Published On: Tue, Nov 5th, 2024

ಗರಂ ಮಸಾಲೆ ಬಳಸಿ `ಬಲೀಂದ್ರ ಲೆಪ್ಪು’

ಗೂಡುದೀಪ ರಚಿಸಿದ ಜಗದೀಶ್ ಅಮೀನ್

ಕೈಕಂಬ : ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಹಣ್ಣಿನ ಬೀಜಗಳಿಂದ ಆಕರ್ಷಕ ಗೂಡುದೀಪ ರಚಿಸಿ, ೧೦ಕ್ಕೂ ಹೆಚ್ಚು ಬಹುಮಾನ ಗಳಿಸಿರುವ ಸುಂಕದಕಟ್ಟೆಯ ಜಗದೀಶ ಅಮೀನ್ ಅವರು, ಈ ಬಾರಿ ೧೫ ಬಗೆಯ ಗರಂ ಮಸಾಲೆ ಹಾಗೂ ಏಲಕ್ಕಿ, ಕರಿ ಜೀರಿಗೆಯಿಂದ `ಬಲೀಂದ್ರ ಲೆಪ್ಪು'(ಬಲೀಂದ್ರನನ್ನು ಕರೆಯುವುದು) ಪರಿಕಲ್ಪನೆಯಡಿ ವಿಶಿಷ್ಟ ಗೂಡುದೀಪ ರಚಿಸಿದ್ದಾರೆ. ಇದು ಹಲವು ಗೂಡುದೀಪ ಸ್ಪರ್ಧೆಗಳಲ್ಲಿ ಬಹುಮಾನ ಹಾಗೂ ಅಪಾರ ಜನಮೆಚ್ಚುಗೆ ಗಳಿಸಿದೆ.

ಅಂಗಡಿ ಉದ್ಯಮಿಯಾಗಿ ಕಲಾಸಕ್ತಿ ಹಾಗೂ ಜಾನಪದ ವಸ್ತು ವಿಷಯದಲ್ಲಿ ಆಸಕ್ತಿ ಹೊಂದಿರುವ ಜಗದೀಶ್ ಅವರು ಕಳೆದ ೨೦ ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ವಿಭಿನ್ನ ಶೈಲಿಯ ಅರ್ಥಗರ್ಭಿತ ಗೂಡುದೀಪ ರಚಿಸುತ್ತಿದ್ದಾರೆ. ಈ ವರ್ಷ ದಿನಬಳಕೆಯ ಗರಂ ಮಸಾಲೆಯಲ್ಲಿ ಬಳಸಲಾಗುವ ಏಲಕ್ಕಿ, ಕಾಳ ಜೀರಿಗೆ, ಕರಿ ಜೀರಾ ಸಹಿತ ೧೫ ಬಗೆಯ ಗರಂ ಮಸಾಲೆ ಸೊತ್ತು ಪೋಣಿಸಿ ಗೂಡುದೀಪ ರಚಿಸಿದ್ದಾರೆ. ಇದು ಸತತ ೫ ತಿಂಗಳ ಪರಿಶ್ರಮದ ಫಲವಾಗಿದ್ದು, ಇದರಲ್ಲಿ ಮನೆಯವರ ಸಹಕಾರ ಮೆರೆತಿಲ್ಲ ಎನ್ನುತ್ತಾರೆ.

ಹಿಂದೆ ಬಣ್ಣದ ಕಾಗದ, ಭತ್ತದ ತೆನೆ-ಬೈಹುಲ್ಲು, ವೀಳ್ಯದೆಳೆ, ಬಸಳೆ, ನಿಂಬೆಕಾಯಿ, ಮೆಣಸು, ಸಾಂಬಾರು ಪದಾರ್ಥ, ನವಧಾನ್ಯ, ರೈತರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಿರಿಧಾನ್ಯ, ಡ್ರೆÊ ಫ್ರೂಟ್ಸ್, ತರಕಾರಿಗಳ ಜೀಜಗಳಿಂದ ಗೂಡುದೀಪ ರಚಿಸಿ ಹಲವು ಕಡೆಯ ಸ್ಪರ್ಧೆಯಲ್ಲಿ ಹತ್ತಾರು ಬಹುಮಾನ ಗಳಿಸಿದ್ದರು. ತಿಂದು ಬಿಸಾಡಲಾದ ಹಣ್ಣುಗಳು ಮತ್ತು ತರಕಾರಿ ಬೀಜಗಳಿಂದ ತಯಾರಿಸಲಾದ `ಮೀನುಗಾರಿಕೆ’ ಪರಿಕಲ್ಪನೆಯ ಗೂಡುದೀಪಕ್ಕೆ ೧೦ ಬಹುಮಾನ ಬಂದಿದ್ದರೆ, ೧೦ ವರ್ಷದ ಹಿಂದೆ ತಯಾರಿಸಲಾದ ಭತ್ತದ ಗೂಡುದೀಪ ಇಂದಿಗೂ ಬಹುಮಾನಕ್ಕೆ ಆಯ್ಕೆಯಾಗುತ್ತಿದೆ.

ಗೂಡುದೀಪ ರಚನೆಯ ೨೦ ವರ್ಷದ ಅವಧಿಯಲ್ಲಿ ಜಗದೀಶ್ ಅವರಿಗೆ ೮ ಚಿನ್ನ, ೨ ಬೆಳ್ಳಿ, ಹಲವು ಪ್ರಥಮ, ದ್ವಿತೀಯ ತೃತೀಯ, ಮೆಚ್ಚುಗೆ ಬಹುಮಾನಗಳ ಸಹಿತ ಒಟ್ಟು ೫೮ ಬಹುಮಾನಗಳು ಬಂದಿವೆ. ಪಿಲಿಕುಳ, ನೀರುಮಾರ್ಗ, ಅಡ್ಯಾರು, ಬಜ್ಪೆ, ಕಾವೂರು, ಕುದ್ರೋಳಿ, ತೊಕ್ಕೊಟ್ಟು, ಸೋಮೇಶ್ವರ, ಕುತ್ತಾರು, ಎಕ್ಕಾರು, ಕಟೀಲು, ಕಾಪು, ಕಟಪಾಡಿ, ಉಡುಪಿ ಮಠ, ಮಣಿಪಾಲ, ಸಾಲಿಗ್ರಾಮ, ಕೋಟ, ಪೊಳಲಿ, ಪೆರಾರ, ಮೂಡಬಿದ್ರೆ, ಕಾರ್ಕಳದಲ್ಲಿ ಆಯೋಜಿಸಲಾದ ಗೂಡುದೀಪ ಸ್ಪರ್ಧೆಗಳು ಮತ್ತು ಪ್ರದರ್ಶನಗಳಲ್ಲಿ ಜಗದೀಶ ಅಮೀನ್ ಅವರ ಗೂಡುದೀಪಗಳು ಆಬಾಲವೃದ್ಧರಿಂದ ಮೆಚ್ಚುಗೆ ಗಳಿಸಿದೆ.

`ಗೂಡುದೀಪಗಳಲ್ಲಿ ಹೊಸತನ ಪ್ರದರ್ಶಿಸುವ ತುಡಿತವೊಂದಿದೆ. ನನ್ನಲ್ಲಿರುವ ಕಲೆ ಅನಾವರಣಗೊಳ್ಳುವಲ್ಲಿ ಬಂಧುಮಿತ್ರರು, ಮಾಧ್ಯಮ ಮಿತ್ರರು, ಗುರುಹಿರಿಯರ ಬೆಂಬಲ ಮರೆಯುವಂತಿಲ್ಲ. ಬಹುಮಾನ ಬಂದಾಗ ಹಿಗ್ಗಿಲ್ಲ ಅಥವಾ ಬರದಾಗ ಕುಗ್ಗಿಲ್ಲ. ಈ ವರ್ಷ ಹಲವು ಸ್ಪರ್ಧೆಗಳಲ್ಲಿಗರಂ ಮಸಾಲೆ ಗೂಡುದೀಪ’ ಪ್ರದರ್ಶನಗೊಂಡಿದೆ. ಎಂದಿನಂತೆ ಕುದ್ರೋಳಿಯಲ್ಲಿ ಅತೀವ ಮೆಚ್ಚುಗೆ ಗಳಿಸಿದೆ. ಮೂರು ಕಡೆಗಳಲ್ಲಿ ಬಹುಮಾನ ಗಳಿಸಿರುವ ಈ ಗೂಡುದೀಪ ಇನ್ನೂ ಕೆಲವು ಸ್ಪರ್ಧಾ ಕಣದಲ್ಲಿದೆ. ಗೂಡುದೀಪಗಳಲ್ಲಿ ಸಾಮಾಜಿಕ ಕಳಕಳಿಯ ವ್ಯಕ್ತಪಡಿಸುವುದು ನನ್ನ ಉದ್ದೇಶ. ಆಸಕ್ತರಿಗೆ ಗೂಡುದೀಪ ರಚನೆ ಕಲೆ ಕಲಿಸುವೆ” ಎಂದು ಸುಂಕದಕಟ್ಟೆಯ ಜಗದೀಶ್ ಅಮೀನ್ ಹೇಳುತ್ತಾರೆ.

ಬಲೀಂದ್ರ ಲೆಪ್ಪು :

ತುಳುನಾಡಿನಲ್ಲಿ ದೀಪಾವಳಿಯ ಸಂದರ್ಭದಲ್ಲಿ ತುಳುವರ ಸಂಸ್ಕೃತಿಗನುಸಾರವಾಗಿ ಸಾಂಪ್ರದಾಯಿಕ ರೀತಿಯಲ್ಲಿ ಬಲಿ ಚಕ್ರವರ್ತಿಯನ್ನು ಭೂಮಿಗೆ ಆಹ್ವಾನಿಸಲಾಗುತ್ತದೆ. ಇದನ್ನೇ ಬಲೀಂದ್ರ ಲೆಪ್ಪು' ಎಂದು ಕರೆಯಲಾಗುತ್ತದೆ.ತುಳುವ ಚರಿತ್ರೆ’ಯಲ್ಲಿ ಬಿಂಬಿಸಲಾದAತೆ, ಬಿಳಿ ಕಲ್ಲಿನಲ್ಲಿ ಹೂ ಅರಳಿದಾಗ, ಬಂಜೆ ಎಮ್ಮೆ(ಗೊಡ್ಡೆರ್ಮೆ) ಗೋಣೆ(ಗಂಡು ಕರು) ಆದಾಗ, ಗುಲಗುಂಜಿ ಕಲೆ ಮಾಸಿದಾಗ, ತುಂಬೆ ಎನ್ನುವ ಕಿರು ಗಿಡದಡಿ ಕೂಟ ನಡೆದಾಗ, ಗದ್ದೆಯ ಬಿರುಕಿಗೆ(ದಂಬೆಲ್) ಸೇತುವೆ(ಪಾಂಪು) ಮಾಡಿದಾಗ....ಮಾತ್ರ ಬಲಿ ಚಕ್ರವರ್ತಿ ಈ ಭೂಮಿಯಲ್ಲಿ ಮತ್ತೊಮ್ಮೆ ಅವತರಿಸುತ್ತಾನೆ ಎಂಬ ನಂಬಿಕೆ ಇದೆ. ಯುವ ಪೀಳಿಗೆಗೆ ಈ ಕತೆ ತಿಳಿಸುವ ಉದ್ದೇಶದಿಂದ ಜಗದೀಶ್ ಅಮೀನ್ ಅವರು ಈ ಬಾರಿ ತನ್ನ ಗೂಡುದೀಪದಲ್ಲಿಬಲೀಂದ್ರ ಲೆಪ್ಪು’ವಿಗೆ ಮಹತ್ವ ನೀಡಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter