ಕುಡುಪು ಮಿತ್ರ ಮಂಡಳಿ(ರಿ) ಬೆಳ್ಳಿ ಮಹೋತ್ಸವ
ಕೈಕಂಬ: ಮಿತ್ರ ಮಂಡಳಿ(ರಿ) ಕುಡುಪು ಇದರ 25ನೇ ವರ್ಷದ ಪ್ರಯುಕ್ತ ಬೆಳ್ಳಿ ಮಹೋತ್ಸವವನ್ನು ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಜ. ೧೬ರಂದು ಆಚರಿಸಲಾಯಿತು.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಕಿರು ಷಷ್ಠಿ ಪ್ರಯುಕ್ತ ಮಿತ್ರ ಮಂಡಳಿಯ ಬೆಳ್ಳಿ ಮಹೋತ್ಸವದ ಅಂಗವಾಗಿ ಜ. ೧೬ರಂದು ವಿಜಯ ಕುಮಾರ್ ಶೆಟ್ಟಿ ಕೊಡಿಯಾಲಬೈಲು ವಿರಚಿತ ʼಶಿವದೂತೆ ಗುಳಿಗೆ’ ಪೌರಾಣಿಕ ತುಳು ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಏರ್ಪಡಿಸಲಾದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ಕಷ್ಟದಲ್ಲಿರುವವರ ಕಣ್ಣೊರೆಸುವ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳೊಂದಿಗೆ ನಿರಂತರ ಸಮಾಜಮುಖಿ ಕೆಲಸ ಮಾಡುತ್ತ ಬಂದಿರುವ ಕುಡುಪುವಿನ ಮಿತ್ರ ಮಂಡಳಿ(ರಿ), ಹೊಸ ಪೀಳಿಗೆಗೆ ಮಾದರಿ ಸಂಸ್ಥೆಯಾಗಿದೆ. ಸದ್ದು ಗದ್ದಲವಿಲ್ಲದೆ ಸೇವಾನಿರತ ಸಂಸ್ಥೆ ಇದಾಗಿದೆ ಎಂದು ಹೇಳಿದರು.

ಮನಪಾ ಮಾಜಿ ಮೇಯರ್, ಹಾಲಿ ಕಾರ್ಪೊರೇಟರ್ ಹಾಗೂ ಕುಡುಪು ದೇವಸ್ಥಾನದ ಮೊಕ್ತೇಸರ ಭಾಸ್ಕರ್ ಕೆ. ಮಾತನಾಡಿ, ಸೇವಾ ಮನೋಭಾವನೆಯ ಸಂಸ್ಥೆಯಾಗಿರುವ ಮಿತ್ರ ಮಂಡಳಿ, ಕುಡುಪು ದೇವಸ್ಥಾನದೊಂದಿಗೆ ಸೇವಾ ನಂಟು ಹೊಂದಿದೆ. ಧಾರ್ಮಿಕ, ಶೈಕ್ಷಣಿಕ ಕೆಲಸ ಮಾಡುತ್ತ ಬಂದಿರುವ ಮಂಡಳಿ ಬಡ ಜನರ ಸೇವೆಗೆ ಮುಡಿಪಾಗಿರುವ ಶಿಸ್ತಿನ ಸಂಸ್ಥೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಡುಪು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ ಮಾತನಾಡಿ, ಯಕ್ಷಗಾನ ಮತ್ತು ನಾಟಕ ಅಭಿಮಾನಿಯಾದ ನಾನು ಶ್ರೀ ಕ್ಷೇತ್ರ ಕುಡುಪುವಿನ ಉತ್ಸವಗಳ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದೇನೆ. ೬೦ ವರ್ಷಗಳ ಹಿಂದೆ ನಾನು ನಾಟಕವೊಂದರಲ್ಲಿ ಅಜ್ಜನ ಪಾತ್ರ ನಿರ್ವಹಿಸಿದ್ದೆ. ಇಂದು ನಿಮ್ಮೆದುರು ಅಜ್ಜನಾಗಿ ನಿಂತಿದ್ದೇನೆ ಎಂದು ತನ್ನ ನಾಟಕಾಸಕ್ತಿ ವಿವರಿಸಿದರು.

ಈ ಸಂದರ್ಭದಲ್ಲಿ ವಿಜಯ ಕುಮಾರ ಶೆಟ್ಟಿ ಕೊಡಿಯಾಲಬೈಲು ಅವರನ್ನು ಸನ್ಮಾನಿಸಲಾದರೆ, ಕಳೆದ ೨೫ ವರ್ಷದಿಂದ ಮಿತ್ರ ಮಂಡಳಿ ಹಾಗೂ ದೇವಸ್ಥಾನದ ಅಗತ್ಯ ಕೆಲಸಗಳಲ್ಲಿ ಕೈಜೋಡಿಸಿರುವ ಬೊಂಡಂತಿಲ ಸೂರ್ಯನಾರಾಯಣ ಭಟ್, ರಶೀದ್, ಮಂಜುನಾಥ ಆರ್. ಪಾಲ್ ಮತ್ತು ಬೇಬಿ, ಸಂಘದ ಹಿರಿಯರಾದ ನಾಗರಾಜ ಭಟ್, ಚಂದ್ರಾಯ ಆಚಾರ್ಯ, ರೋಹಿತಾಶ್ವ, ಕುಮಾರ ಕೆ., ಅನಂತ ರಾವ್ ಕೆ. ಅವರನ್ನು ಗೌರವಿಸಲಾಯಿತು.
ವಿದ್ಯಾ ಪ್ರಾರ್ಥನೆಗೈದರು. ರಾಘವೇಂದ್ರ ಭಟ್ ವರದಿ ವಾಚಿಸಿದರು. ಮಲಬಾರ್ ಗೋಲ್ಡ್ ಉದ್ಯಮಿ ವಿ. ಕರುಣಾಕರನ್, ಕುಡುಪು ಸಹಕಾರಿ ಸಂಘದ ಜನಾರ್ದನ ಕೆ, ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್, ಉದ್ಯಮಿ ಸುಜನ್‌ದಾಸ್, ಆನುವಂಶಿಕ ಮೊಕ್ತೇಸರ ಮನೋಹರ ಭಟ್, ಆನುವಂಶಿಕ ಮೊಕ್ತೇಸರ ಬಾಲಕೃಷ್ಣ ಕಾರಂತ, ಮಿತ್ರ ಮಂಡಳಿ ಅಧ್ಯಕ್ಷ ರವೀಂದ್ರ, ನಾಗರಾಜ ಭಟ್, ಮಿತ್ರ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಸತೀಶ್ ಬಂದಲೆ, ಕಲಾಸಕ್ತರು, ಭಕ್ತರು ಉಪಸ್ಥಿತರಿದ್ದರು. ಶಿಕ್ಷಕ ವಾಸುದೇವ ರಾವ್ ಕುಡುಪು ಸ್ವಾಗತಿಸಿ ನಿರೂಪಿಸಿದರು.