ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಕಾಂದಿಲ–ಬರಿಮಾರ್ ರಸ್ತೆಯನ್ನು 30 ಲಕ್ಷ ರೂ ಅನುದಾನದಲ್ಲಿ ಅಭಿವೃದ್ಧಿಗೊಂಡು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. .ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು, ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಮೂಲಭೂತ ಸೌಕರ್ಯಗಳನ್ನು ತಲುಪಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಗ್ರಾಮೀಣ ರಸ್ತೆ ಅಭಿವೃದ್ಧಿಯಿಂದ ಜನರ ದೈನಂದಿನ ಜೀವನ ಮತ್ತಷ್ಟು ಸುಗಮವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ರುಕ್ಮಯ ಪೂಜಾರಿ ಅವರು, ಬಂಟ್ವಾಳ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ. ಜನರ ಅಗತ್ಯಗಳನ್ನು ಅರ್ಥಮಾಡಿಕೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿರುವ ಶಾಸಕ ರಾಜೇಶ್ ನಾಯ್ಕ್ ಅವರ ಕಾರ್ಯವೈಖರಿ ಶ್ಲಾಘನೀಯವಾಗಿದ್ದು, ಗ್ರಾಮೀಣ ಭಾಗಗಳಿಗೆ ಇಂತಹ ಅಭಿವೃದ್ಧಿ ಯೋಜನೆಗಳು ಇನ್ನಷ್ಟು ವೇಗ ಪಡೆಯಲಿ ಎಂದು ಆಶಿಸಿದರು.
ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೊಟ್ಯಾನ್ ಮಾತನಾಡಿ, ಬಿಜೆಪಿ ಜನಪ್ರತಿನಿಧಿಗಳ ಅಭಿವೃದ್ಧಿಪರ ಚಿಂತನೆಯ ಫಲವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಕಾಮಗಾರಿಗಳು ವೇಗವಾಗಿ ಅನುಷ್ಠಾನಗೊಳ್ಳುತ್ತಿವೆ. ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸಹಕಾರದಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಪಯಣ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.
