ಎಡನೀರು ಶ್ರೀಪಾದರ ಮೇಲಾದ
ದಾಳಿಗೆ ಡಾ. ಭರತ್ ಶೆಟ್ಟಿ ಖಂಡನೆ
ಕೈಕಂಬ : ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಶ್ರೀಪಾದರ ವಾಹನಕ್ಕೆ ಕಾಸರಗೋಡು ಬೋವಿಕ್ಕಾನದಲ್ಲಿ ಸಮಾಜಘಾತುಕ ಶಕ್ತಿಗಳು ನಡೆಸಿರುವ ಕೃತ್ಯವನ್ನು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಬಲವಾಗಿ ಖಂಡಿಸಿದ್ದಾರೆ.
ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಪುಂಡರು, ಹಿಂದೂ ವಿರೋಧಿ ಶಕ್ತಿಗಳು ಸವಾಲು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಲ್ಲಿನ ಸರ್ಕಾರದ ವೈಫಲ್ಯ ಜಾಹೀರುಗೊಂಡಿದೆ. ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ಹಾಗೂ ನಮ್ಮ ಸಮಾಜದ ಪೂಜ್ಯ ಮಠಗಳಲ್ಲಿ ಒಂದಾಗಿರುವ ಎಡನೀರು ಮಠದ ಶ್ರೀಪಾದರ ಮೇಲಾಗಿರುವ ದಾಳಿ ಹಿಂದೂ ಸಮಾಜದ ಮೇಲಿನ ದಾಳಿಯಾಗಿದೆ ಎಂದರು.
ಸರ್ಕಾರ ತಕ್ಷಣ ಶ್ರೀಪಾದರ ಮೇಲೆ ದಾಳಿ ನಡೆಸಿರುವ ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟಿ, ಜಾಮೀನುರಹಿತ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬೇಕು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಶಾಸಕರು ಒತ್ತಾಯಿಸಿದ್ದಾರೆ.