ಜನಾರ್ದನ ರೆಡ್ಡಿಗೆ ಇನ್ಮುಂದೆ ಮುಕ್ತವಾಗಿ ಬಳ್ಳಾರಿಗೆ ಹೋಗಬಹುದು, ಮಹತ್ವ ಆದೇಶ ನೀಡಿದ ಸುಪ್ರೀಂ ಕೋರ್ಟ್
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ನಲ್ಲಿ ಬಿಗ್ ರಿಲೀಫ್ ನೀಡಿದೆ. ಬಳ್ಳಾರಿಗೆ ಹೋಗದಂತೆ ನಿರ್ಬಂಧ ಏರಿತ್ತು. ಆದರೆ ಇದೀಗ ಸುಪ್ರೀಂ ಬಳ್ಳಾರಿಗೆ ಹೋಗುವಂತೆ ಅನುಮತಿ ನೀಡಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಅವಕಾಶ ದೊರೆತಂತಾಗಿದೆ.ಈ ಹಿಂದೆ ಬಳ್ಳಾರಿ, ಕಡಪ, ಅನಂತಪುರಕ್ಕೆ ತೆರಳಲು ಅವರು ಪೂರ್ವಾನುವತಿ ಪಡೆಯುವುದು ಕಡ್ಡಾಯವಾಗಿತ್ತು. ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಷರತ್ತು ವಿಧಿಸಿತ್ತು. ಇದೀಗ ನ್ಯಾ. ಎಂಎಂ ಸುಂದರೇಶ್ ನೇತೃತ್ವದ ದ್ವಿ ಸದಸ್ಯ ಪೀಠದಿಂದ ಹೊಸ ಆದೇಶ ಹೊರಬಿದ್ದಿದೆ.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಜೈಲುಪಾಲಾಗಿದ್ದರು. 2015 ರ ಜನವರಿ 23 ರಂದು ಸುಪ್ರೀಂ ಕೋರ್ಟ್ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆ ಸಂದರ್ಭದಲ್ಲಿ, ಬಳ್ಳಾರಿ, ಕಡಪ, ಅನಂತಪುರಕ್ಕೆ ತೆರಳಲು ಪೂರ್ವಾನುಮತಿ ಪಡೆಯವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿತ್ತು.
ಪೂರ್ವಾನುಮತಿ ಪಡೆದು ಈಗಾಗಲೇ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಿದ್ದಾರೆ. ಆದರೆ, ಇನ್ಮುಂದೆ ಮುಕ್ತವಾಗಿ ಬಳ್ಳಾರಿಗೆ ತೆರಳಬಹುದಾಗಿದೆ. ತಮ್ಮ ರಾಜಕೀಯದ ಪ್ರಮುಖ ನೆಲೆಯಾಗಿರುವ ಬಳ್ಳಾರಿ ಭೇಟಿಗೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದ್ದು, ಜನಾರ್ದನ ರೆಡ್ಡಿ ಅವರಿಗೆ ತೀವ್ರ ಹಿನ್ನಡೆ ಉಂಟುಮಾಡಿತ್ತು. ಕಳೆದ ಬಾರಿಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಸ್ಥಾಪಿಸಿದ್ದ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಪಕ್ಷದ ಇತರ ಅಭ್ಯರ್ಥಿಗಳು ಯಾರೂ ಗೆಲುವು ಸಾಧಿಸಿರಲಿಲ್ಲ.