್ವರಿ ಮಾಡುತ್ತಾಳೆ ಎಂಬ ನಂಬಿಕೆಯಿಂದ ಭಕ್ತರು ಈ ಪಾದಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಾದಾಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಕಟೀಲು ದೇಗುಲದಲ್ಲಿ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.





