ಕೈಕಂಬ : ವಾಮಂಜೂರು ತಿರುವೈಲಿನ ಜೈ ಶಂಕರ್ ಮಿತ್ರ ಮಂಡಳಿ, ಜೈ-ಶಂಕರ್ ಮಾತೃ ಮಂಡಳಿ ಆಶ್ರಯದಲ್ಲಿ ಜು. ೨೦ರಂದು ಭಾನುವಾರ ತಿರುವೈಲಿನ ದೇವಸ ಗದ್ದೆಯಲ್ಲಿ ೨ನೇ ವರ್ಷದ `ಕೆಸರ‍್ಡ್ ಒಂಜಿ ದಿನ ಬೊಕ್ಕ ಆಟಿಡೋಂಜಿ ದಿನ’ ಕಾರ್ಯಕ್ರಮ ನಡೆಯಿತು.

ದೀಪ ಬೆಳಗಿಸಿ, ತೆಂಗಿನ ಪಿಂಗಾರ ಅರಳಿಸಿ ಕಾರ್ಯಕ್ರಮ ಉದ್ಘಾಟಿಸಿದ ತಿರುವೈಲು ಶ್ರೀ ಕೋರ‍್ದಬ್ಬು ದೈವಸ್ಥಾನದ ಅರ್ಚಕ ಪುದ್ದಣ್ಣ ಅವರು ಮಾತನಾಡಿ, ಹಿಂದೆ ಆಟಿ ಎಂದರೆ ತುಳುವರಿಗೆ ಕಷ್ಟದ ತಿಂಗಳು. ಆಧುನಿಕತೆಯ ಭರಾಟೆಯಲ್ಲಿ ಕೃಷಿ, ತುಳುನಾಡಿನ ತಿಂಡಿ-ತಿನಸುಗಳು ಮಾಯವಾಗುತ್ತಿದ್ದು, ನಮ್ಮ ಮಕ್ಕಳಿಗೆ ತುಳುನಾಡ ಸಂಸ್ಕೃತಿ ನೆನಪಿಸಿಕೊಡುವ ಉತ್ತಮ ಪ್ರಯತ್ನ ಇದಾಗಿದೆ. ಇದಕ್ಕೆ ದೈವ-ದೇವರ ಆಶೀರ್ವಾದ ಇದ್ದೇ ಇರುತ್ತದೆ ಎಂದು ಹಾರೈಸಿದರು.

ಮಂಡಳಿಯ ಗೌರವಾಧ್ಯಕ್ಷ ಲಿಂಗಪ್ಪ ಸಾಲ್ಯಾನ್ ಮಾತನಾಡಿ, ಜೈ ಶಂಕರ್ ಮಿತ್ರ ಮಂಡಳಿ ಕಳೆದ ೫೨ ವರ್ಷಗಳಿಂದ ಸಾಮಾಜಿಕ ಕಾಳಜಿಯ ಕೆಲಸ ಮಾಡುತ್ತ ಬಂದಿದೆ. ಎರಡು ವರ್ಷಗಳಿಂದ ಮಕ್ಕಳಿಗೆ ಆಟಿ ತಿಂಗಳ ಮಹತ್ವ ತಿಳಿಸುವ ಕಾರ್ಯಕ್ರಮ ನಡೆಸುತ್ತ ಬಂದಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದರು.

ಕಾರ್ಯಕ್ರಮ ಸಂಘಟಕ ರಘು ಸಾಲ್ಯಾನ್ ಮಾತನಾಡಿ, ಆಟಿದ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಹಿರಿಯರಿಗೆ ಒಂದು ಅವಕಾಶ ಕಲ್ಪಿಸಲಾಗಿದೆ. ಒಟ್ಟಾಗಿ ಖುಷಿಪಡುವ ಕಾರ್ಯಕ್ರಮ ಇದಾಗಿದೆ. ಕೆಸರಿನ ಗದ್ದೆಯಲ್ಲಿ ಮಕ್ಕಳು ಕುಣಿದಾಡುವ ದೃಶ್ಯಗಳು ರಮಣೀಯ ಎಂದರು.

ಜೈ ಶಂಕರ್ ಮಾತೃ ಮಂಡಳಿಯ ಗೌರವಾಧ್ಯಕ್ಷೆ ಹೇಮಲತಾ ಆರ್. ಸಾಲ್ಯಾನ್, ಭೋಜ ಸಾಲ್ಯಾನ್, ಸಂಜೀವ ಪೂಜಾರಿ, ಜೈ ಶಂಕರ್ ಮಿತ್ರ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ, ಜೈ ಶಂಕರ್ ಮಾತೃ ಮಂಡಳಿಯ ಅಧ್ಯಕ್ಷೆ ಸೌಮ್ಯಾ ಡಿ, ಗಿರೀಶ್ ಆಚಾರ್ಯ, ಬಾಬು ಸಾಲ್ಯಾನ್, ಮಾಜಿ ಅಧ್ಯಕ್ಷ ದಿವಾಕರ ಆಚಾರ್ಯ, ಅಶೋಕ್ ಅಮೀನ್, ಜಯಕರ ತಿರುವೈಲು, ರಾಜು ಸಾಲ್ಯಾನ್, ರವಿ ತಿರುವೈಲು, ನೂರಾರು ಮಕ್ಕಳು ಹಾಗೂ ಮಕ್ಕಳ ಪೋಷಕರು ಇದ್ದರು. ವಿಜೆ ಮನೋಜ್ ವಾಮಂಜೂರು ನಿರೂಪಿಸಿದರು.

ಮುಟ್ಟಾಳೆ ಧರಿಸಿದ್ದ ಮಹಿಳೆಯರು ಆಟಿ ತಿಂಗಳ ತುಳುನಾಡ ತಿಂಡಿ-ತಿನಸು ಬಡಿಸಲು ಸಾಲಾಗಿ ನಿಂತಿದ್ದರು. ಕೆಸರಿನ ಗದ್ದೆಗೆ ಮಕ್ಕಳು ಮತ್ತು ಹಿರಿಯರು ಇಳಿಯುವುದಕ್ಕಿಂತ ಮುಂಚೆ ವೇದಿಕೆಯಲ್ಲಿ ಕೋಳಿ ಅಂಕ ನಡೆಸಲಾಯಿತು. ಕೆಸರಿನ ಗದ್ದೆಯಲ್ಲಿ ಓಟ, ನಿಧಿ ಹುಡುಕಾಟ, ನೃತ್ಯ, ಮಡಕೆ ಒಡೆಯುವ ಸ್ಪರ್ಧೆ ಮತ್ತಿತರ ಕ್ರೀಡೆ ಆಯೋಜಿಸಲಾಗಿತ್ತು.

ಆಟಿದ ತಿಂಡಿ ತಿನಸು :

ಜೈ ಶಂಕರ್ ಮಾತೃ ಮಂಡಳಿಯ ಸದಸ್ಯೆಯರು ಸಿದ್ಧಪಡಿಸಿದ ತೇಟ್ಲದ ಗಸಿ, ಕಂಚಲ, ಜೀಗುಜ್ಜೆ ಗಸಿ, ತಙಂಕ್ ಸುಕ್ಕ, ಕಡ್ಲೆ ಬಲ್ಯಾರ್, ಉಪ್ಪಡ್ ಪಚ್ಚಿರ್, ಕಲಿ(ಶೇಂದಿ), ಪತ್ರೋಡೆ, ಪೆಲಕಾಯಿ ಗಟ್ಟಿ, ಸಾರ್ನಡ್ಡೆ, ಗೋಳಿದಿರೆ ಮತ್ತು ಮಂಜಲ್ದಿರೆ ಗಟ್ಟಿ, ನೆಲ್ಲಿ ಪುಂಡಿ, ಕೋರಿದ ಸಾರ್, ಎಟ್ಟಿದ ಪೊಡಿ ಚಟ್ನಿ, ಕುಕ್ಕುದ ಚಟ್ನಿ, ಕುಡುತ ಚಟ್ನಿ, ಮರುವಾಯಿ ಪುಂಡಿ ಮತ್ತಿತರ ಆಟಿ ಖಾದ್ಯಗಳು ಬಾಯಲ್ಲಿ ನೀರೂರಿಸುವಂತಿತ್ತು.

By suddi9

Leave a Reply

Your email address will not be published. Required fields are marked *