ಪೆರಾರ ಬಲವಾಂಡಿ ದೈವಸ್ಥಾನದ ಮುಕ್ಕಾಲ್ದಿ
ಬಾಲಕೃಷ್ಣ ಶೆಟ್ಟಿ ಪರ ಹೈಕೋರ್ಟ್ ತೀರ್ಪು
ಗುರುಪುರ : ಮಂಗಳೂರು ತಾಲೂಕಿನ ಪೆರಾರ ಶ್ರೀ ಬ್ರಹ್ಮದೇವರು ಇಷ್ಟದೇವತಾ ಬಲವಾಂಡಿ, ವ್ಯಾಘ್ರಚಾಮುಂಡಿ ದೈವಸ್ಥಾನದ ಬಲವಾಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ ಅವರ ಸೇವಾ ಕಾರ್ಯ ಅನರ್ಹಗೊಳಿಸಿ ರಾಜ್ಯ ಧಾರ್ಮಿಕ ಮತ್ತು ಚಾರಿಟೇಬಲ್ ದತ್ತಿ ಇಲಾಖೆಯ ಆಯುಕ್ತರು ನೀಡಿದ್ದ ಆದೇಶಕ್ಕೆ ಮಾ. ೧೦ರಂದು ರಾಜ್ಯ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮುಂದಿನ ಆದೇಶದವರೆಗೆ ಶೆಟ್ಟಿ ಅವರು ದೈವದ ದರ್ಶನ ಪಾತ್ರಿಯಾಗಿ ಸೇವಾ ಕಾರ್ಯ ನಡೆಸಲು ಸೂಚಿಸಿದೆ.

ಬಲವಾಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿಯವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿರುವ ಶ್ರೀ ಕ್ಷೇತ್ರ ಪೆರಾರ ಸೇವಾ ಸಮಿತಿ(ರಿ) ಕಳೆದ ಬಾರಿ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿತ್ತು. ದೂರು ಪರಿಶೀಲಿಸಿದ್ದ ಆಯುಕ್ತರು ಶೆಟ್ಟಿಯವರ ಸೇವಾ ಕಾರ್ಯ ಅನರ್ಹಗೊಳಿಸಿ ಫೆಬ್ರವರಿ ೨೭ರಂದು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಬಾಲಕೃಷ್ಣ ಶೆಟ್ಟಿ ಅವರು ರಾಜ್ಯ ಹೈಕೋರ್ಟ್ ಮೆಟ್ಟಲೇರಿದ್ದರು.
ಹೈಕೋರ್ಟ್ನ ವಿಭಾಗೀಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಾ. ೧೦ರಂದು ಆದೇಶ ನೀಡಿ, ಮುಂದಿನ ವಿಚಾರಣೆವರೆಗೆ ಬಾಲಕೃಷ್ಣ ಶೆಟ್ಟಿ ಅವರು ದೈವದ ದರ್ಶನ ಪಾತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಮಧ್ಯಂತರ ತಡೆಯಾಜ್ಞೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಶೆಟ್ಟಿ ಅವರ ಪರವಾಗಿ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದಾರೆ. ಪೆರಾರ ಬಲವಾಂಡಿ ದೈವಸ್ಥಾನದಲ್ಲಿ ಮಾ. ೧೨ರಿಂದ ೧೫ರವರೆಗೆ ಕಾಲಾವಧಿ ಜಾತ್ರೆ ನಡೆಯಲಿದೆ.