ಕೈಕಂಬ : ಉಳಾಯಿಬೆಟ್ಟು ಕಿರು ಸೇತುವೆಗೆ ಪರ್ಯಾಯವಾಗಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸುವ ಬಗ್ಗೆ ನ. ೧೨ರಂದು ಉಳಾಯಿಬೆಟ್ಟಿಗೆ ಆಗಮಿಸಿದ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಅವರು ಸ್ಥಳ ಪರಿಶೀಲನೆ ನಡೆಸಿದರು.

ಫಲ್ಗುಣಿ ನದಿ ನೀರು ಬಯಲಿನತ್ತ ಹರಿಯುವ ತೋಡಿಗೆ ನಿರ್ಮಿಸಲಾಗಿರುವ ಕಿರು ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಘನ ವಾಹನ ನಿಷೇಧಿಸಲಾಗಿ, ಕಮಾನು ಅಳವಡಿಸಲಾಗಿದೆ. ಇದರಿಂದ ಉಳಾಯಿಬೆಟ್ಟು-ಪೆರ್ಮಂಕಿ-ಮಲ್ಲೂರು-ಬೆAಜನಪದವು-ಅಡ್ಯಾರು-ಬಿ. ಸಿ. ರೋಡ್‌ಗೆ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಈ ಭಾಗದ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಮಹಿಳೆಯರ ಸಹಿತ ಸಾರ್ವಜನಿಕರಿಗೆ ತೀರಾ ತೊಂದರೆ ಉಂಟಾಗಿದೆ. ಈ ನಿಟ್ಟಿನಲ್ಲಿ ಕಿರು ಸೇತುವೆಯ ಪಕ್ಕದಲ್ಲಿ ಮಳೆಗಾಲದವರೆಗೆ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಸ್ಥಳೀಯರು ಆಗ್ರಹಿಸಿದ್ದರು.

ತಾತ್ಕಾಲಿಕ ರಸ್ತೆ ನಿರ್ಮಿಸದೆ ಹೋದಲ್ಲಿ ನ. ೧೩ರಂದು ಉಳಾಯಿಬೆಟ್ಟು ಸಂಪರ್ಕದ ಪರಾರಿಯಲ್ಲಿ ಹೆದ್ದಾರಿ ವಾಹನ ತಡೆದು ಪ್ರತಿಭಟನೆ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು. ನ. ೧೧ರಂದು ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ಅವರ ನೇತೃತ್ವದ ನಿಯೋಗದೊಂದಿಗೆ ಸಹಾಯಕ ಆಯುಕ್ತರ ಹರ್ಷವರ್ಧನ ಹಾಗೂ ಮಂಗಳೂರು ತಹಶೀಲ್ದಾರ್ ಪ್ರಶಾಂತ್‌ ಪಾಟೀಲ್ ಮಾತುಕತೆ ನಡೆಸಿ ತಾತ್ಕಾಲಿಕ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದರು.

ನ. ೧೨ರಂದು ಪಿಡಬ್ಲ್ಯೂಡಿ ಸಹಾಯಕ ಶ್ರೀಕಾಂತ್ ಅವರು ಸ್ಥಳ ಪರಿಶೀಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, “ಘನ ವಾಹನ ನಿಷೇಧಗೊಂಡಿರುವ ಕಿರು ಸೇತುವೆಗೆ ಪರ್ಯಾಯವಾಗಿ ತಾತ್ಕಾಲಿಕ ಮಣ್ಣಿನ(ಮಳೆಗಾಲದವರೆಗೆ) ರಸ್ತೆ ನಿರ್ಮಿಸಲು ಅಭ್ಯಂತರವಿಲ್ಲ. ತೋಡಿಗೆ ಕೊಳವೆ ಅಳವಡಿಸಿ ಸುಮಾರು ೧೫೦-೨೦೦ ಮೀಟರ್ ಉದ್ದದ ರಸ್ತೆ ನಿರ್ಮಿಸಬೇಕಾಗುತ್ತದೆ. ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ಜಾಗ ಬಿಟ್ಟು ಕೊಡಲು ಮುಂದೆ ಬಂದಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿ ಕಾಮಗಾರಿ ವೆಚ್ಚ ಮಂಜೂರಾತಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಬಹುತೇಕ ಶನಿವಾರದೊಳಗೆ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಳ್ಳಬಹುದು” ಎಂದರು.

ಸ್ಥಳ ಪರಿಶೀಲನೆ ವೇಳೆ ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಉಪಾಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು, ಸದಸ್ಯ ವಿಶ್ವನಾಥ ಶೆಟ್ಟಿ, ಪಿಡಿಒ ಅನಿತಾ ಕ್ಯಾಥರಿನ್, ಗ್ರಾಮ ಕರಣಿಕ ಮೆಹಬೂಬ್, ಉದ್ಯಮಿ ಶರೀಫ್ ಕಣಿಬೆಟ್ಟು ಉಳಾಯಿಬೆಟ್ಟು ಹಾಗೂ ಸ್ಥಳೀಯ ಪ್ರಮುಖರು ಇದ್ದರು.

By Suddi9

Leave a Reply

Your email address will not be published. Required fields are marked *