ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಹುತಾತ್ಮ ಯೋಧನ ಪತ್ನಿಯ ಎರಡೂ ಮುಂಗೈ ಕಟ್
ಹೇರ್‌ಡ್ರೈಯರ್ ಬ್ಲಾಸ್ಟ್ ಆಗಿ ಹುತಾತ್ಮ ಯೋಧನ ಪತ್ನಿಯ ಎರಡೂ ಮುಂಗೈ ಕಟ್ ಆದಂತಹ ಹೃದಯವಿದ್ರಾವಕ ಘಟನೆ ಬಾಗಲಕೋಟೆಯ ಇಳಕಲ್ ನಗರದಲ್ಲಿ ನಡೆದಿದೆ. ಆನ್‌ಲೈನ್‌ನಲ್ಲಿ ತರಿಸಿದ್ದಂತಹ ಹೇರ್ ಡ್ರೈಯರ್ ಅನ್ನು ಬಳಸಲು ಮುಂದಾದಾಗ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿದೆ. ಹೇರ್ ಡ್ರೈಯರ್ ಸ್ಫೋಟಗೊಂಡ ಪರಿಣಾಮ ಬಸಮ್ಮ ಯರನಾಳ ಎಂಬವರ ಎರಡು ಕೈಗಳ ಮುಂಗೈ ಛಿದ್ರ ಛಿದ್ರವಾಗಿದ್ದು, ಬೆರಳುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸಮ್ಮ ಯರನಾಳ ಅವರು ಹುತಾತ್ಮ ಯೋಧ ಪಾಪಣ್ಣ ಮಾಜಿ ಅವರ ಪತ್ನಿ. ಪಾಪಣ್ಣ ಮಾಜಿ ಯೋಧರಾಗಿದ್ದಾರೆ. 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಪಾಪಣ್ಣ ಮೃತಪಟ್ಟಿದ್ದರು. ಗಂಡನನ್ನು ಕಳೆದುಕೊಂಡಿದ್ದ ಬಸಮ್ಮ ಅವರು ಬಾಗಲಕೋಟೆಯ ಇಳಕಲ್ ನಗರದಲ್ಲಿ ವಾಸಿಸುತ್ತಿದ್ದರು. ಇದೀಗ ಈ ಘಟನೆಯಿಂದ ಅವರು ತಮ್ಮ ಕೈಗಳನ್ನು ಕಳೆದುಕೊಂಡಿದ್ದಾರೆ.
ಅಂದಹಾಗೆ ಆನ್‌ಲೈನ್‌ನಲ್ಲಿ ಬಂದಿದ್ದ ಈ ಹೇರ್‌ಡ್ರೈಯರ್ ಬಸಮ್ಮ ಅವರ ಹೆಸರಿಗೆ ಬಂದಿದ್ದಲ್ಲ. ಬದಲಾಗಿ ಶಶಿಕಲಾ ಎಂಬುವರ ಹೆಸರು ನಂಬರ್ ಹೊಂದಿದ್ದ ಡಿಟಿಡಿಸಿ ಪಾರ್ಸಲ್ ಕೊರಿಯರ್ ಇದಾಗಿದ್ದು, ಶಶಿಕಲಾ ಪತಿ ಕೂಡ ಮೃತ ಯೋಧರಾಗಿದ್ದಾರೆ. ಪಾರ್ಸಲ್‌ನಲ್ಲಿ ಶಶಿಕಲಾ ಹೆಸರು ಮೊಬೈಲ್ ನಂಬರ್ ಇದ್ದ ಕಾರಣ ಕೊರಿಯರ್‌ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಆದರೆ ಶಶಿಕಲಾ ಬೇರೆ ಊರಲ್ಲಿ ಇದ್ದ ಕಾರಣ ಬಸಮ್ಮ ಅವರಿಗೆ ಕೊರಿಯರ್ ಪಡೆದು ಓಪನ್ ಮಾಡಲು ಹೇಳಿದ್ದರು. ಬಸಮ್ಮ ಅವರು ಕೊರಿಯರ್ ಓಪನ್ ಮಾಡಿದಾಗ ಅದರಲ್ಲಿ ಹೇರ್ ಡ್ರೈಯರ್ ಇತ್ತು. ಬಸಮ್ಮ ಅವರಿಗೆ ಪಕ್ಕದ ಮನೆಯವರು ಇದನ್ನು ಆನ್ ಮಾಡಿ ತೋರಿಸಿ ಅಂದಿದ್ದಕ್ಕೆ ಸ್ವಿಚ್ ಆನ್ ಮಾಡಿದಾಗ ಹೇರ್‌ಡ್ರೈಯರ್ ಬ್ಲಾಸ್ಟ್ ಆಗಿದೆ. ಕ್ಷಣ ಮಾತ್ರದಲ್ಲಿ ಬಸಮ್ಮ ಅವರ ಕೈ ಪುಡಿ ಪುಡಿಯಾಗಿದ್ದು, ನಂತರ ಬಸಮ್ಮ ಅವರನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ಶಶಿಕಲಾ ಅವರು ಹೇರ್ ಡ್ರೈಯರ್ ಆರ್ಡರ್ ಮಾಡೇ ಇಲ್ಲ ಎಂದು ಹೇಳಲಾಗಿದ್ದು, ಆದರೆ ಅವರ ಹೆಸರಲ್ಲಿ ಹೇರ್ ಡ್ರೈಯರ್ ಕೊರಿಯರ್ ಹೇಗೆ ಬಂದು? ಇದನ್ನು ಆರ್ಡರ್ ಮಾಡಿದವರು ಯಾರು? ಅದಕ್ಕೆ ಹಣ ಸಂದಾಯ ಮಾಡಿದವರು ಯಾರು? ಎಲ್ಲಿಂದ ಹೇರ್ ಡ್ರೈಯರ್ ಪ್ಯಾಕ್ ಆಗಿ ಬಂತು ಎಂದು ಇಳಕಲ್ ಪೊಲೀಸರು ತನಿಖೆ ನಡೆಸಿದ್ದಾರೆ.ಮೂಲಗಳ ಪ್ರಕಾರ ಹೇರ್ ಡ್ರೈಯರ್ ವಿಶಾಖಪಟ್ಟಣದಲ್ಲಿ ಮೆನುಪ್ಯಾಕ್ಚರ್ ಆಗಿದ್ದು, ಬಾಗಲಕೋಟೆಯಿಂದ ಕೋರಿಯರ್ ಬಂದಿದೆ ಎನ್ನಲಾಗಿದೆ. ಇದರ ಹಿಂದಿನ ಕಾರಣಗಳನ್ನು ಪೊಲೀಸರು ಹುಡುಕುತ್ತಿದ್ದಾರೆ.