ಬಂಟ್ವಾಳ: ವಿಕಾಸಂ ಸೇವಾ ಫೌಂಡೇಶನ್ ನ ಬಿ.ಸಿ.ರೋಡ್ ಕಚೇರಿಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ವೈದ್ಯೆ ಡಾ. ಅನುರಾಧಾ ಕಾಮತ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಿವ್ಯಾಂಗ ಮಕ್ಕಳೆಂದು ಹೆತ್ತವರು ಬೇಸರಿಸದೆ, ಸರಿಯಾದ ತರಬೇತಿಯನ್ನು ನೀಡಿದಾಗ, ಮಕ್ಕಳು ಸಬಲರಾಗುತ್ತಾರೆ ಎಂದು ಅನುರಾಧಾ ಕಾಮತ್ ಹೇಳಿದರು.

ಸಕ್ಷಮ ಕರ್ನಾಟಕದ ದಕ್ಷಿಣ ಪ್ರಾಂತ ಪ್ರಮುಖ್ ಡಿ. ಕೇಶವ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ದಿವ್ಯಾಂಗರಲ್ಲಿ ವಿಶೇಷವಾದ ಪ್ರತಿಭೆ ಇರುತ್ತದೆ, ಅವರು ಸಮಾಜದ ವೈವಿಧ್ಯತೆಯ ಪ್ರತೀಕವಾಗಿದ್ದಾರೆ, ಅವರ ಅಭಿವೃದ್ಧಿಯ ಮೂಲಕ ಸಮಾಜವೂ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

ವಿಕಾಸಂ ಸೇವಾ ಫೌಂಡೇಶನ್ ನ ಆಡಳಿತ ನಿರ್ದೇಶಕ ಗಣೇಶ್ ಭಟ್ ವಾರಣಾಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ವಿಕಾಸಂ ಸೇವಾ ಫೌಂಡೇಶನ್ ಕಳೆದೊಂದು ವರುಷದಲ್ಲಿ ದಿವ್ಯಾಂಗ ಮಕ್ಕಳಿಗೆ ವಿವಿಧ ತರಬೇತಿಗಳನ್ನು ನೀಡಿ ಸಮನ್ವಯ ಶಿಕ್ಷಣಕ್ಕೆ ಅವರನ್ನು ಅಣಿಗೊಳಿಸುತ್ತಿರುವ ರೀತಿ, ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಕ್ಕಳಲ್ಲಿ ಆರಂಭಿಕ ಹಂತದಲ್ಲಿರುವ ವೈಕಲ್ಯತೆಯನ್ನು ಕಂಡುಹಿಡಿಯುವ ಕುರಿತಾಗಿ ಸಂಸ್ಥೆ ತರಬೇತಿಯನ್ನು ಕೊಡುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭ ಮಕ್ಕಳಿಗೆ ವಿವಿಧ ವಿನೋದ ಆಟಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಿರಿಯ ಶಿಕ್ಷಕಿ ರೇಣುಕಾ ವಂದನಾರ್ಪಣೆ ನಡೆಸಿದರು. ಎಮ್ ಎಸ್ ಡಬ್ಲ್ಯು ವಿದ್ಯಾರ್ಥಿನಿ ಮಾನಸ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *