ಉಳಾಯಿಬೆಟ್ಟುಸಾಲೆ ಮೇಲ್ಮನೆ ಸೇತುವೆ ಘನ ವಾಹನ ನಿಷೇಧ: ತಾತ್ಕಾಲಿಕ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧಾರ
ಕೈಕಂಬ:ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನ ಸಾಲೆ ಮೇಲ್ಮನೆ ಎಂಬಲ್ಲಿ ಶಿಥಿಲಗೊಂಡಿರುವ ಕಿರು ಸೇತುವೆಯ ಪಕ್ಕದ ತೋಡಿಗೆ ಮಣ್ಣು ಹಾಗೂ ಕೊಳವೆ ಹಾಸಿನ ತಾತ್ಕಾಲಿಕ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಉಳಾಯಿಬೆಟ್ಟು-ಪೆರ್ಮಂಕಿ ನಾಗರಿಕರು, ಸಂಘ-ಸಂಸ್ಥೆ, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಒಗ್ಗೂಡಿ ನ. ೧೩ರಂದು ರಾಷ್ಟ್ರೀ ಯ ಹೆದ್ದಾರಿ ೧೬೯ರ ಪರಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನ. ೯ರಂದು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಉಳಾಯಿಬೆಟ್ಟು ಗ್ರಾ.ಪಂ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಅವರು ಮಾಹಿತಿ ನೀಡಿ, ರಾಷ್ಟ್ರೀಯ ಹೆದ್ದಾರಿ ೧೬೯ರಿಂದ ಉಳಾಯಿಬೆಟ್ಟು-ಪೆರ್ಮಂಕಿ-ಮಲ್ಲೂರು-ಬಿ. ಸಿ. ರೋಡ್-ಅರ್ಕುಳ-ಅಡ್ಯಾರ್‌ಗೆ ನೇರ ಹಾಗೂ ಹತ್ತಿರದ ಸಂಪರ್ಕ ಕಲ್ಪಿಸುವ ಉಳಾಯಿಬೆಟ್ಟು ಗ್ರಾಪಂ ವ್ಯಾಪ್ತಿಯ ಸಾಲೆ ಮೇಲ್ಮನೆಯಲ್ಲಿ ಕಿರು ಸೇತುವೆ ಇದೆ.
ಈ ಮಾರ್ಗದಲ್ಲಿ ತಲಾ ೨ ಸರ್ಕಾರಿ ಮತ್ತು ಖಾಸಗಿ ಬಸ್ ಸೇವೆಯಲ್ಲಿದೆ. ಶಿಥಿಲಗೊಂಡಿದೆ ಎಂದು ಪೊಳಲಿ ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿದ ಸಂದರ್ಭದಲ್ಲೇ ಉಳಾಯಿಬೆಟ್ಟು ಕಿರು ಸೇತುವೆಯಲ್ಲೂ ಘನ ವಾಹನ ಸಂಚಾರ ನಿಷೇಧಿಸಲಾಗಿತ್ತು. ಆ ಬಳಿಕ ಈ ಭಾಗದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರ ಸಹಿತ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದಾರೆ ಎಂದರು.
ಹೊಸ ಕಿರು ಸೇತುವೆ ನಿರ್ಮಾಣ ಆಗುವವರೆಗೆ ಅಥವಾ ಮುಂದಿನ ಮಳೆಗಾಲದವರೆಗೆ ಇಲ್ಲಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಅವಕಾಶವಿದೆ. ಸ್ಥಳೀಯರು ರಸ್ತೆಗೆ ಅಗತ್ಯವಿರುವ ಜಾಗ ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ತಾನು ಖುದ್ದಾಗಿ ಮಾತುಕತೆ ನಡೆಸಿದ್ದೇನೆ. ಸಾರ್ವಜನಿಕರ ಪರವಾಗಿ ಪಂಚಾಯತ್ ವತಿಯಿಂದ ಜಿಲ್ಲಾಡಳಿತಕ್ಕೆ ೩ ಬಾರಿ ಮನವಿ ನೀಡಿದ್ದೇವೆ. ಆದರೆ ಇದುವರೆಗೆ ಜಿಲ್ಲಾಧಿಕಾರಿಯವರಿಂದ ಉತ್ತರ ಬಂದಿಲ್ಲ ಎಂದು ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಘನ ವಾಹನ ನಿಷೇಧಿಸಲಾದ ಕಿರು ಸೇತುವೆಯಲ್ಲಿ ಎಂದಿನಂತೆ ಮಣ್ಣು, ಕಲ್ಲು, ಜಲ್ಲಿ ಮತ್ತಿತರ ಸರಕು ಹೊತ್ತ ಘನ ವಾಹನಗಳು ಯಥಾಪ್ರಕಾರ ಸಂಚರಿಸುತ್ತಿರುವ ಬಗ್ಗೆ ಇತ್ತೀಚೆಗೆ ಮಾಧ್ಯಮಗಳು ಸಚಿತ್ರ ವರದಿ ಮಾಡಿವೆ. ಇಷ್ಟಿದ್ದರೂ ಸುಮಾರು ೨೦ರಿಂದ ೩೦ ಜನರು ಪ್ರಯಾಣ ಮಾಡಬಹುದಾದ ಬಸ್‌ಗಳ ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಮಹಿಳೆಯರು ಮತ್ತು ವಯೋವೃದ್ಧರಿಗೆ ಅನ್ಯಾಯ ಮಾಡಿದಂತಾಗಿದೆ. ಸದ್ಯ ಸುತ್ತಿಬಳಸಿ ಪ್ರಯಾಣಿಸಬೇಕಾಗಿದ್ದು, ರಿಕ್ಷಾದವರು ದುಬಾರಿ ಬಾಡಿಗೆ ಪಡೆಯುತ್ತಿದ್ದಾರೆ.
ಈ ಕಾರಣದಿಂದಲೇ ಸಾರ್ವಜನಿಕರು ಪಂಚಾಯತ್‌ಗೆ ಬಂದು ತಮ್ಮ ಕಷ್ಟ ತೋಡಿಕೊಳ್ಳುತ್ತಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸಲು ಪಂಚಾಯತ್ ಆಡಳಿತ ನಿಸಹಾಯಕವಾಗಿದೆ. ಈ ನಿಟ್ಟಿನಲ್ಲಿ ನ. ೧೨ರೊಳಗೆ ಜಿಲ್ಲಾಧಿಕಾರಿಯವರಿಂದ ಸೂಕ್ತ ಉತ್ತರ ಬಾರದೆ ಹೋದಲ್ಲಿ ನ. ೧೩ರಂದು ಸಾರ್ವಜನಿಕರು ಹೆದ್ದಾರಿ ವಾಹನ ತಡೆದು ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು, ಉಪಾಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು, ಪಂಚಾಯತ್ ಸದಸ್ಯ ವಿಶ್ವನಾಥ ಶೆಟ್ಟಿ, ಸಾಲೆ ಜುಮ್ಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಎಂ. ಇಸ್ಮಾಯಿಲ್, ಅಡ್ವಕೇಟ್ ದಿನೇಶ್ ತಲ್ಲಿಮಾರು, ಉಳಾಯಿಬೆಟ್ಟು ವಲಯ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶೆರೀಫ್, ಸಂತೋಷ್ ಕುಮಾರ್ ಪೆರ್ಮಂಕಿ ಉಪಸ್ಥಿತರಿದ್ದರು.
ಇದು ಪಿಲ್ಲರ್‌ರಹಿತ ಕಿರು ಬ್ರಿಡ್ಜ್(ಮೋರಿ) !
ಉಳಾಯಿಬೆಟ್ಟಿನಲ್ಲಿ ಫಲ್ಗುಣಿ ನದಿ ನೀರು ಹರಿಯುವ ಸಣ್ಣ ತೋಡೊಂದಕ್ಕೆ ಸುಮಾರು ೫೦ ವರ್ಷಗಳ ಹಿಂದೆ ಕಿರು ಸೇತುವೆ(ಮೋರಿ) ನಿರ್ಮಿಸಲಾಗಿದೆ. ರಸ್ತೆಯ ಎರಡು ಪಾರ್ಶ್ವದ ಅಂತರದಲ್ಲಿ ತೋಡಿಗೆ ನಿರ್ಮಿಸಲಾದ ಅಂದಾಜು ೫೦-೬೦ ಅಡಿ ಉದ್ದದ ಮೋರಿ ಇದಾಗಿದೆ. ಆರು ವರ್ಷದ ಹಿಂದೆ ಸೇತುವೆ ದುರಸ್ತಿ, ಡಾಮರೀಕರಣ ಕಾಮಗಾರಿ ವೇಳೆ ಇಲ್ಲಿ(ತೋಡಿನಲ್ಲಿ) ವಾಹನ ಸಂಚಾರಕ್ಕೆ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲಾಗಿತ್ತು. ಸರಿಯಾಗಿ ಕೆಲಸ ಮಾಡಿದಲ್ಲಿ, ಕೇವಲ ೨ರಿಂದ ೩ ತಿಂಗಳೊಳಗೆ ಇಲ್ಲಿ ಕಿರು ಸೇತುವೆ ನಿರ್ಮಿಸಲು ಸಾಧ್ಯವಿದ್ದು, ಈ ಸಂದರ್ಭದಲ್ಲಿ ಸೇತುವೆಯ ಪಕ್ಕದಲ್ಲಿ(ತೋಡಿನಲ್ಲಿ) ಮಣ್ಣಿನ ರಸ್ತೆ ನಿರ್ಮಿಸಲು ಅವಕಾಶವಿದೆ. ಜಿಲ್ಲಾಡಳಿತಕ್ಕೆ ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಈ ಭಾಗದ ಸಾರ್ವಜನಿಕರ ಪ್ರಸಕ್ತ ಜ್ವಲಂತ ಸಮಸ್ಯೆಯೊಂದಕ್ಕೆ ಪರಿಹಾರ ನೀಡಲು ಸಾಧ್ಯವಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.