ಗುರುಪುರ: 2021ರ ಅತ್ಯಾಚಾರ ಪ್ರಕರಣ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ
ಗುರುಪುರ : 2021ರಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಪರಾರಿಯಲ್ಲಿರುವ ರಾಜ್ ಟೈಲ್ಸ್ ಹೆಂಚಿನ ಕಾರ್ಖಾನೆಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಕಳೆದ ಮೂರು ವರ್ಷದ ಹಿಂದೆ ನವಂಬರ್‌ನಲ್ಲಿ ಸದ್ರಿ ಹೆಂಚಿನ ಕಾರ್ಖಾನೆಯಲ್ಲಿ ಹೋಲೋ ಬ್ಲಾಕ್ಸ್ ಮತ್ತಿತರ ಕೆಲಸ ಮಾಡುತ್ತಿದ್ದ ಉತ್ತರ ಭಾರತದ ಕುಟುಂಬವೊಂದರ 8 ವರ್ಷದ ಬಾಲಕಿಯ ಮೇಲೆ ಅಲ್ಲೇ ಕೆಲಸ ಮಾಡುತ್ತಿದ್ದ ಜಯಸಿಂಗ್, ಮುಕೇಶ್ ಸಿಂಗ್ ಮತ್ತು ಮನೀಶ್ ತಿರ್ಕಿ ಎಂಬವರು ಅತ್ಯಾಚಾರಗೈದು, ಬರ್ಬರವಾಗಿ ಕೊಲೆಗೈದು ಕಾರ್ಖಾನೆಯ ಕೊಳವೆಯೊಳಗೆ ಶವ ಬಚ್ಚಿಟ್ಟಿದ್ದರು.
ಬಾಲಕಿ ನಾಪತ್ತೆ ಬಗ್ಗೆ ಆಕೆಯ ತಾಯಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ಆಗಿನ ಪೊಲೀಸ್ ನಿರೀಕ್ಷಕಜಾನ್ಸನ್ ಡಿ’ಸೋಜ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಅಪರಾಧ ಕೃತ್ಯ ನಡೆಸಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಭಾರತೀಯ ದಂಡ ಸಂಹಿತೆ ಕಲಂ 120(ಬಿ), 366(ಎ)(ಡಿ), 377, 302, ಆರ್/ಡಬ್ಲ್ಯೂ 3ರನ್ವಯ ಹಾಗೂ ಕಲಂ 5.6 ಪೋಕ್ಸೋದಡಿ ಪ್ರಕರಣ ದಾಖಲಿಸಿ, ಆರೋಪಿಗಳ ವಿಚಾರಣೆ ನಡೆಸಿದ್ದ ಜಾನ್ಸನ್ ಅವರು ಜಿಲ್ಲಾ ತ್ವರಿತಗತಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಾನು ಅವರು ನ. 7ರಂದು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಮೃತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.