Published On: Fri, Apr 19th, 2024

ನರಿಕೊಂಬು: 21ರಂದು ಹನುಮಾನ್ ಮಂದಿರ ಲೋಕಾರ್ಪಣೆ

ಬಂಟ್ವಾಳ: ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲೆ ವತಿಯಿಂದ  1 ಕೋ.ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಹನುಮಾನ್ ಮಂದಿರ ಲೋಕಾರ್ಪಣೆ ಮತ್ತು ಶ್ರೀ ಆಂಜನೇಯ ಬಿಂಬ ಪುನರ್ ಪ್ರತಿಷ್ಠೆ ಕಾರ್ಯಕ್ರಮ ಎ. 21ರಂದು ಬೆಳಿಗ್ಗೆ ಗಂಟೆ 10.14ರ ಶುಭ ಮುಹೂರ್ತದಲ್ಲಿ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ ಹೇಳಿದ್ದಾರೆ.

ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲಾ ಬಳಿ ಬುಧವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸುಮಾರು 108 ವರ್ಷಗಳ ಹಿಂದೆ  ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಸಂಘಟನೆ ಮತ್ತು ಆರೋಗ್ಯವಂತ ಬಲಿಷ್ಟ ಯುವಕರನ್ನು ಸಜ್ಜುಗೊಳಿಸಲು ಸ್ಥಳೀಯರು ‘ಗೋದ ಶಾಲೆ’ ಆರಂಭಿಸಿ ಬಳಿಕ ನವಜೀವನ ವ್ಯಾಯಾಮ ಶಾಲೆಯಾಗಿ ರೂಪುಗೊಂಡಿದೆ’ ಎಂದರು.

ಕಳೆದ 6 ವರ್ಷಗಳ ಹಿಂದೆ ನೂತನ ವ್ಯಾಯಾಮ ಶಾಲೆ ಮತ್ತು ಧ್ಯಾನಮಂದಿರ ಸಹಿತ ಹನುಮಾನ್ ಮಂದಿರ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ದಾನಿಗಳ ನೆರವು ಮತ್ತು ಸ್ಥಳೀಯರ ಶ್ರಮದಾನದಿಂದ ಕಾಮಗಾರಿ ಪೂರ್ಣಗೊಂಡಿದೆ. ಕಳೆದ 45 ವರ್ಷಗಳಿಂದ ಇದೇ ಸಭಾಂಗಣ ಬಳಿ ಸಾರ್ವಜನಿಕ ಶ್ರೀ ಗಣೇಶೋತ್ಸವವೂ ನಡೆಯುತ್ತಿದೆ ಎಂದು ನವಜೀವನ ವಾಯಾಮ ಶಾಲೆ ಅಧ್ಯಕ್ಷ ಶರತ್ ಎಚ್. ತಿಳಿಸಿದರು.

ಹೊರೆಕಾಣಿಕೆ:

20ರಂದು ಸಂಜೆ 4 ಗಂಟೆಗೆ ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಬಳಿ ಹೊರಡುವ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಗೆ ದೇವಳದ ಮೊಕ್ತೇಸರ ಜನಾರ್ದನ ಭಟ್ ಚಾಲನೆ ನೀಡಲಿದ್ದು, ಒಟ್ಟು 24 ದಿನಗಳಲ್ಲಿ ನಿತ್ಯ ಭಜನೆ ಸಂಕೀರ್ತನೆ ನಡೆಯುತ್ತಿದೆ ಎಂದು ಸಮಿತಿ ಸದಸ್ಯ ಬಾಲಕೃಷ್ಣ ಮಾಸ್ತರ್ ಹೇಳಿದರು.  

ಇದೇ 21ರಿಂದ 23ರತನಕ ವಿವಿಧ ಧಾರ್ಮಿಕ ಮತ್ತು ವೈದಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಧಾರ್ಮಿಕ ಸಭೆಯಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನ ವಿವೇಕ ಚೈತನ್ಯಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು.  

 23ರಂದು ‘ಹನುಮ ಜಯಂತಿ’ ನಡೆಯಲಿದ್ದು, ಪ್ರತಿದಿನ ಮದ್ಯಾಹ್ನ ಮತ್ತು ರಾತ್ರಿ ದೇವರಿಗೆ ವಿಶೇಷ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ವಿವರಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಹಿಳಾ ಸಮಿತಿ ಅಧ್ಯಕ್ಷೆ ಹೇಮಲತಾ ಸಾಲಿಯಾನ್, ಪ್ರಮುಖರಾದ ಉಮೇಶ ನೆಲ್ಲಿಗುಡ್ಡೆ, ನರ್ಸಪ್ಪ ಅಮೀನ್, ಗಣೇಶ ಕುಲಾಲ್, ಅಶೋಕ್ ಮಂಜೇಶ್ವರ, ವೇದವ ಗಾಣಿಗ, ಆಶಾ ವೇದವ, ಪ್ರಜ್ವಲ್, ಪ್ರಕಾಶ್, ನವೀನ್ ಬೋಳಂತೂರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter