ಮುಂಬಯಿ: ಡಿಜಿಟಲ್ ಯುಗದ ಅಪ್ರತಿಮ ಪ್ರತಿಭೆ,ಉದ್ಯಮಿ ಸೃಜನಶೀಲತೆಯ ಶಿಖರಕ್ಕೇರಿದ ಮಹಾನ್ ಸಾಧಕ ಅತುಲ್ ಹೆಗ್ಡೆ ಮಿಜಾರು (೫೩) ಕಳೆದ ಮಂಗಳವಾರ (ಜು.೦೭) ಹೃದಯಾಘಾತದಿಂದ ಮುಂಬಯಿಯ ಸ್ವನಿವಾಸದಲ್ಲಿ ಸ್ವರ್ಗಸ್ಥ ರಾದರು

 

ವೃತ್ತಿಜೀವನದ ಪಯಣ: ಅಸಾಧಾರಣ ಕ್ರಾಂತಿ:
೧೯೯೦ರ ದಶಕದ ಮಧ್ಯಭಾಗದಲ್ಲಿ ಹವಾಸ್ ಸಂಸ್ಥೆಯಲ್ಲಿ ಕ್ಲೈಂಟ್ ಸರ್ವಿಸಸ್ ಡೈರೆಕ್ಟರ್ ಆಗಿ ವೃತ್ತಿ ಬದುಕಿನ ಮೆಟ್ಟಿಲು ಏರಿದ ಶ್ರೀ ಅತುಲ್ ಹೆಗ್ಡೆ, ತಮ್ಮ ಚುರುಕುತನದಿಂದ ಶೀಘ್ರವೇ ಉನ್ನತ ಸ್ಥಾನಗಳನ್ನು ಅಲಂಕರಿಸಿದರು. ೨೦೦೩ರಲ್ಲಿ ವ್ಯಾಸ್ ಜಿಯಾನೆಟ್ಟಿ ಕ್ರಿಯೇಟಿವ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಗಿ ಸೇವೆ ಸಲ್ಲಿಸಿದರು. ೨೦೦೮ರಲ್ಲಿ ಇಗ್ನೈಟಿ ಡಿಜಿಟಲ್ ಸರ್ವಿಸಸ್‌ನ ಸಿಇಒ ಆಗಿ, ಭಾರತದಲ್ಲಿ ಡಿಜಿಟಲ್ ಮಾರ್ಕೆಟಿಂಗ್‌ನ ಆರಂಭಿಕ ಹಂತದ ಕ್ರಾಂತಿಯ ನೇತೃತ್ವ ವಹಿಸಿದರು. ೨೦೧೫ರಲ್ಲಿ ಸುಧೀರ್ ಮೆನನ್ ಅವರೊಂದಿಗೆ ಸೇರಿ ರೈನ್ ಮೇಕರ್ ವೆಂಚರ್ಸ್ ಅನ್ನು ಸ್ಥಾಪಿಸಿ, ತಂತ್ರಜ್ಞಾನ ಆಧಾರಿತ ಹೂಡಿಕೆಯಲ್ಲಿ ಹೊಸ ಆಯಾಮ ಸೃಷ್ಟಿಸಿದರು.

 

ಆಸ್ತಿ ಮತ್ತು ಸಂಪತ್ತಿನ ವಾಸ್ತವ:
ಅತುಲ್ ಹೆಗ್ಡೆ ಅವರ ಆಥಿಕ ಮೌಲ್ಯದ ಕುರಿತಂತೆ ಹರಿದಾಡುತ್ತಿರುವ ಆರು ಸಾವಿರ ಕೋಟಿ ರೂ.ಗಳ ಅಂಕಿಅಂಶವು ಯಾವುದೇ ವಾಸ್ತವಿಕ ಆಧಾರಗಳನ್ನು ಹೊಂದಿಲ್ಲ. ಮಾರುಕಟ್ಟೆಯ ವಿಶ್ಲೇಷಣೆ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಆರ್ಥಿಕ ದತ್ತಾಂಶಗಳ ಪ್ರಕಾರ, ಯಾಪ್ ಡಿಜಿಟಲ್ ಸಂಸ್ಥೆಯ ಒಟ್ಟು ಮಾರುಕಟ್ಟೆ ಬಂಡವಾಳವು ಸುಮಾರು ೪೦೦ ಕೋಟಿಗಳ ವ್ಯಾಪ್ತಿಯಲ್ಲಿದೆ. ಅತುಲ್ ಅವರು ಕಂಪನಿಯಲ್ಲಿ ಪಾಲನ್ನು ಹೊಂದಿದ್ದರು. ಈ ಷೇರು ಬಂಡವಾಳದ ಮೌಲ್ಯವನ್ನು ಲೆಕ್ಕಹಾಕಿದಾಗ, ಅವರ ವೈಯಕ್ತಿಕ ಆಸ್ತಿಯು ಸಂಸ್ಥೆಯ ಷೇರು ಮೌಲ್ಯದ ಆಧಾರದ ಮೇಲೆ ಕೆಲವು ಕೋಟಿಗಳಲ್ಲಿ ಇರುತ್ತದೆಯೇ ಹೊರತು, ಆರು ಸಾವಿರ ಕೋಟಿ ರೂ.ಗಳಲ್ಲ. ಶ್ರೀ ಅತುಲ್ ಹೆಗ್ಡೆ ಅವರು ಕೇವಲ ಹಣದ ಅಳತೆಯಿಂದ ಅಳೆಯಲಾಗದಷ್ಟು ದೊಡ್ಡ ಸಾಧಕರು. ಅವರ ಅಪ್ಪಟ ಶ್ರೀಮಂತಿಕೆ ಇರುವುದು ಅವರು ಸೃಷ್ಟಿಸಿದ ಸಂಸ್ಥೆಯ ಬೌದ್ಧಿಕ ಸಂಪತ್ತು, ದೂರದೃಷ್ಟಿ ಮತ್ತು ಅವರು ಡಿಜಿಟಲ್ ಮಾರ್ಕೆಟಿಂಗ್ ರಂಗದಲ್ಲಿ ಹಾಕಿಕೊಟ್ಟ ಹೊಸ ಹಾದಿಯಲ್ಲಿ.  ಅತುಲ್ ನಮ್ಮನ್ನು ಅಗಲಿದ್ದರೂ, ಅವರು ಹಾಕಿಕೊಟ್ಟ ದಾರಿ ಮತ್ತು ರೂಪಿಸಿದ ಸೃಜನಶೀಲ ಸಂಸ್ಥೆಗಳು ಭಾರತದ ಡಿಜಿಟಲ್ ಇತಿಹಾಸದಲ್ಲಿ ಶ್ರೀ ಅತುಲ್ ಹೆಗ್ಡೆ ಅವರ ಹೆಸರನ್ನು ಶಾಶ್ವತವಾಗಿ ಉಳಿಸುತ್ತವೆ ಎಂದು ಅವರ ಮಿತ್ರವೃಂದ ತಿಳಿಸಿದೆ.

 
 

By Suddi9

Leave a Reply

Your email address will not be published. Required fields are marked *