ಕುಪ್ಪೆಪದವು ಗ್ರಾಮಪಂಚಾಯತ್ ವ್ಯಾಪ್ತಿಯ ಹಲವೆಡೆ ಗುಡ್ಡ ಕುಸಿತ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದೂ, ಈಗಾಗಲೇ ಗುಡ್ಡ ಕುಸಿತದಂತಹ ಘಟನೆಗಳು ನಡೆಯುತ್ತಲೇ ಇದೆ. ಸುರಿಯುತ್ತಿರುವ ಈ ಮಳೆಗೆ ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ದೂಡ್ಡಳಿಕೆ ಎಂಬಲ್ಲಿ ಕಳೆದ ವಾರವಷ್ಟೇ ಕುಸಿತ ಕಂಡಿದ್ದ ಲಲಿತ ಮನೆಯವರ ಹಿಂಭಾಗದ ಗುಡ್ಡವು ಮಂಗಳವಾರ ರಾತ್ರಿಯೂ ಮತ್ತಷ್ಟು ಗುಡ್ಡ ಕುಸಿದು ಲಲಿತ ಅವರ ಮನೆಯ ಮೇಲೆ ಬಿದ್ದಿದೆ. ಮುಂಜಾಗ್ರತ ಕ್ರಮವಾಗಿ ಲಲಿತ ಅವರ ಕುಟುಂಬ ನೆರೆಯ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಅದಲ್ಲದೇ ಇಲ್ಲೇ ಸಮೀಪವಿರುವ ಬ್ರಾಹ್ಮಣರ ಕೊಡಿ ಎಂಬಲ್ಲಿ ವಿನಯ ಕಾರಂತ ಎನ್ನುವವರ ತೋಟಕ್ಕೆ ಪಕ್ಕದ ಗುಡ್ಡದ ಅರ್ಧ ಭಾಗವೇ ಕುಸಿದು ಬಿದಿದ್ದು, ನೀರು ತೋಟಕ್ಕೆ ನುಗ್ಗಿದೆ. ನೂರಾರು ಅಡಿಕೆ ಮರಗಳು ಮತ್ತು ತೆಂಗಿನ ಮರಗಳು ಧರೆಗೆ ಉರುಳಿ ನೆಲ ಸಮವಾಗಿದೆ. ಅದರೊಂದಿಗೆ ಇಲ್ಲಿಯೇ ಕಲ್ಲಾಡಿ ಪ್ರೌಢ ಶಾಲಾ ಬಳಿಯ ಇಸ್ಮಾಯಿಲ್ ಎನ್ನುವವರ ಮನೆಯ ಪಕ್ಕದ ಗುಡ್ಡವು ಕುಸಿತ ಕಂಡಿದೆ.
ಇವರ ಮನೆಯ ಸುತ್ತಮುತ್ತಲೂ ಸಾಕಷ್ಟು ಮನೆಗಳಿದ್ದು ಇಲ್ಲಿನ ಜನರು ಜೀವವನ್ನು ಕೈಯಲ್ಲೆ ಹಿಡಿದುಕೊಂಡು ಬದುಕಬೇಕಾದ ಸ್ಥಿತಿಯೂ ನಿರ್ಮಾಣವಾಗಿದೆ. ಈಗಾಗಲೇ ಗುಡ್ಡ ಕುಸಿತವಾಗಿರುವ ಸ್ಥಳಗಳಿಗೆ ಕುಪ್ಪೆಪದವು ಪಂಚಾಯತ್ ನ ಸ್ಥಳೀಯ ಸದಸ್ಯರು, ಪಂಚಾಯತ್ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.