ಉರ್ದು ಶಾಲೆಯಲ್ಲಿ ಉಚಿತ ಬರೆಯುವ ಪುಸ್ತಕ ವಿತರಣೆ
ಗುರುಪುರ : ಶ್ರೀ ವಿಜಯವಾಹಿನಿ ಗಂಜಿಮಠ ಸಂಸ್ಥೆಯ ೨೨ನೇ ವರ್ಷದ ಉಚಿತ ಬರೆಯುವ ಪುಸ್ತಕ ವಿತರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಗಂಜಿಮಠದ ಸರ್ಕಾರಿ ಹಿರಿಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಉರ್ದು ಶಾಲೆಯಲ್ಲಿ ಜು. ೨೭ರಂದು ಗಂಜಿಮಠ ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಅಂದಾಜು ೫೧,೦೦೦ ರೂ. ಮೌಲ್ಯದ ಒಟ್ಟು ೧೨೪ ಮಕ್ಕಳಿಗೆ ಬರೆಯುವ ಪುಸ್ತಕ ವಿತರಿಸಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ ಅವರು ಮಾತನಾಡಿ, ವಿಜಯವಾಹಿನಿ ಸಂಸ್ಥೆಯು ಶಿಕ್ಷಣದ ಜೊತೆಗೆ ಬಡವರ ಕುಟುಂಬಗಳ ಕಷ್ಟಗಳಿಗೆ ನೆರವಾಗುವ ದೊಡ್ಡ ಕೆಲಸ ಮಾಡುತ್ತ ಬಂದಿದೆ. ಸಂಘ-ಸAಸ್ಥೆಗಳು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಮತ್ತಿತರ ನೆರವು ನೀಡುವುದು ಉತ್ತಮ ಕೆಲಸ. ತಮ್ಮ ವಿದ್ಯಾಭ್ಯಾಸಕ್ಕೆ ನೆರವಾದ ಸಂಸ್ಥೆಗಳು ಹಾಗೂ ವ್ಯಕ್ತಿಗಳನ್ನು ಮಕ್ಕಳು ಯಾವತ್ತೂ ಮರೆಯಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಗಂಜಿಮಠ ಗ್ರಾಪಂ ನಿಕಟಪೂರ್ವ ಅದ್ಯಕ್ಷೆ ಮಾಲತಿ ಅವರು ಮಾತನಾಡಿ, ಸರ್ಕಾರಿ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಎಲ್ಲ ಪರಿಕರಗಳು ಉಚಿತವಾಗಿ ಸಿಗುವಂತಾದರೆ, ಮಕ್ಕಳು ಹಾಗೂ ಪೋಷಕರ ಹೊರೆ ಕಡಿಮೆಯಾಗಲಿದೆ. ಸಂಸ್ಕೃತಿ, ಕ್ರೀಡೆ, ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಈ ಸಂಸ್ಥೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಮಕ್ಕಳು ಮನೆಯಿಂದ ಶಿಸ್ತು ಬೆಳೆಸಿಕೊಂಡು ಬಂದರೆ ಮಾತ್ರ ಭವಿಷ್ಯದ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.

ಗAಜಿಮಠ ಕಾಂಗ್ರೆಸ್ ವಲಯಾಧ್ಯಕ್ಷ ಮುಸ್ತಫ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕರಾಗಿದ್ದು ನಿವೃತ್ತರಾಗಿರುವ ಅಕ್ಬರ್ ಬಾದ್‌ಷಾ(ಬಾಷಾ ಮಾಸ್ಟರ್), ಮುಖ್ಯ ಶಿಕ್ಷಕಿ ಮೀನಾಕ್ಷಿ ಮಾತನಾಡಿದರು. ಸಂಸ್ಥೆಯ ಸ್ಥಾಪಕಾಧ್ಯಕ್ಷ, ಮಾಜಿ ತಾಪಂ ಸದಸ್ಯ ಸುನಿಲ್ ಗಂಜಿಮಠ ಅವರು ಸ್ವಾಗತಿಸಿ, ಪ್ರಸ್ತಾವಿಕ ಮಾತನ್ನಾಡಿದರು. ಕಾರ್ಯದರ್ಶಿ ದಯಾನಂದ ಪೂಜಾರಿ ವರದಿ ವಾಚಿಸಿದರು.

ಸಂಸ್ಥೆಯ ಗೌರವಾಧ್ಯಕ್ಷ ಚಂದ್ರಶೇಖರ ಪೂಜಾರಿ ಅರ್ಬಿ, ಎಸ್‌ಡಿಎಂಸಿ ಅಧ್ಯಕ್ಷ ರಿಯಾಝ್, ಸಮಾಜಸೇವಕಿ ಪುಷ್ಪಾ ಕರ್ಕೇರ, ಬಶೀರ್ ಗಂಜಿಮಠ, ಸಸಿಹಿತ್ಲು ಯಕ್ಷಗಾನ ಮೇಳದ ವ್ಯವಸ್ಥಾಪಕ ಗಿರಿಯಪ್ಪ ಸಾಲ್ಯಾನ್, ಜನಾರ್ದನ ಕುಲಾಲ್, ರಮೇಶ್ ಸನಿಲ್, ಆರೀಫ್ ಗಂಜಿಮಠ, ಮುಸ್ತಾಕ್ ಗಂಜಿಮಠ, ಗ್ರಾಪಂ ಮಾಜಿ ಸದಸ್ಯ ಸಾದಿಕ್, ವಿಶ್ವನಾಥ, ಶಬ್ಬೀರ್, ಹರ್ಷದ್, ಆರೀಫ್, ರವಿ ಗಂಜಿಮಠ, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಗಂಜಿಮಠ ಅಂಗನವಾಡಿ ಕಾರ್ಯಕರ್ತೆ ಶ್ರೀಲತಾ ವಂದಿಸಿದರು.
