ಸೀಎಂ, ಡೀಸಿಎಂ ನಿಂದಿಸಿ ವೀಡಿಯೋ ವೈರಲ್: ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ಕೈಕಂಬ : ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇತರ ಕಾಂಗ್ರೆಸ್ಸಿಗರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವೀಡಿಯೋ ಹರಿಯಬಿಟ್ಟಿರುವ ಮೋಹಿತ್ ಎನ್. ಎಂ @ ಮೋಹಿತ್ ನರಸಿಂಹಮೂರ್ತಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ಕೆಪಿಸಿಸಿ ಸದಸ್ಯ ಆರ್. ಕೆ. ಪೃಥ್ವಿರಾಜ್ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವೊಂದು ನ. ೧೦ರಂದು ಬಜ್ಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ. ಎಸ್ ಅವರಿಗೆ ಮನವಿ ನೀಡಿತು.
ಸದ್ರಿ ವೀಡಿಯೋದಲ್ಲಿ ಸಾರ್ವಜನಿಕ ಶಾಂತಿ ಕದಡುವ ಮತ್ತು ಅಪರಾಧವೆಸಗಲು ಪ್ರಚೋದಿಸುವ ಅಂಶಗಳಿವೆ. ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಅವಮಾನಿಸುವುದರ ಜೊತೆಗೆ ಎರಡು ಪಂಗಡಗಳ ವ್ಯಕ್ತಿಗಳ ಮಧ್ಯೆ ದ್ವೇಷ ಪ್ರಚೋದಿಸುವುದು ಕಿಡಿಗೇಡಿಯ ಉದ್ದೇಶವಾಗಿದೆ. ಮೋಹಿತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ ೧೯೬, ೩೫೨ ಮತ್ತು ೩೫೩ರನ್ವಯ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಿಯೋಗ ಆಗ್ರಹಿಸಿದೆ.
ಆರ್. ಕೆ. ಪೃಥ್ವಿರಾಜ್ ನೇತೃತ್ವದ ನಿಯೋಗದಲ್ಲಿ ಗುರುಪುರ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಬಾಷಾ, ಗಂಜಿಮಠ ವಲಯ ಕಾಂಗ್ರೆಸ್ ಅಧ್ಯಕ್ಷ ಮುಸ್ತಾಫ, ಪಡುಪೆರಾರ ವಲಯ ಕಾಂಗ್ರೆಸ್ ಅಧ್ಯಕ್ಷ ಹಲ್ಯರ್ ಇಕ್ಬಾಲ್, ಜಿಪಂ ಮಾಜಿ ಸದಸ್ಯ ಕೃಷ್ಣ ಅಮೀನ್, ತಾಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ, ಪಡುಪೆರಾರ ಗ್ರಾಮ ಪಂಚಾಯತ್ ಸದಸ್ಯ ಭಾಸ್ಕರ ಮಲ್ಲಿ, ಡಿಸಿಸಿ ಸದಸ್ಯ ಜೆರಾಲ್ಡ್ ಸಿಕ್ವೇರ ಕೊಳಂಬೆ, ಪಕ್ಷದ ಯುವ ನಾಯಕ ಅಬ್ದುಲ್ ಹಮೀದ್ ಎಡಪದವು ಉಪಸ್ಥಿತರಿದ್ದರು.