ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ರೈತ ನಿಧಿ ವಿತರಣಾ ಕಾರ್ಯಕ್ರಮ
ಬಂಟ್ವಾಳ: ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಸಾಲ ಪಡೆದುಕೊಂಡು ಆಕಸ್ಮಿಕ ಅಥವಾ ಸ್ವಾಭಾವಿಕವಾಗಿ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ರೈತನಿಧಿಯ ವಿತರಣಾ ಕಾರ್ಯಕ್ರಮ ಶುಕ್ರವಾರ ಸಂಘದ ಬೆಳ್ಳಿಪಾಡಿ ದಿ. ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆಯಿತು.

ಸಂಗಬೆಟ್ಟು ಗ್ರಾ.ಪಂ ಅಧ್ಯಕ್ಷೆ ರಾಜೀವಿ ಪೂಜಾರಿ ಅವರು ವಿತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ 34 ಮಂದಿ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು.
ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು ಕಳೆದ 75 ವರ್ಷಗಳ ಹಿಂದೆ ದಿ. ಕೃಷ್ಣ ರೈ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದು ರೈತರಿಗೆ ಅಗತ್ಯಕ್ಕೆ ತಕ್ಕಂತೆ ಸಾಲ ನೀಡುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಸಂಘವು ಹತ್ತು ಹಲವು ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ, ಜಿಲ್ಲೆಯ ಇತರ ಸಹಕಾರಿ ಸಂಘಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತಾನಾಡಿ ಸಂಘದಲ್ಲಿ ಸಾಲ ಪಡೆದಿರುವ ರೈತರು ಆಕಸ್ಮಿಕವಾಗಿ ಅಥವಾ ಸ್ವಾಭಾವಿಕವಾಗಿ ಮರಣ ಹೊಂದಿದರೆ ಅಂತಹ ಸಾಲಗಾರ ಸದಸ್ಯರ ಕುಟುಂಬಕ್ಕೆ ತಕ್ಕ ಮಟ್ಟಿನಲ್ಲಿ ನೆರವಾಗುವ ದೃಷ್ಠಿಯಲ್ಲಿ ಸದಸ್ಯರ ಕುಟುಂಬಕ್ಕೆ ಸಹಕಾರ ನೀಡುವ ಈ ರೈತ ನಿಧಿ ಯೋಜನೆಯನ್ನು 2023-24 ನೇ ಸಾಲಿನಿಂದ ಜಾರಿಗೆ ತರಲಾಗಿದ್ದು, ಈ ಯೋಜನೆಯಲ್ಲಿ ಅರ್ಹರಾದ ಸದಸ್ಯರ ಕುಟುಂಬಗಳಿಗೆ ರೈತನಿಧಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತವನ್ನು ಹೆಚ್ಚಿಸುವ ಚಿಂತನೆ ಮಾಡಲಾಗುವುದು ಎಂದರು.
ಸಿದ್ದಕಟ್ಟೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಎ ಗೋಪಿನಾಥ ರೈ, ಕುಕ್ಕಿಪಾಡಿ ಗ್ರಾ.ಪಂ ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರ್, ರೋಟರಿ ಕ್ಲಬ್ ಪಲ್ಗುಣಿ ಸಿದ್ದಕಟ್ಟೆ ಅಧ್ಯಕ್ಷ ಮೋಹನ್ ಜಿ ಮೂಲ್ಯ, ಸಂಗಬೆಟ್ಟು ಗ್ರಾ.ಪಂ ಉಪಾಧ್ಯಕ್ಷ ಸುರೇಶ್ ಕುಲಾಲ್, ಕುಕ್ಕಿಪಾಡಿ ಗ್ರಾ.ಪಂ ಉಪಾಧ್ಯಕ್ಷೆ ಬೇಬಿ ಪೂಜಾರ್ತಿ, ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕಿನ ನಿರ್ದೇಶಕ ಲಿಂಗಪ್ಪ ಪೂಜಾರಿ ಹಲಾಯಿ, ಆರಂಬೋಡಿ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಹುಲಿಮೇರು, ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ನಿರ್ದೇಶಕರಾದ, ಸಂದೇಶ್ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ದಿನೇಶ್ ಪೂಜಾರಿ, ವೀರಪ್ಪ ಪರವ, ಜಾರಪ್ಪ ನಾಯ್ಕ, ಉಮೇಶ್ ಗೌಡ, ದೇವರಾಜ್ ಸಾಲ್ಯಾನ್, ಹರೀಶ್ ಆಚಾರ್ಯ, ಅರುಣಾ ಎಸ್ ಶೆಟ್ಟಿ, ಮಾಧವ ಶೆಟ್ಟಿಗಾರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕಿ ಮಂದಾರತಿ ಎಸ್ ಶೆಟ್ಟಿ ಸ್ವಾಗತಿಸಿ, ಸಿಬ್ಬಂದಿ ಸುಭಾಶ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.