ಗೋಳಿದಡಿಗುತ್ತಿನ ʼಗುತ್ತುದ ವರ್ಸೊದ ಪರ್ಬೊ’ ವಿದ್ಯುಕ್ತವಾಗಿ ಚಾಲನೆ
ಕೈಕಂಬ:ಮಂಗಳೂರಿಗೆ ಸಮೀಪದ ಗುರುಪುರ ಗೋಳಿದಡಿ ಗುತ್ತಿನಲ್ಲಿ ಜ.೧೯ರಂದು ಶುಕ್ರವಾರ ಬೆಳಿಗ್ಗೆ ಶ್ರೀ ವೈದ್ಯನಾಥಾಧ್ಯ ಪಂಚ ದೇವತೆಗಳ ಆರಾಧನೆ, ಉತ್ಪಾತ ಶಾಂತಿ ಹಾಗೂ ಗಣಹೋಮದೊಂದಿಗೆ ಮೂರು ದಿನಗಳ ಗೋಳಿದಡಿಗುತ್ತಿನ
‘ಗುತ್ತುದ ವರ್ಸೊದ ಪರ್ಬೊ’ ವಿದ್ಯುಕ್ತವಾಗಿ ಚಾಲನೆಗೊಂಡಿತು.

ಗೋಳಿದಡಿಗುತ್ತಿನ ಯಜಮಾನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಅವರ ಧರ್ಮಪತ್ನಿ ಉಷಾ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹಾಗೂ ಮಕ್ಕಳು ದೇವರ ಪೂಜೆಗೆ ಕುಳಿತ್ತಿದ್ದು, ಪಾವಂಜೆಯ ಡಾ. ಯಾಜಿ. ಎಚ್. ನಿರಂಜನ ಭಟ್ ಹಾಗೂ ಶಿವರಾಮ ಹೆಬ್ಬಾರ್ ಪೂಜಾ ವಿಧಿ-ವಿಧಾನ ನೆರವೇರಿಸಿದರು.
ವರ್ಷಂಪ್ರತಿಯಂತೆ ಈ ವರ್ಷವೂ ನೂರಾರು ಭಕ್ತರಿಗೆ ಗುತ್ತಿನ ಚಾವಡಿಯಲ್ಲಿ ದೇವರ ಪ್ರಸಾದದೊಂದಿಗೆ ಮಹಿಳೆಯರು ಗಾಜಿನ ಬಳೆ ತೊಡಿಸಿಕೊಂಡು ಸಂತಸ ಪಟ್ಟುಕೊಂಡರು. ಊಟೋಪಚಾರದಲ್ಲಿ ಭಾಗವಹಿಸಿದ ಎಲ್ಲರಿಗೂ ದೇವರ ಪ್ರಸಾದ ರೂಪದಲ್ಲಿ ಕಲ್ಲಂಗಡಿ(ಬಚ್ಚಂಗಾಯಿ) ವಿತರಿಸಲಾಯಿತು. ಸ್ವಯಂ ಸೇವಕರಾದ ಚಾವಡಿ ಮಿತ್ರರು ಗುತ್ತು ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರು.
ಈ ವರ್ಷದ ಪರ್ಬದ ಸಾಮಾನ್ಯ ಜಾತ್ರೆ-ಉತ್ಸವಗಳಲ್ಲಿ ಕಂಡು ಬರುವಂತೆ ಆಟಿಕೆ, ಸೋಡಾ ಮತ್ತಿತರ ಸೊತ್ತುಗಳ ಮಾರಾಟದಂಗಡಿಗಳ ಸಾಲಿನಲ್ಲಿ ಪರ್ಬದ ವಿಶೇಷತೆಯಂತೆ ಐದಾರು ಸ್ಟಾಲುಗಳು `ಚರುಮುರಿ ಮೇಳ’ಕ್ಕೆ ಸಿದ್ಧಗೊಂಡಿದ್ದವು. ಮತ್ತೊಂದು ಕಡೆಯಲ್ಲಿ ಕತ್ತಿಗಳ ತಯಾರಿ ಮತ್ತು ಮಾರಾಟದಂಗಡಿ ಇತ್ತು.
ಮಧ್ಯಾಹ್ನ ೧ರಿಂದ ಗುತ್ತಿನ ಚಾವಡಿಯ ಮಿತ್ರರು ಇವರಿಂದ ಭಜನಾ ಸತ್ಸಂಗ ನಡೆಯಿತು. ಅತಿಥಿಗಳ ಸ್ವಾಗತಕ್ಕಾಗಿ ವಿಶ್ವನಾಥ ಬೆಳುವಾಯಿ ಮತ್ತವರ ತಂಡದಿಂದ ನಿರಂತರ ಡೋಲು, ಕೊಳಲು ವಾದನ ಕೇಳಿ ಬಂತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ ೭ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ಗಣೇಶ್ ಕೊಲಕ್ಕಾಡಿ ವಿರಚಿತ ʼಸತಿ ಸತ್ಯವತಿ’ ಕಾಲಮಿತಿ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸಹಿತ ಗಣ್ಯಾತಿಗಣ್ಯರು ದೇವರ ಪ್ರಸಾದ ಸ್ವೀಕರಿಸಿದರು.
ಜ.೨೦ರಂದು ಗುತ್ತಿನ ವರ್ಷದ ಒಡ್ಡೋಲಗ, ಮಂಗಳೂರು ಸನಾತನ ನಾಟ್ಯಾಲಯದ ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ ಮತ್ತು ವಿದುಷಿ ಶ್ರೀಲತಾ ನಾಗರಾಜ ಇವರ ಶಿಷ್ಯ ವೃಂದದವರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ.