ಕೈಕಂಬ : ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜೂ. ೧೪ರಂದು ಶಾಲಾ ವಿದ್ಯಾರ್ಥಿಗಳ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು.ಶಾಲಾ ಹಳೆ ವಿದ್ಯಾರ್ಥಿ, ಸ್ವ-ಉದ್ಯೋಗಿ ಅನಿತಾ ಡಿ’ಮೆಲ್ಲೊ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳತ್ತ ಗಮನಹರಿಸಬೇಕು. ಉತ್ತಮ ವ್ಯಕ್ತಿಗಳೊಂದಿಗೆ ಸಕಾರಾತ್ಮಕ ವಿಷಯಗಳ ಚರ್ಚೆ ನಡೆಸುತ್ತ ಸಮಯ ಕಳೆಯುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿದ ತಿರುವೈಲು ಕ್ಲಸ್ಟರ್‌ನ ಮಾಜಿ ಸಂಪನ್ಮೂಲ ವ್ಯಕ್ತಿ(ಸಿಆರ್‌ಪಿ), ತಿರುವೈಲು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಪುಷ್ಪಾವತಿ ಅವರನ್ನು ಶಾಲಾ ಆಡಳಿತ ಮಂಡಳಿ ಸನ್ಮಾನಿಸಿತು. ಯಾವುದೇ ಕೆಲಸದಲ್ಲಿ ಶಿಸ್ತು ಮುಖ್ಯ. ಅದನ್ನು ಪಾಲಿಸಿದಲ್ಲಿ ಜೀವನ ಉತ್ತಮಗೊಳ್ಳುತ್ತದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಂಸತ್ತು ಚಟುವಟಿಕೆ ನಾಯಕತ್ವ ಗುಣ ಕಲಿಸಿಕೊಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಅವರು ಮಾತನಾಡಿ, ಈ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳು ಭಾಗ್ಯವಂತರು. ವಿದ್ಯಾರ್ಥಿಗಳ ಎಲ್ಲ ಅವಶ್ಯಕತೆಗಳಿಗೆ ಪೂರಕವಾದ ಶಿಕ್ಷಣ ಇಲ್ಲಿ ಸಿಗುತ್ತಿದೆ. ಕೇವಲ ಅಂಕ ಗಳಿಸಿದರೆ ಸಾಲದು. ಅದರೊಟ್ಟಿಗೆ ಕೌಶಲ್ಯವೂ ಇರಬೇಕು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಜೊತೆಗೆ ಉಜ್ವಲ ಭವಿಷ್ಯ ರೂಪಿಸಲು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ಪ್ರಾಥಮಿಕ ವಿಭಾಗದ ಸಂಸತ್ತು ನಾಯಕಯಾಗಿ ಗೌತಮ್ ಆಯ್ಕೆಯಾದರೆ ವಿಪಕ್ಷ ನಾಯಕಿಯಾಗಿ ಕು. ಮಾನ್ಯಾ ಆಯ್ಕೆಯಾದರು. ಪ್ರೌಢಶಾಲೆಯ ಸಂಸತ್ತು ನಾಯಕಿಯಾಗಿ ಕು. ಮಧು ಹಾಗೂ ವಿಪಕ್ಷ ನಾಯಕಿಯಾಗಿ ಕು. ತೃಷಾ ಆಯ್ಕೆಯಾದರು. ಬಹುಖಾತೆಗಳು ಒಳಗೊಂಡ ಸಚಿವ ಸಂಪುಟ ರಚಿಸಲಾಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕಿ ಹರಿಣಾಕ್ಷಿ ಅವರು ವಿದ್ಯಾರ್ಥಿ ಸಚಿವರುಗಳಿಗೆ ಪ್ರಮಾಣವಚನ ಬೋಧಿಸಿದರು. ಶಾಲಾ ವತಿಯಿಂದ ಪತ್ರಕರ್ತ ಧನಂಜಯ ಗುರುಪುರ ಅವರನ್ನು ಗೌರವಿಸಲಾಯಿತು.
ಶಾಲಾ ಆಡಳಿತ ಮಂಡಳಿ ಸದಸ್ಯ ಉದಯ ಕುಮಾರ್ ಕುಡುಪು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಿಠಲ್ ವಾಗ್ಮೋರೆ, ಯೋಗ ಮತ್ತು ದೈಹಿಕ ಶಿಕ್ಷಕ ಶೇಖರ ಕಡ್ತಲ ಉಪಸ್ಥಿತರಿದ್ದರು. ಕು. ವೈಷ್ಣವಿ ನಿರೂಪಿಸಿದರೆ, ವಿಪಕ್ಷ ನಾಯಕಿ ಕು. ತೃಷಾ ವಂದಿಸಿದರು.
