ಆರೋಪಿಯ ಬಂಧನದ ವೇಳೆ ಪೊಲೀಸರ ಮೇಲೆ ಕುಟುಂಬಸ್ಥರಿಂದ ಹಲ್ಲೆ, ಸಿನಿಮೀಯ ರೀತಿಯಲ್ಲಿ ಆರೋಪಿಯ ಬಂಧನ

ಕಳ್ಳತನ ಆರೋಪದಲ್ಲಿ ವಿಜಯಪುರ ನಗರದಲ್ಲಿ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ ಅವಿನಾಶನನ್ನು ಹುಬ್ಬಳ್ಳಿ ಪೊಲೀಸರು ಪಿಸ್ತೂಲ್ ತೋರಿಸಿ ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆಯೊಂದು ನಿನ್ನೆ ವಿಜಯಪುರ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ.
ಹೌದು, ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ತಾಮ್ರದ ವೈರ್ ಕದ್ದ ಆರೋಪಿ ಕೊಲ್ಲಾಪುರ ಮೂಲದ ಅವಿನಾಶ್ ಮಚ್ಚಾಳೆ ತಲೆಮರೆಸಿಕೊಂಡಿದ್ದನು. ಆದರೆ ಈ ಆರೋಪಿ ಅವಿನಾಶ್ ವಿಜಯಪುರದಲ್ಲಿ ಇದ್ದಾನೆ ಮಾಹಿತಿಯನ್ನು ಕುಟುಂಬಸ್ಥರಿಂದ ಕಲೆ ಹಾಕಿದ ಪೊಲೀಸರು ತಕ್ಷಣವೇ ವಿಜಯಪುರಕ್ಕೆ ಆಗಮಿಸಿದ್ದರು.
ಆರೋಪಿಯನ್ನು ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಬಂಧಿಸಲು ಮುಂದಾಗುತ್ತಿದ್ದಂತೆ ಕುಟುಂಬದ ಸದಸ್ಯರು ಪೊಲೀಸರ ಮೇಲೆ ಹಲ್ಲೆ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಅಲ್ಲಿಗೆ ಜನರು ಜಮಾಯಿಸಿದ್ದಾರೆ. ಇತ್ತ ಆರೋಪಿ ಅವಿನಾಶ್ ಅಲ್ಲಿಂದ ಪರಾರಿಯಾಗಲು ಯತ್ನ ಮಾಡಿದ್ದಾನೆ.
ಆ ಕೂಡಲೇ ಎಚ್ಚೆತ್ತ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಐ ಹೊನ್ನಪ್ಪನವರು ಆರೋಪಿ ಅವಿನಾಶ್ ನನ್ನು ಹಿಡಿಯಲು ಪಿಸ್ತೂಲ್ ಹೊರ ತೆಗೆಯುತ್ತಿದ್ದಂತೆ ಆರೋಪಿಯೂ ತಕ್ಷಣವೇ ವಾಹನ ಏರಿದ್ದಾನೆ. ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬಂಧಿಸಿ ಹುಬ್ಬಳ್ಳಿ ಪೊಲೀಸರು ವಿಜಯಪುರ ನಗರದ ಗೋಲಗುಂಬಜ್ ಪೊಲೀಸ್ ಠಾಣೆಗೆ ಕರೆದೊಯ್ದು ಮಾಹಿತಿ ನೀಡಿ, ಅಲ್ಲಿಂದ ಹುಬ್ಬಳ್ಳಿಗೆ ಕರೆಯ್ದೊದಿದ್ದಾರೆ. ಇಂದು ಆರೋಪಿಯನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.