ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಎಸಿ ಕಚೇರಿಯನ್ನೇ ಜಪ್ತಿ ಮಾಡಿ ಎಂದ ಕೋರ್ಟ್, ಪಿಠೋಪಕರಣಗಳನ್ನು ಹೊತ್ತೊಯ್ದ ದೂರುದಾರರು
ಚಿಕ್ಕಬಳ್ಳಾಪುರ ಸೀನಿಯರ್ ಸಿವಿಲ್ ಜಡ್ಜ್ ಕೋರ್ಟ್ ಎಸಿ ವಿರುದ್ಧ ಮಹತ್ವ ತೀರ್ಪು ನೀಡಿದೆ. ಚಿಕ್ಕಬಳ್ಳಾಪುರ ಎಸಿ ಕಚೇರಿಯನ್ನೇ ಜಪ್ತಿ ಮಾಡುವಂತೆ ದೂರುದಾರರಿಗೆ ಆದೇಶಿಸಿದೆ. ಅದರಂತೆ ದೂರುದಾರರು ಚಿಕ್ಕಬಳ್ಳಾಪುರ ಎಸಿ ಕಚೇರಿಯಲ್ಲಿರುವ ಕಂಪ್ಯೂಟರ್, ಟೇಬಲ್, ಕೈಗೆ ಏನೇನು ಸಿಗುತ್ತೋ ಎಲ್ಲವನ್ನೂ ಹೊತ್ತುಕೊಂಡು ಹೋಗಿದ್ದಾರೆ. ಸಾಲದ್ದಕ್ಕೆ ಎಸಿ ಸಾಹೇಬ್ರು ಕೂರೋ ಖುರ್ಚಿಯನ್ನೂ ಸಹ ಬಿಡಲಿಲ್ಲ. ತಪ್ಪು ಯಾರೇ ಮಾಡಿದ್ರು ತಪ್ಪು ಎನ್ನುವುದನ್ನು ಮುಲಾಜಿಲ್ಲದೆ ಹೇಳಿರೋ ಕೋರ್ಟ್, ಚಿಕ್ಕಬಳ್ಳಾಪುರ ಎಸಿ ಕಚೇರಿಯ ಚರಾಸ್ತಿ ಜಪ್ತಿ ಮಾಡುವಂತೆ ದೂರುದಾರರಿಗೆ ಆದೇಶಿಸಿದೆ. ಕೋರ್ಟ್ ಆದೇಶದ ಬಲದಿಂದಲೇ ದೂರುದಾರರು ಎಸಿ ಕಚೇರಿಯ ಪೀಠೋಪಕರಣಗಳನ್ನು ಮುಲಾಜಿಲ್ಲದಂತೆ ತೆಗೆದುಕೊಂಡು ಹೋಗಿದ್ದಾರೆ. ಕಚೇರಿಯ ಚೇರ್ಗಳನ್ನು ತೆಗೆದುಕೊಂಡು ಹೋಗಿತ್ತಿರುವುದನ್ನ ಸಹಾಯಕ ಆಯುಕ್ತ ಅಶ್ವಿನ್ ಬೆಪ್ಪರಾಗಿ ನಿಂತುಕೊಂಡಿದ್ದರು.
ಇಷ್ಟಕ್ಕೆಲ್ಲಾ ಕಾರಣ ಆಗಿದ್ದಿಷ್ಟು, ಅದು 2011ನೇ ಇಸವಿ. ಬಾಗೇಪಲ್ಲಿ ಡಿವಿಜಿ ರಸ್ತೆ ಅಗಲೀಕರಣಕ್ಕೆಂದು ಬೀದಿ ಬದಿ ಅಂಗಡಿ ಮುಂಗಟ್ಟುಗಳನ್ನು ಇಟ್ಟುಕೊಂಡಿದ್ದವರೆನ್ನೆಲ್ಲಾ ಸ್ಥಳಾಂತರಿಸಲಾಗಿತ್ತು. ಅಗಲೀಕರಣದ ವೇಳೆ ಜಾಗ ಕಳೆದುಕೊಂಡವರಿಗೆ ಪರಿಹಾರವೆಂದು ಜಿಲ್ಲಾಡಳಿತ ಒಂದು ಅಡಿಗೆ ಕೇವಲ 240 ರೂಪಾಯಿಗಳಂತೆ ಪಾವತಿ ಮಾಡಿತ್ತು. ಪರಿಹಾರದ ಮೊತ್ತ ಸಾಲದೇ ಇದ್ದಾಗ ಜಾಗ ಕಳೆದುಕೊಂಡವರು ಕೋರ್ಟ್ ಮೆಟ್ಟಿಲೇರಿದರು. ಚಿಕ್ಕಬಳ್ಳಾಪುರದ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಕೋರ್ಟ್ ಜಾಗ ಕಳೆದುಕೊಂಡ ದೂರುದಾರರಿಗೆ ಪ್ರತಿ ಒಂದು ಅಡಿಗೆ 890 ರೂಪಾಯಿಗಳಂತೆ ಪರಿಹಾರ ನೀಡುವಂತೆ ಆದೇಶಿಸಿತ್ತು. ಕಳೆದ ಎರಡು ತಿಂಗಳ ಹಿಂದೆಯೇ ಕೋರ್ಟ್ ಆದೇಶ ಹೊರಡಿಸಿದರೂ ಚಿಕ್ಕಬಳ್ಳಾಪುರ ಎಸಿ ಪರಿಹಾರದ ಮೊತ್ತವನ್ನು ಕೊಟ್ಟಿರಲಿಲ್ಲ. ಜೊತೆಗೆ ಕೋರ್ಟ್ ಆದೇಶಕ್ಕೂ ಕೇರ್ ಮಾಡದೆ ನಿರ್ಲಕ್ಷ್ಯವಹಿಸಿದ್ದಾರೆ. ಹೀಗಾಗಿ ಎಸಿ ಕಚೇರಿಯ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ದೂರುದಾರರಿಗೆ ಕೋರ್ಟ್ ಆದೇಶಿಸಿದೆ.