ಮಂಗಳೂರು: ಮಳೆಯಿಂದ ಜಿಲ್ಲೆಯಲ್ಲಿ 54.36 ಕೋಟಿ ನಷ್ಟ, ತಕ್ಷಣವೇ ಪರಿಹಾರಕ್ಕೆ ಸೂಚಿಸಿದ ಉಸ್ತುವರಿ ಸಚಿವ

ದಕ್ಷಿಣ ಕನ್ನಡ ಜಿಲ್ಲೆ ಪ್ರವಾಹದಿಂದ ನಲುಗಿ ಹೋಗಿದೆ. ನೆರೆಯಿಂದ ಕೆಲವೊಂದು ಕಡೆ ಸಂಪೂರ್ಣ ಅನೇಕ ಮನೆಗಳು ಹಾಗೂ ಸಾರ್ವಜನಿಕ ಆಸ್ತಿಗಳು ಹಾನಿಯಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ಮಾಡಿ ತಿಳಿಸಿದ್ದಾರೆ, ನೆನ್ನೆ (ಆ.2) ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಇದುವರೆಗೆ 11 ಮಂದಿ ಜೀವ ಕಳೆದುಕೊಂಡಿದ್ದಾರೆ. 154 ಮನೆಗಳು ಪೂರ್ತಿ ಹಾನಿ 484 ಮನೆಗಳು ಭಾಗಶಃ ಹಾನಿಯಾಗಿದೆ ಎಂದು ಹೇಳಿದರು.
ಇದರ ಜತೆಗೆ ಒಟ್ಟು 65 ಬ್ರಿಜ್ ಡ್ಯಾಮೆಜ್ ಆಗಿದೆ. 3 ಕಾಳಜಿ ಕೇಂದ್ರ ಇದ್ದು, 138 ಮಂದಿ ಆಶ್ರಯ ಪಡೆದಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು. ಸರ್ಕಾರ ಕಡೆಯಿಂದ ಪೂರ್ತಿ ಹಾನಿಯಾದ ಮನೆಗೆ 1.20 ಲಕ್ಷ, ಪ.ಜಾತಿ ಪ.ಪಂಗಡಗಳಿಗೆ 1.50 ಲಕ್ಷ ನೀಡಲಾಗುವುದು ಎಂದು ಹೇಳಿದ್ದಾರೆ. ಅನಧಿಕೃತ ಮನೆಗೆ 1 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.
ಭಾಗಶಃ ಹಾನಿಯಾದ ಮನೆಗೆ 50 ಸಾವಿರ, ಉಪಕರಣ ಹಾನಿಗೆ 5 ಸಾವಿರ ಪರಿಹಾರ ನೀಡಲಾಗುವುದು, ಇನ್ನು ಹಾನಿಯಾದ 18 ಅಂಗನವಾಡಿಗೆ 37 ಲಕ್ಷ, 106 ಶಾಲಾ ದುರಸ್ತಿಗೆ 1.94 ಕೋಟಿ ರೂ. ನೀಡಲಾಗುವುದು ಎಂದು ಹೇಳಿದ್ದಾರೆ. ಮಳೆಹಾನಿಗೆ ತಕ್ಷಣ ಪರಿಹಾರ ನೀಡಲು ಗ್ರಾಮ ಪಂಚಾಯತ್‌ಗಳಿಗೂ ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ.
ಇನ್ನು 20 ಕೋಟಿ ಯಷ್ಟು ವಿಕೋಪ ನಿರ್ವಹಣೆಗೆ ಹಣ ನೀಡಲಾಗಿದೆ. ಅದ್ಯಪಾಡಿ, ಕೆತ್ತಿಕಲ್‌ಗೆ ಪರಿಹಾರ ಕಂಡು ಹಿಡಿಯಲು ಟೆಕ್ನಿಕಲ್ ತಂಡ ರಚನೆ ಮಾಡಲಾಗಿದೆ. ಇದರ ಜತೆಗೆ ತಜ್ಞರ ತಂಡದಿಂಲೂ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು. ಈಗಾಗಲೇ ಮಳೆ ಹಾನಿ ಪರಿಶೀಲನೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ಒಟ್ಟು 54.36 ಕೋಟಿ ನಷ್ಟವಾಗಿದೆ ಎಂದು ಹೇಳಿದರು.
ಕೆತ್ತಿಕಲ್ ಬಗ್ಗೆ ಎಲ್ಲರ ನಿರ್ಲಕ್ಷ್ಯ ಇದೆ
ಕೆತ್ತಿಕಲ್ ಮಣ್ಣು ಕುಸಿತದ ಆತಂಕದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ಯಾರು ಹೇಳಿಲ್ಲ. ಲ್ಯಾಂಡ್ ಸ್ಲೈಡ್ ಆತಂಕದಿಂದ ಕಡಬದಲ್ಲಿ 31 ಜನ ಶಿಫ್ಟ್ ಆಗಿದ್ದಾರೆ. ವಿಕೋಪ ಆದಾಗ ಎಲ್ಲರೂ ಮಾತನಾಡುತ್ತಾರೆ ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಿದೆ ಎಂದು ಹೇಳಿದರು. ಪರಿಸರದ ಮೇಲೆ ಆಗುವ ಒತ್ತಡವೂ ದುರಂತಕ್ಕೆ ಕಾರಣವಾಗುತ್ತಿದೆ. ಅಭಿವೃದ್ಧಿ ಸಮತೋಲನದ ಬಗ್ಗೆ ಯೋಚನೆ ಮಾಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.