ಪಿಲಿಕುಳದಲ್ಲಿ ಜಿಲ್ಲಾಡಳಿತದಿಂದ ಆಧುನಿಕ ಕಂಬಳ ಆಯೋಜನೆ
ನಿಸರ್ಗ ಪ್ರಿಯರಿಂದ `ಜೈವಿಕ ಉದ್ಯಾನ’ ಸಾಧಕ-ಬಾಧಕಗಳ ಚರ್ಚೆ
ಕೈಕಂಬ: ಪಿಲಿಕುಳದಲ್ಲಿ ನ. ೧೭-೧೮ರಂದು ಜಿಲ್ಲಾಡಳಿತ ನಡೆಸಲುದ್ದೇಶಿಸಿರುವ `ಪಿಲಿಕುಳ ಕಂಬಳ’ದ ಬಗ್ಗೆ ಸಾರ್ವಜನಿಕ ವಲಯದಿಂದ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗಿವೆ.ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ಆಯೋಜಿಸುವುದರಿಂದ ಹಲವು ಸಾಧಕ-ಬಾಧಕಗಳಿದ್ದು, ಅವುಗಳ ಬಗ್ಗೆ ಜಿಲ್ಲಾಡಳಿತ ಎಷ್ಟರ ಮಟ್ಟಿಗೆ ಕಾಳಜಿ ಹರಿಸಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಪಿಲಿಕುಳ ನಿಸರ್ಗಧಾಮಕ್ಕೆ ಹತ್ತಿರದ ಪರಿಸರ ಪ್ರೇಮಿಯೊಬ್ಬರು ಸಂಶಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಆಯೋಜಿಸುವ ಕಂಬಳ ಇದಾಗಿದ್ದು, ಸರ್ಕಾರಿ ಮಟ್ಟದಲ್ಲಿ ಕಂಬಳಕ್ಕೆ ಉತ್ತೇಜನ ಸಿಕ್ಕಿದಂತಾಗುತ್ತದೆ. ಕಂಬಳದಲ್ಲಿ ನಿಯಮ ಉಲ್ಲಂಘಿಸುವ ಪ್ರಸಂಗಗಳು ಮತ್ತು ಅವಧಿ ಮೇಲೆ ನಿಯಂತ್ರಣ ಹೇರಲು ಸಾಧ್ಯವಿದೆ. ೨೪ ತಾಸಿನೊಳಗೆ ಕಂಬಳ ಮುಗಿಸಿದರೆ ಅದು ಇತರಿಗೆ ಮಾದರಿಯಾಗಬಹುದು. ಕಂಬಳದ ಮೂಲಕ ಪಿಲಿಕುಳದ ಗುತ್ತಿನ ಮನೆ ಹಾಗೂ ರೈತಾಪಿ ವರ್ಗಕ್ಕೆ ನೀಡಲಾಗಿರುವ ಆದ್ಯತೆ ಅರಿವಾಗಬಹುದು.
ಆಧುನಿಕ ಕಂಬಳದ ಮೂಲಕ ಜೈವಿಕ ಉದ್ಯಾನಕ್ಕೆ ಪ್ರವಾಸಿಗರ ಆಕರ್ಷಿಸಬಹುದು ಮತ್ತು ಪಿಲಿಕುಳಕ್ಕೆ ಆದಾಯ ತರಬಲ್ಲದು ಎಂದು ಹೇಳಲಾಗುತ್ತಿದ್ದರೂ, ಪಿಲಿಕುಳ ಉದ್ಯಾನದ ಮೂಲಗಳು ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿವೆ. ಕಂಬಳಕ್ಕೆ ಬರುವ ಕಂಬಳ ಪ್ರಿಯರು ಉದ್ಯಾನದ ಪ್ರಾಣಿ-ಪಕ್ಷಿ ವೀಕ್ಷಿಸುವ ಸಂದರ್ಭಗಳು ಕಡಿಮೆ. ಅಲ್ಲದೆ ಕಂಬಳಕ್ಕೆ ಬರುವವರು ಉದ್ಯಾನದೊಳಗೆ ಉಚಿತವಾಗಿ ಪ್ರವೇಶಿಸುತ್ತಾರೆ ಎಂದು ಆ ಮೂಲಗಳು ಹೇಳಿವೆ.
ಕಂಬಳ ಬಾಧಕಗಳು :
ಬೇರೆಡೆ ಕಂಬಳ ಆಯೋಜನೆಗಿಂತ ಭಿನ್ನ ಪಿಲಿಕುಳ ಕಂಬಳ. ಗುಡ್ಡದಲ್ಲಿ ಕರೆ ನಿರ್ಮಿಸಲಾಗಿದೆ. ಇದರಿಂದ ಉದ್ಯಾನದ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ತೊಂದರೆ ತಪ್ಪಿದಲ್ಲ. ಯಥೇಚ್ಛ ಪ್ಲಾಸ್ಟಿಕ್ ತ್ಯಾಜ್ಯ ಬೀಳಲಿದೆ. ಶಬ್ದ ಮಾಲಿನ್ಯದಿಂದ ಉದ್ಯಾನದ ಹುಲಿ, ಸಿಂಹ ಹಾಗೂ ಇತರ ಪ್ರಾಣ-ಪಕ್ಷಿಗಳಿಗೆ ಕಿರಿಕಿರಿ ಉಂಟಾಗಲಿದೆ. ಸಾವಿರಾರು ಡೀಸೆಲ್ ವಾಹನಗಳ ಪ್ರವೇಶ ಹಾಗೂ ಡೀಸೆಲ್ ಜನರೇಟಗಳ ಹಾವಳಿಯಿಂದ ವಾಯು ಮಾಲಿನ್ಯ ಉಂಟಾಗಿ ಉದ್ಯಾನದ ಪ್ರಾಣಿ, ಪಕ್ಷಿಗಳ ಸಹಿತ ಫಲಪುಷ್ಪ-ವೃಕ್ಷರಾಶಿ ಮೇಲೆ ದುಷ್ಪರಿಣಾಮ ಬೀರಲಿದೆ. ಕಂಬಳಕ್ಕೆ ಆಗಮಿಸುವವರಿಂದ ಉಳಿಕೆ ಆಹಾರ ಪೊಟ್ಟಣಗಳು ಸ್ಥಳದಲ್ಲೇ ಉಳಿದುಕೊಳ್ಳಲಿದ್ದು, ಇದರಿಂದ ಉದ್ಯಾನದೊಳಗಿನ ಪ್ರಾಣಿ-ಪಕ್ಷಿಗಳಿಗೆ ಫುಡ್ ಪಾಯ್ಸನ್ ಆಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಜೊತೆಗೆ ಕಂಬಳದ ಸಂದರ್ಭದಲ್ಲಿ ಯಥೇಚ್ಛ ಬಳಸಲಾಗುವ ಪ್ರಖರ ದೀಪಗಳಿಂದ(ಟವರ್ ಲೈಟ್) ಪ್ರಾಣಿ-ಪಕ್ಷಿಗಳ ಆರೋಗ್ಯ ಕೆಡುವ ಸಾಧ್ಯತೆ ಇದೆ ಎಂಬುದು ಪ್ರಾಣಿ-ಪಕ್ಷಿ ತಜ್ಞರು ಅನಿಸಿಕೆಯಾಗಿದೆ.
ಪಿಲಿಕುಳ ಒಂದು ರಕ್ಷಿತಾರಣ್ಯದಂತಿರುವ ಉದ್ಯಾನ. ಗುಡ್ಡ ಪ್ರದೇಶವಾದ ಇಲ್ಲಿ ಕಂಬಳ ನಡೆಸುವ ಬದಲಾಗಿ ಹತ್ತಿರದ ಗದ್ದೆ ಪ್ರದೇಶದಲ್ಲಿ ಕಂಬಳ ನಡೆಸಬಹುದಿತ್ತು. ನಿಸರ್ಗಧಾಮ ಆಧುನಿಕ ಕಂಬಳ ನಡೆಸಲು ಯೋಗ್ಯ ಜಾಗವಲ್ಲ ಎಂಬೀ ಕಾರಣಕ್ಕಾಗಿಯೇ ೧೨ ವರ್ಷಗಳ ಹಿಂದೆಯೇ ಇಲ್ಲಿನ ಕಂಬಳ ಸ್ಥಗಿತಗೊಳಿಸಲಾಗಿತ್ತು. ಏನೇ ಇದ್ದಾಗಲೂ ಕಂಬಳದಿAದ ಪಿಲಿಕುಳ ನಿಸರ್ಗಧಾಮದ ಮೇಲಾಗಬಹುದಾದ ಸಾಧಕ-ಬಾಧಕಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಂಬಳ ಸಮಿತಿ ಸೂಕ್ತ ನಿಗಾ ಇಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಮುಂದೆ ಪಿಲಿಕುಳ ಕಂಬಳವು ಸಾರ್ವಜನಿಕರಿಂದ ಟೀಕೆಗೊಳಗಾಗಬಹುದು.
“ಜಿಲ್ಲಾಡಳಿತದ ವತಿಯಿಂದ ಕಂಬಳ ನಡೆಸುವುದು ತುಂಬಾ ಸಂತೋಷ ತಂದಿದೆ. ಆದರೆ ಆಧುನಿಕ ಕಂಬಳ ನಡೆಸಲು ಪಿಲಿಕುಳ ನಿಸರ್ಗಧಾಮದೊಳಗಿನ ಪ್ರದೇಶ ಸೂಕ್ತವೇ ಎಂಬುದು ಜಿಜ್ಞಾಸೆ. ಪಿಲಿಕುಳದಿಂದ ಹೊರಗಿರುವ ಗದ್ದೆ ಅಥವಾ ಖಾಲಿ ಪ್ರದೇಶದಲ್ಲಿ ಕಂಬಳ ನಡೆಸುವುದಕ್ಕೆ ಅಭ್ಯಂತರವಿಲ್ಲ. ಇಲ್ಲಿ ನಡೆಸುವ ಕಂಬಳದ ಮೂಲಕ ನಿಸರ್ಗಧಾಮದ ಪ್ರಾಣಿ, ಪಕ್ಷಿಗಳು, ಪರಿಸರ, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಇನ್ನಿತರ ವಿಷಯಗಳ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಚಿಂತಿಸಬೇಕಿದೆ” ಎಂದು ಗುರುಪುರ ಜೋಡುಕರೆ ಕಂಬಳ ಟ್ರಸ್ಟ್ನ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅಭಿಪ್ರಾಯಪಟ್ಟಿದ್ದಾರೆ.