ʼಯಕ್ಷರಂಗದ ರಾಜʼ ಎಂದೇ ಖ್ಯಾತರಾಗಿದ್ದ ಪೆರುವಾಯಿ ನಾರಾಯಣ ಶೆಟ್ಟಿ ವಿಧಿವಶ
ಕೈಕಂಬ: ಯಕ್ಷಗಾನದ ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ(82) ಜ.23ರಂದು ಮಂಗಳವಾರ ರಾತ್ರಿ ದೈವಾಧೀನರಾಗಿದ್ದಾರೆ.
ಕಂಚಿನ ಕಂಠ, ಶ್ರುತಿಬದ್ಧ ಮಾತು ಹಾಗೂ ಅರ್ಥಪೂರ್ಣ ಸಂಭಾಷಣೆಗೆ ಹೆಸರಾಗಿದ್ದ ಯಕ್ಷರಂಗದ ರಾಜ ಎಂದೇ ಖ್ಯಾತರಾಗಿದ್ದ ಪೆರುವಾಯಿ ನಾರಾಯಣ ಶೆಟ್ಟಿ ವಿಧಿವಶರಾಗಿದ್ದಾರೆ.
ಇವರು ಬಂಟ್ವಾಳ ತಾಲೂಕಿನ ಪೆರುವಾಯಿ ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಗಳ ಪುತ್ರ. ತಮ್ಮ 12ನೇ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದ ಕಲಾವಿದ, ಮಡಾವು, ಧರ್ಮಸ್ಥಳ, ಪೊಳಲಿ ರಾಜರಾಜೇಶ್ವರೀ, ಕದ್ರಿ, ಕುಂಬಳ, ಕಟೀಲು, ಕುಂಟಾರು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ಸುಮಾರು 52 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು ಬಳಿಕ ಅನಾರೋಗ್ಯದಿಂದಾಗಿ ಯಕ್ಷರಂಗದಿಂದ ನಿವೃತ್ತಿ ಪಡೆದಿದ್ದರು.
ಇವರಿಗೆ 2016ನೇ ಸಾಲಿನ “ಯಕ್ಷದ್ರುವ ಪಟ್ಲ ಪ್ರಶಸ್ತಿ” ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.