ಆಟಿ ತಿಂಗಳ ಖಾದ್ಯ ಆರೋಗ್ಯಕರ : ದೀಪಕ್ ಕೋಟ್ಯಾನ್
ಗುರುಪುರ : ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುನಗರ ಗುರುಪುರ ಇಲ್ಲಿ ಜು. ೨೬ರಂದು ೨ನೇ ವರ್ಷದ `ಆಟಿಡೊಂಜಿ ದಿನ’ ಕಾರ್ಯಕ್ರಮ ತುಳುನಾಡ ಜನಪದೀಯ ಸಂಭ್ರಮ ಹಾಗೂ ಸಡಗರದೊಂದಿಗೆ ಜರುಗಿತು.

ದೀಪ ಬೆಳಗಿಸಿ, ತೆಂಗಿನ ಹಿಂಗಾರ ಅರಳಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸಂಘದ ಗೌರವಾಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ, ಸುಮಾರು ೩೦ ವರ್ಷಗಳ ಹಿಂದೆ `ಆಟಿ’ ಎಂದರೆ ಕೆಲಸವಿಲ್ಲದೆ ಕಷ್ಟದ ಜೀವನ ನಡೆಸಬೇಕಿದ್ದ ತಿಂಗಳಾಗಿತ್ತು. ಶ್ರೀಮಂತ ರೈತರಿಗೂ ಈ ತಿಂಗಳು ಕಷ್ಟವಾಗಿತ್ತು. ಆದರೆ ಈ ತಿಂಗಳಲ್ಲಿ ತುಳುನಾಡಿನ ಹಿರಿಯರು ಪ್ರಕೃತಿ ಮಡಿಲಲ್ಲಿರುವ ಸೊತ್ತುಗಳ ಖಾದ್ಯ ಮಾಡಿ ತಿನ್ನುತ್ತಿದ್ದರು. ಇದರಿಂದ ಅವರ ಆರೋಗ್ಯ ವರ್ಷಪೂರ್ತಿ ಉತ್ತಮವಾಗಿತ್ತು. ಕಂಪ್ಯೂಟರ್ ಯುಗದಲ್ಲಿರುವ ಈಗಿನ ಪೀಳಿಗೆಗೆ ಇವುಗಳ ಪರಿಚಯವೇ ಇಲ್ಲ. `ಆಟಿಡೊಂಜಿ ದಿನ, ಕೆರ್ಡ್ ಒಂಜಿ ದಿನ’ದಂತಹ ಕಾರ್ಯಕ್ರಮಗಳ ಮೂಲಕ ಆಟಿಯ ೩೦ ದಿನಗಳ ವೈವಿಧ್ಯತೆಯನ್ನು ಕೇವಲ ಒಂದೇ ದಿನದಲ್ಲಿ ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದರು.

ಆಟಿ ತಿಂಗಳ ವೈಶಿಷ್ಟತೆ ಬಗ್ಗೆ ಪತ್ರಕರ್ತ ಮೋಹನದಾಸ ಮರಕಡ ಮಾತನಾಡಿ, ಆಟಿ ತಿಂಗಳು ಬರಗಾಲ, ಬಡತನ ಹೆಚ್ಚಿರುವ ಕಾಲವಾಗಿದ್ದರೂ ಅದು ಅನಿಷ್ಠದ ತಿಂಗಳು ಅಲ್ಲವೇ ಅಲ್ಲ. ಕೃಷಿ ಪ್ರಧಾನ ತುಳುನಾಡಿನಲ್ಲಿ ಕೆಲಸವೇ ಇಲ್ಲದ ಆಟಿ ತಿಂಗಳಲ್ಲಿ ಜನರಿಗೆ ಸಹಜವಾಗಿಯೇ ಕಷ್ಟಗಳಿತ್ತು. ಫಿಝಾ, ಬರ್ಗರ್ ಭರಾಟೆಯಲ್ಲಿ ನಮಗಿಂದು ಆಟಿ ತಿಂಗಳಲ್ಲಿ ಸಿಗುತ್ತಿದ್ದ ಗಂಜಿ, ಚಟ್ಲಿ, ತಜಂಕು, ತೇಟ್ಲ, ಗೂಂಜಿ-ರಚ್ಚೆ ಚಟ್ನಿ, ಗಂಜಿ-ತೆಲಿ, ಹಲಸಿನ ಗಟ್ಟಿಯ ಪರಿಚಯವೇ ಇಲ್ಲದಂತಾಗಿದೆ. ಪ್ರಕೃತಿ ನೀಡುವ ಈ ಸೊತ್ತುಗಳಿದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಈ ನಿಟ್ಟಿನಲ್ಲಿ, ಇಂದಿನ ಯುವ ಪೀಳಿಗೆಗೆ ತುಳುನಾಡ ಪರಂಪರೆಯ ಖಾದ್ಯ-ತಿಂಡಿ ತಿನಸುಗಳ ಪರಿಚಯಿಸುವ ಪ್ರಯತ್ನ ಇಂತಹ ಕಾರ್ಯಕ್ರಮಗಳ ಮೂಲಕ ನಡೆಯುತ್ತಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಬರಿಪಟ್ಲ ಮಾತನಾಡಿ, ತುಳುನಾಡ ಪರಂಪರೆಯಲ್ಲಿ ಆಟಿ ತಿಂಗಳು ಅತಿ ಮಹತ್ವದ್ದಾಗಿದೆ. ಯುವ ಪೀಳಿಗೆಗೆ ಈ ತಿಂಗಳ ವಿಶೇಷತೆ ತಿಳಿಸುವ ಅಗತ್ಯವಿದೆ. ಹಿರಿಯರ ಆಚರಣೆಗಳು ಮತ್ತು ಸಂಪ್ರದಾಯಗಳಲ್ಲಿ ವೈಜ್ಞಾನಿಕ ಸತ್ಯಗಳು ಅಡಕವಾಗಿದ್ದು, ಸಾರಾಸಗಟಾಗಿ ಯಾವುದನ್ನೂ ಅಲ್ಲಗಳೆಯುವಂತಿಲ್ಲ ಎಂದರು.
ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಧೂಮಾವತಿ ಪಾತ್ರಿ ತನಿಯಪ್ಪ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಘದ ಜೊತೆ ಕಾರ್ಯದರ್ಶಿ ಯೋಗಿತಾ ಯು ಅವರು ಸ್ವಾಗತಿಸಿದರು. ಸಂಘದ ಮಾಜಿ ಅಧ್ಯಕ್ಷ ಶೀನ ಕೋಟ್ಯಾನ್, ಉಪಾಧ್ಯಕ್ಷ ದಿಲೀಪ್ ಅಮೀನ್, ಪ್ರಧಾನ ಕಾರ್ಯದರ್ಶಿ ಶೋಭಾ ಡಿ. ಗುರುಪುರ, ಸ್ಪೂರ್ತಿ ಮಹಿಳಾ ಘಟಕದ ಅಧ್ಯಕ್ಷೆ ವಿನೋದಾ ಡಿ. ಅಂಚನ್, ಹಿರಿಯರಾದ ಸೀತಾರಾಮ ಪೂಜಾರಿ ಕರಿಮನೆ ಹಾಗೂ ಗಿರೀಶ್ ಪೂಜಾರಿ ಇಟ್ಟಬಾಗಿಲು, ಮಹಾಬಲ ಅಮೀನ್, ಸುಭಾಶ್ಚಂದ್ರ ಪೊನ್ನಲೆ, ಸಂಘದ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ಸದಸ್ಯರು, ಬಿಲ್ಲವ ಸಮಾಜ ಹಿರಿಯರು ಹಾಗೂ ಅನ್ಯ ಸಮಾಜದ ಬಂಧುಗಳಿದ್ದರು. ನಿರೂಪಿಸಿದ ಸಂಘಟನಾ ಕಾರ್ಯದರ್ಶಿ ಯಶವಂತ ಕೋಟ್ಯಾನ್ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ :
ಸ್ಥಳೀಯ ಬಿಲ್ಲವ ಪ್ರತಿಭೆಗಳಿಂದ ಭರತ ನಾಟ್ಯ, ಹುಲಿ ಕುಣಿತ, ಆಧುನಿಕ ಶೈಲಿಯ ನೃತ್ಯ ಹಾಗೂ ಜಾನಪದ ನೃತ್ಯಗಳು ಪ್ರದರ್ಶನಗೊಂಡವು. ಉಮಾವತಿ ಕೆದುಬರಿ ಅವರ ತೆಂಬರೆ ನಾದಕ್ಕೆ `ಆಟಿ ಕಳಂಜ’ನಾಗಿ ಕುಣಿದ ಬೃಜೇಶ್ ಬರಿಪಟ್ಲ ಹಾಗೂ ಕಳಂಜಗೆ ದೆರಸೆಯಲ್ಲಿ ದಾನ ಮಾಡುತ್ತಿರುವ ವನಿತಾ ಪಿ. ನಡುಗುಡ್ಡೆ ಅವರ ಅಭಿನಯ ಸಭಿಕರ ಮೆಚ್ಚುಗೆಗೆ ಪಾತ್ರವಾದರು. ಕು. ಸಾನ್ವಿ ಗುರುಪುರ ನಿರೂಪಿಸಿದರು.
ಆಟಿ ಖಾದ್ಯಗಳು :
ತುಳುನಾಡಿನ ಜನಪದೀಯರು ಆಟಿ ತಿಂಗಳಲ್ಲಿ ಸೇವಿಸುತ್ತಿದ್ದ ಬಹುತೇಕ ಎಲ್ಲ ತಿಂಡಿ-ತಿನಸುಗಳು(ಅಥವಾ ಖಾದ್ಯ) ಆಟಿಡೊಂಜಿ ದಿನದಲ್ಲಿ ಅನಾವರಣಗೊಂಡಿದ್ದವು. ತೇವುದ ತೇಟ್ಲ(ಕೆಸು) ಚಟ್ನಿ, ಮುಳ್ಳುಸೌತೆ ಚಟ್ನಿ, ಎಟ್ಟಿ ಸುಕ್ಕ, ಕಡ್ಲೆ ಬಲ್ಯಾರ್ ಸುಕ್ಕ, ಮರುವಾಯಿ(ಮಳಿ) ಸುಕ್ಕ, ರಾಗಿ ಮನ್ನಿ, ಆಪ್ಪಂ, ಮೂಡೆ, ಹೋಳಿಗೆ, ಸೌತೆ-ಹೆಸರು ಸಾಂಬಾರು, ಕೋಳಿರೊಟ್ಟಿ, ಕೋಳಿ ಸುಕ್ಕ, ಪತ್ರೋಡೆ, ರಚ್ಚೆ ಮತ್ತು ಗೂಂಚಿ ಪಲ್ಯ, ತಜಂಕು ಸುಕ್ಕ ಹೀಗೆ ಸುಮಾರು ೩೨ ಬಗೆಯ ತಿಂಡಿ ತಿನಸುಗಳು ಇದ್ದವು. ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರೂ ಇವುಗಳ ರುಚಿ ಸವಿದು, ಮೆಚ್ಚುಗೆ ವ್ಯಕ್ತಪಡಿಸಿದರು.
