ಬಜ್ಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ವಜ್ರ ಮಹೋತ್ಸವದ ಉದ್ಘಾಟನಾ ಸಮಾರಂಭ
ಕೈಕಂಬ : ಅರವತ್ತು ಸಂವತ್ಸರ ಕಂಡ ಬಜ್ಪೆಯ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ವಜ್ರ ಮಹೋತ್ಸವದ ಉದ್ಘಾಟನಾ ಸಮಾರಂಭ ಆ. ೧೨ರಂದು ಸೋಮವಾರ ಶಾಲಾ ಸಭಾಗೃಹದಲ್ಲಿ ನಡೆಯಿತು.

ಬಜ್ಪೆ ದ್ವಿತೀಯ ಜಾನ್ ಪಾವ್ಲ್ ದೇವಾಲಯದ ಧರ್ಮಗುರು ಫಾ. ಅನಿಲ್ ರೋಶನ್ ಲೋಬೊ ಆಶೀರ್ವಚನ ನೀಡಿ, ನಮ್ಮೆಲ್ಲರ ಜೀವನದಲ್ಲಿ ದೇವರು ವಿಶೇಷ ಶಕ್ತಿ. ಆತನಿಂದ ಎಲ್ಲವೂ ಸಾಧ್ಯ. ದೇವರಲ್ಲಿ ವಿಶ್ವಾಸವಿಟ್ಟು ನಮ್ಮ ಕರ್ತವ್ಯ ಮಾಡಬೇಕು. ಈ ಶಾಲೆಯ ಮಹತ್ವದ ಉತ್ಸವ ಹಾಗೂ ಯೋಜನೆಗಳಿಗೆ ಭಗವಂತನ ಆಶೀರ್ವಾದ ಇರಲಿ ಎಂದರು.

ವಜ್ರಮಹೋತ್ಸವ ಕಾರ್ಯಕ್ರಮದ ಲಾಂಛನ ಬಿಡುಗಡೆಗೊಳಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ, ಬೆಥನಿ ಶಿಕ್ಷಣ ಸಂಸ್ಥೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ಸಿಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳ ಭವಿಷ್ಯ ರೂಪಿಸಬೇಕು. ಮಕ್ಕಳು ಮನೆಗೆ ಉತ್ತಮ ಮಗು, ಶಾಲೆಗೆ ಉತ್ತಮ ವಿದ್ಯಾರ್ಥಿ ಹಾಗೂ ದೇಶಕ್ಕೆ ಉತ್ತಮ ಪ್ರಜೆಯಾಗಬೇಕು ಎಂದರು.

ದೀಪ ಬೆಳಗಿಸಿದ ಬಜ್ಪೆಯ ಉದ್ಯಮಿ ರಾಯ್ ಪ್ರಕಾಶ್ ಸಿಮ್ಸನ್, ಬಜ್ಪೆ ನಜ್ಹರತ್ ಕಾನ್ವೆಂಟ್‌ನ ಸುಪೀರಿಯರ್ ಸಿಸ್ಟರ್ ಫ್ಲೋರಿನ್ ಜ್ಯೋತಿ ವಜ್ರಮಹೋತ್ಸವ ಆಚರಿಸಲಿರುವ ಹೋಲಿ ಫ್ಯಾಮಿಲಿ ಶಾಲೆಗೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕಿ ಸಿಸ್ಟರ್ ಪ್ಲಾವಿಯಾ ವಿಲ್ಮಾ ಅವರು ವಜ್ರಮಹೋತ್ಸವ ಕಾರ್ಯಕ್ರಮದ `ಮನವಿ ಪತ್ರ’ ಬಿಡುಗಡೆಗೊಳಿಸಿ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆಯ ೬೦ ವರ್ಷಗಳ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿರುತ್ತಾರೆ. ಇದಕ್ಕಾಗಿ ಶಿಕ್ಷಕರು, ಶಿಕ್ಷಕೇತರ ವರ್ಗದವರು ಧನ್ಯರು. ವರ್ಷಗಳ ದೃಷ್ಟಿಯಿಂದ ವಜ್ರಮಹೋತ್ಸವ ಎಂಬುದು ಒಂದು ಮೈಲಿಗಲ್ಲು. ಈ ಶಾಲೆಯಲ್ಲಿ ಮುಂದೆಯೂ ಸಾವಿರಾರು ಮಕ್ಕಳಿಗೆ ಮೌಲ್ಯಾಧರಿತ ಶಿಕ್ಷಣ ಸಿಗುವಂತಾಗಲಿ ಎಂದು ಆಶಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೆಸ್ಸಿ ಪ್ರೀಮಾ ಸ್ವಾಗತಿಸಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ೧೯೬೪ರಲ್ಲಿ ಆರಂಭಗೊ0ಡಿದ್ದ ಈ ಶಾಲೆಯಲ್ಲಿ ೨೦೧೧ರಿಂದ ಗಂಡು ಮಕ್ಕಳಿಗಳಿಗೆ `ಸಹಶಿಕ್ಷಣ’ ಆರಂಭಗೊ0ಡಿತ್ತು ಎಂದು ಪ್ರಾಸ್ತಾವಿಕ ಮಾತನ್ನಾಡಿದರು.
ಪ್ರಾರ್ಥನೆ ಬಳಿಕ ವಿದ್ಯಾರ್ಥಿನಿಯರಿಂದ ಮನಮೋಹಕ ಸ್ವಾಗತ ನೃತ್ಯ ಸಾದರಗೊಂಡಿತು. ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಉದ್ಯಮಿ ರಾಯ್ ಪ್ರಕಾಶ್ ಸಿಮ್ಸನ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರನ್ನು ಗೌರವಿಸಲಾಯಿತು.
ಗಣಿತ ಶಿಕ್ಷಕ ವಾಸುದೇವ ರಾವ್ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಎಚ್., ವಂದಿಸಿದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಎಂ. ಕೆ. ಅಶ್ರಫ್, ಶಿಕ್ಷಕಿ ಲಿಲ್ಲಿ ಮಿನೇಜಸ್, ಯಶೋಧಾ ಸಿ. ಎಚ್, ಶ್ರೀಧನ್ಯಾ, ಗೀತಾಂಬಾ, ಶ್ರೀಜಾ, ರೇಣುಕಾ, ನಯನಾ, ಶಿಕ್ಷಕೇತರ ವರ್ಗ ಸಹಕರಿಸಿದರೆ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಸ್ಥಳೀಯ ಕನ್ಯಾಮಠದ ಸಿಸ್ಟರ್‌ಗಳು ಹಾಗೂ ಗಣ್ಯರು, ಶಾಲಾ ಹಿತೈಷಿಗಳು ಉಪಸ್ಥಿತರಿದ್ದರು.