ಕೈಕಂಬ : ರೋಸಾ ಮಿಸ್ತಿಕಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಡಾ. ಲೊಲಿಟಾ ಪ್ರೇಮಾ ಪಿರೇರಾಗೆ ವಿದಾಯ
ಕೈಕಂಬ : ಗುರುಪುರ-ಕೈಕಂಬ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪ್ರೌಢಶಾಲೆಯಲ್ಲಿ ಕಳೆದ ೫ ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಇದೀಗ ಕಿನ್ನಿಗೋಳಿಯ ಲಿಟ್ಲ ಪ್ಲವರ್ ಪ್ರೌಢಶಾಲೆಗೆ ವರ್ಗಾವಣೆಗೊಂಡ ಸಿಸ್ಟರ್ ಡಾ. ಲೊಲಿಟಾ ಪ್ರೇಮಾ ಪಿರೇರಾ ಅವರಿಗೆ ಜು. ೧ರಂದು ಶಾಲಾ ಸಭಾಗೃಹದಲ್ಲಿ ಬೆಥನಿ ಸಮೂಹ ಶಿಕ್ಷಣ ಸಂಸ್ಥೆಗಳು, ಶಾಲಾ ಶಿಕ್ಷಕ ವೃಂದ, ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಸನ್ಮಾನಕ್ಕುತ್ತರವಾಗಿ ಸಿಸ್ಟರ್ ಡಾ. ಲೊಲಿಟಾ ಪ್ರೇಮಾ ಪಿರೇರಾ ಅವರು ಮಾತನಾಡಿ, ಇದೊಂದು ಭಾವನಾತ್ಮಕ ಸಂದರ್ಭ. ರೋಸಾ ಮಿಸ್ತಿಕಾ ಮಾತೆಯ ಕೃಪೆಯಿಂದ ಈ ಶಾಲೆಯಲ್ಲಿ ೫ ವರ್ಷ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿದೆ. ಶಿಕ್ಷಣ ನಮ್ಮ ಜೀವನಕ್ಕೆ ಬುನಾದಿ. ಅದಿಲ್ಲದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಸಹಿತ ಶಿಕ್ಷಕ ವೃಂದಕ್ಕೆ ನನ್ನಲ್ಲಿರುವ ಜ್ಞಾನದ ವಿನಿಮಯ ಮಾಡಿಕೊಂಡಿದ್ದೇನೆ. ಜೊತೆಗೆ ಎಲ್ಲರಿಂದಲೂ ಕಲಿತುಕೊಂಡಿದ್ದೇನೆ. ನಿಮ್ಮೆಲ್ಲರ ಸಹಕಾರಕ್ಕೆ ಕೃತಜ್ಞಳಾಗಿದ್ದೇನೆ ಎಂದರು.

ಅಧ್ಯಕ್ಷೆ ವಹಿಸಿದ್ದ ಶಾಲಾ ಸಂಚಾಲಕಿ ಸಿಸ್ಟರ್ ರೋಸ್ ಲೀಟಾ ಅವರು ಮಾತನಾಡಿ, ಅಜೆಕಾರು ಶಾಲೆಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲೇ ಲೊಲಿಟಾ ಪ್ರೇಮಾ ಪಿರೇರಾ ಅವರ ಬಹುಮುಖ ಪ್ರತಿಭೆ ಕಂಡಿದ್ದೆ. ಅವರು ಈ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಶಾಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ನಾಯಕತ್ವ ಗುಣ ಮತ್ತು ತಾಳ್ಮೆ ಮೈಗೂಡಿಸಿಕೊಂಡಿರುವ ಅವರು ಹಂತಹAತವಾಗಿ ಸಾಧನೆಯ ತುತ್ತ ತುದಿಗೇರಿದ್ದಾರೆ ಎಂದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸಿಕ್ವೇರಾ ಮಾತನಾಡಿ, ಸಿಸ್ಟರ್ ಲೊಲಿಟಾ ಅವರು ನಮ್ಮ ಶಾಲೆಗೆ ವರ್ಗಗೊಂಡು ಬಂದ ತಕ್ಷಣದಿಂದ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಅದರಂತೆ ಕಾರ್ಯಪ್ರವೃತ್ತರಾಗಿದ್ದರು. ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶಿಕ್ಷಣ ಸ್ನೇಹಿಗಳ ನೆರವು ಪಡೆದು ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಇವರ ಅವಧಿಯಲ್ಲಿ, ಕಳೆದ ೨ ವರ್ಷದಿಂದ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಸತತ ಶೇ. ೧೦೦ ಫಲಿತಾಂಶ ಬಂದಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷ, ಉದ್ಯಮಿ ವಿಲ್ಫೆçಡ್ ಪಿಂಟೊ ಮಾತನಾಡಿ, ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಿದ್ದ ಸಿಸ್ಟರ್ ಲೊಲಿಟಾ ಅವರ ಅವಧಿಯಲ್ಲಿ ಶಾಲೆಯ ಹೆಸರು ಇನ್ನಷ್ಟು ಎತ್ತರದಲ್ಲಿ ರಾರಾಜಿಸಿದೆ ಎಂದು ಕೊಂಡಾಡಿದರು.
ಶಿಕ್ಷಕ ಪ್ರವೀಣ್ ಕುಟಿನ್ಹೊ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೆಫ್ರಿಯನ್ ತೌರೊ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಉಷಾ, ಕಿನ್ನಿಕಂಬಳ ಬೆಥನಿ ಆಂಗ್ಲ ಮಾಧ್ಯಮ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಸಾಧನಾ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುನಿಲ್ ಗಂಜಿಮಠ, ಹಳೆ ವಿದ್ಯಾರ್ಥಿ ಸಂಘದ ಖಜಾಂಚಿ ಮೆಲ್ವಿನ್ ಸಲ್ಡಾನ ಉಪಸ್ಥಿತರಿದ್ದರು. ಶಿಕ್ಷಕಿ ಸಬಿನಾ ಕ್ರಾಸ್ತಾ ನಿರೂಪಿಸಿದರೆ, ಶಿಕ್ಷಕಿ ಮರ್ಸಿನ್ ಕ್ರಾಸ್ತಾ ವಂದಿಸಿದರು.