ಕೊಂಕಣಿ ರಿಯಾಲಿಟಿ ಗಾಯನ ಸ್ಪರ್ಧಾ ಪರಿಚಯ ಹೊಸತನದ ಪರಿಕಲ್ಪನೆ : ವಾಲ್ಟರ್ ನಂದಳಿಕೆ
ಮುಂಬಯಿ: ಮಾಂಡ್ ಸೊಭಾಣ್‌ನ ಸೋದ್ ಕಾರ್ಯಕ್ರಮದಿಂದ ಆರಂಭವಾದ ಸಂಗೀತ ಪಯಣವನ್ನು ಡೈಜಿವರ್ಡ್ ನ ಎಂಟಿಜಿ, ಗಲ್ಫ್ ವಾಯ್ಸ್ ಆಫ್ ಮಂಗಳೂರು, ಜಿಗಿಬಿಗಿ ತಾರಂ ಸೇರಿದಂತೆ ಹಲವು ವೇದಿಕೆಗಳು ಮತ್ತಷ್ಟು ಬಲಪಡಿಸಿವೆ. ಲಿಯೋ ಚಾರಿಟೇಬಲ್ ಟ್ರಸ್ಟ್ ಯೂಟ್ಯೂಬ್ ಆಧಾರಿತ ಕೊಂಕಣಿ ರಿಯಾಲಿಟಿ ಗಾಯನ ಸ್ಪರ್ಧೆಯನ್ನು ಪರಿಚಯಿಸಿರುವುದು ಹೊಸತನದ ಪರಿಕಲ್ಪನೆಯಾಗಿದ್ದು, ಉದಯೋನ್ಮುಖ ಗಾಯಕರಿಗೆ ಅತ್ಯುತ್ತಮ ವೇದಿಕೆಯಾಗಲಿದೆ. ಆದ್ದರಿಂದ ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃ ತಿಯ ಬೆಳವಣಿಗೆಗೆ ಡೈಜಿವನ ಸಂಪೂರ್ಣ ಬೆಂಬಲ ಮುಂದುವರಿಯಲಿದೆ ಎಂದು ಡೈಜಿವರ್ಡ್ ಪ್ರೈ ವೇಟ್ ಲಿಮಿಟೆಡ್ ಸಂಸ್ಥಾಪಕ ವಾಲ್ಟರ್ ಡಿ’ಸೋಜಾ ನಂದಳಿಕೆ ಭರವಸೆ ನೀಡಿದರು.

ಮಂಗಳೂರು ಅಲ್ಲಿನ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಲಿಯೋ ಚಾರಿಟೇಬಲ್ ಟ್ರಸ್ಟ್ (ಎಲ್‌ಸಿಟಿ) ವತಿಯಿಂದ ಆಯೋಜಿಸಲಾದ `ಕೋಂಕಣ್ ಮೆಲೋಡಿ ಸ್ಟಾರ್ ೨೦೨೬’ ಕೊಂಕಣಿ ರಿಯಾಲಿಟಿ ಗಾಯನ ಸ್ಪರ್ಧೆಗೆ ಚಾಲನೆ ನೀಡಿ ವಾಲ್ಟರ್ ನಂದಳಿಕೆ ಮಾತನಾಡಿ ಹೊಸ ಪ್ರತಿಭಾವಂತ ಕೊಂಕಣಿ ಗಾಯಕರನ್ನು ಗುರುತಿಸಿ, ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ವಿಶಿಷ್ಟ ಸಂಗೀತಯಾತ್ರೆ ಇತಿಹಾಸದ ಪುಟ ಸೇರುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಪೆರ್ಮಾಯಿ ಮುಖ್ಯ ಅತಿಥಿsಯಾಗಿದ್ದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರೆಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಕೊಂಕಣಿ ನಾಟಕ ಸಭಾ ಅಧ್ಯಕ್ಷ ವಂ| ಫಾ| ರೊಕಿ ಡಿ’ಕುನ್ಹಾ, ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಪಿಂಟೋ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ತೆಲಿನೋ, ಖ್ಯಾತ ಗಾಯಕ ಹಾಗೂ ಕೊಂಕಣಿ ಸಂಗೀತ ದಿಗ್ಗಜ ಸ್ವರ್ಗೀಯವಿಲ್ಫಿ ರೆಬಿಂಬಸ್ ಸುಪುತ್ರ ವಿಶ್ವಾಸ್ ರೆಬಿಂಬಸ್ ಉಪಸ್ಥಿತರಿದ್ದರು. ಲಿಯೋ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಲಿಯೋ ಡಿ’ಸೋಜಾ ರಾಣಿಪುರ ಹಾಗೂ ಕಾರ್ಯಕ್ರಮದ ನಿರೂಪಕ, ಕ್ರಿಯೇಟಿವ್ ಹೆಡ್ ಜೆರಿ ಡಿ’ಸೋಜಾ ಬೊಂದೇಲ್ ವೇದಿಕೆಯನ್ನು ಅಲಂಕರಿಸಿರಿದ್ದರು.

ವಂ| ಫಾ| ರೊಕಿ ಡಿ’ಕುನ್ಹಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಉದ್ಘಾಟನೆಯ ಪ್ರಮುಖ ಆಕರ್ಷಣೆಯಾಗಿ ಕೋಂಕಣ್ ಮೆಲೋಡಿ ಸ್ಟಾರ್ ೨೦೨೬ ಅಧಿಕೃತ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಲಾಯಿತು.

ಅನಿಲ್ ಲೋಬೋ ಮಾತನಾಡಿ ಎಂಸಿಸಿ ಬ್ಯಾಂಕ್ ಸದಾ ಕೊಂಕಣಿ ಸಂಸ್ಕ್ರ ತಿಯ ಸಂರಕ್ಷಣೆ ಮತ್ತು ಪ್ರೋತ್ಸಾಹಕ್ಕೆ ಬೆಂಬಲ ನೀಡಿದೆ ಎಂದು ಹೇಳಿದರು. ಲಿಯೋ ಡಿ’ಸೋಜಾ ಮತ್ತು ಜೆರಿ ಡಿ’ಸೋಜಾ ಅವರ ಸಂಗೀತ ಕ್ಷೇತ್ರದ ಸೇವಾರ್ಪಣೆಯನ್ನು ಶ್ಲಾಘಿಸಿ, ಈ ಸ್ಪರ್ಧೆ ಯಶಸ್ವಿಯಾಗಿ ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಮೈಲಿಗಲ್ಲು ಆಗಲಿ ಎಂದು ಹಾರೈಸಿದರು.

ಸ್ಟ್ಯಾನಿ ಅಲ್ವಾರೆಸ್ ಅಧ್ಯಕ್ಷೀಯ ನುಡಿಗಳನ್ನಾಡಿ, ಕೊಂಕಣಿ ಸಮುದಾಯ ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ, ಕೊಂಕಣ್ ಮೆಲೋಡಿ ಸ್ಟಾರ್‌ನಂತಹ ದೂರದೃಷ್ಟಿಯ ಕಾರ್ಯಕ್ರಮಗಳು ಶಾಶ್ವತ ಬದಲಾವಣೆ ತರಬಲ್ಲವು ಎಂದು ಹೇಳಿದರು. ಯುವ ಗಾಯಕರನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಮೂಲಕ ಈ ಸ್ಪರ್ಧೆ ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಂಗೀತದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರೋನಿ ಕ್ರಾಸ್ತಾ, ಸ್ಟಾನ್ಲಿ ಬಂಟ್ವಾಳ್ ಹಾಗೂ ಸಂತೋಷ್ ಸಿಕ್ವೇರಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ತೀರ್ಪುಗಾರರಾಗಿ ಸೇವೆ ಸಲ್ಲಿಸಿದ ಡಾ| ವೆಲಿಟಾ ಲೋಬೋ, ಅಲ್ವಿನ್ ನೊರೊನ್ಹಾ, ಜೋಶಲ್ ಡಿ’ಸೋಜಾ ಹಾಗೂ ಧ್ವನಿ ತಂತ್ರಜ್ಞರಾಗಿ ಸೇವೆ ಸಲ್ಲಿಸಿದ ಸಂಜಯ್ ರೋಡ್ರಿಗಸ್ ಹಾಗೂ ಡೈಜಿವರ್ಡ್ ತಂಡದ ಪ್ರತಿನಿಧಿಗಳನ್ನು ಗೌರವಿಸಲಾಯಿತು.
ಪ್ರಾಥಮಿಕ ವಿಡಿಯೋ ಆಯ್ಕೆ ಸುತ್ತಿನಲ್ಲಿ ಒಟ್ಟು ೧೧೩ ಸ್ಪರ್ಧಿಗಳು ಭಾಗವಹಿಸಿದ್ದು, ಅವರಲ್ಲಿ ೮೧ ಮಂದಿ ಆಡಿಷನ್ ಸುತ್ತಿಗೆ ಆಯ್ಕೆಯಾದರು.
