ಕೈಕಂಬ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿಯಾಗಿ ಬೆಂಗಳೂರಿನ ಶ್ರೀಮದ್ ರಾಜಾಪುರ ಸಂಸ್ಥಾನ ಮಠದ ಪೀಠಾಧಿಪತಿ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಆ. ೨೧ರಂದು ಬಾಲಾಲಯದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ ನಡೆಯಲಿದೆ.

ಬೆಳಿಗ್ಗೆ ೬:೧೦ರಿಂದ ರುದ್ರಾಭಿಷೇಕ, ರುದ್ರ ಪಾರಾಯಣ ಮತ್ತು ರುದ್ರ ಹೋಮ, ೧೧ಕ್ಕೆ ಕಲಾರ್ಷಣೆ, ೧೧:೪೫ಕ್ಕೆ ಬಾಲಾಲಯದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ ನಡೆಯಲಿದೆ. ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಆ. ೨೦ರಂದು ಸಂಜೆ ೪ರಿಂದ ಗಣಪತಿ ಪೂಜೆ, ಪುಣ್ಯಾನಾಂದಿ, ರುದ್ರ ಪಾರಾಯಣ, ಕ್ಷೇತ್ರಪಾಲಕ ಶಾಂತಿ ಹೋಮ ನಡೆಯಲಿದೆ.

ಜೀರ್ಣೋದ್ಧಾರ ಪ್ರಯುಕ್ತ ದೇವಾಲಯದಲ್ಲಿ ಸಂಪೂರ್ಣ ಶಿಲಾಮಯ ಗರ್ಭಗುಡಿ, ಸುತ್ತುಪೌಳಿ, ವಸಂತ ಮಂಟಪ, ಧ್ವಜಸ್ತಂಭ, ಗುರುಭವನ, ನಂದಿ ಮಂಟಪ ಮತ್ತಿತರ ಕಾರ್ಯಗಳು ನಡೆಯಲಿವೆ. ಅಕ್ಟೋಬರ್ ೨೪ ಶುಕ್ರವಾರ ಬೆಳಿಗ್ಗೆ ಭೂಮಿಪೂಜೆ(ಶಿಲಾನ್ಯಾಸ) ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಕಟಣೆ ತಿಳಿಸಿದೆ
