ಜೀವ ಪಣಕ್ಕಿಟ್ಟು ವಿದ್ಯಾರ್ಥಿಗಳ ಬಸ್ ಪ್ರಯಾಣ ವಿಚಾರ; ಕೊನೆಗೂ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಿದ ಸಾರಿಗೆ ಇಲಾಖೆ
ಗದಗ: ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಇಲ್ಲದೆ ಎಷ್ಟೋ ಕಡೆ ಇಂದಿಗೂ ಶಾಲಾ-ಕಾಲೇಜುಗಳಿಗೆ ಹೋಗಿ ಬರುವ ಮಕ್ಕಳು ತಮ್ಮ ಜೀವದ ಹಂಗು ತೊರೆದು ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಗದಗದ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲೂ ಇದೇ ಹಲವು ಸಮಯಗಳಿಂದ ಇದೀ ಪರಿಸ್ಥಿತಿ ಇದ್ದು, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬ ಕೂಗು ಕೇಳಿ ಬರುತ್ತಿದ್ದು. ಕೊನೆಗೂ ವರದಿಗಳ ಬಳಿಕೆ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಗಿ ಗ್ರಾಮದ ವಿದ್ಯಾರ್ಥಿಗಳು ಸರಿಯಾದ ಬಸ್ ವ್ಯವಸ್ಥೆಗಳಿಲ್ಲದ ಕಾರಣ ಜೀವ ಪಣಕ್ಕಿಟ್ಟು ರಶ್ ಇದ್ದರೂ ಬಾಗಿಲಲ್ಲೇ ನೇತಾಡಿಕೊಂಡೇ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಮಕ್ಕಳ ಈ ಅಪಾಯಕಾರಿ ಪ್ರಯಾಣದ ಬಗ್ಗೆ ವರದಿ ಬಿತ್ತರಿಸಲಾಗಿದ್ದು, ಇದರಿಂದ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ಈ ಗ್ರಾಮಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಹೇಳಿದೆ.
ವಿದ್ಯಾರ್ಥಿಗಳ ಅಪಾಯಕಾರಿ ಬಸ್ ಪ್ರಯಾಣದ ಬಗ್ಗೆ ನಮ್ಮ ಗಮನಕ್ಕೂ ಬಂದಿದ್ದೂ, ತಕ್ಷಣ ಶಿಗ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಲಾಗಿದೆ. ಇಲ್ಲಿಗೆ ಎರಡು ಹೆಚ್ಚುವರಿ ಬಸ್‌ಗಳ ಅವಶ್ಯಕತೆಯಿದ್ದು, ಲಕ್ಷ್ಮೇಶ್ವರ ಡಿಪೋ ಮ್ಯಾನೇಜರ್ ಜೊತೆ ಮಾತನಾಡಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸೂಚಿಸಲಾಗಿದೆ ಎಂದು ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜು ಹೇಳಿಕೆ ನೀಡಿದ್ದಾರೆ.