ಅಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ
ಕೈಕಂಬ: ಅಮುಂಜೆ ಶ್ರೀ ಸೋಮನಾಥೇಶ್ವರ ದೇವಾಲಯದ ಅಷ್ಠಬಂಧ ಬ್ರಹ್ಮಕಲಶೋತ್ಸವವು ಜ.21ರಿಂದ 29ರವರೆಗೆ ಪೊಳಲಿ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿವುದು.
ಅಮ್ಮುಂಜೆಗುತ್ತು ಕುಟುಂಬಿಕರು ಅನಾದಿ ಕಾಲದಿಂದ ಆರಾಧಿಸಿಕೊಂಡು ಬಂದಿದ್ದ ಸೋಮನಾಥೇಶ್ವರ ದೇವಾಲಯವು ಕಾಲವಶದಿಂದ ಗತವೈಭವ ಕಳೆದುಕೊಂಡು ಕಾಲಗರ್ಭದಲ್ಲಿ ಅಡಗಿ ಹೋಗಿತ್ತು. ಸಿದ್ದಿಗೋಳಿ ಮರದ ಒಳಗಿದ್ದ ಲಿಂಗಕ್ಕೆ ಸ್ಥಳೀಯ ಯುವಕರೊಬ್ಬರು 7 ವರ್ಷಗಳ ಕಾಲ ನೀರಿನ ಅಭಿಷೇಕ ಮಾಡಿ ಹೂ ಇರಿಸುತ್ತಿದ್ದರು. ಬಳಿಕ ಪ್ರಶ್ನಾಚಿಂತನೆ ನಡೆಸಿ, ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಇದೀಗ ದೇವಾಲಯ ನಿರ್ಮಾಣ ಪೂರ್ಣಗೊಂಡು ಬ್ರಹ್ಮಕಲಶಕ್ಕೆ ಸಿದ್ಧತೆ ಪ್ರಾರಂಭವಾಗಿದೆ.
ಜ.21ರಂದು ಮಧ್ಯಾಹ್ನ 3ರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ, ಸಂಜೆ 6ರಿಂದ ಉಗ್ರಾಣ ಮುಹೂರ್ತ, ನಂತರ ಧಾರ್ಮಿಕ ಸಭೆ ನಡೆಯಲಿದೆ. ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಶಾಸಕರಾದ ರಾಜೇಶ್ ನೈಕ್ ಉಳಿಪಾಡಿಗುತ್ತು, ಉಮಾನಾಥ್ ಎ.ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಪವಿತ್ರಪಾಣಿ ಪಿ.ಮಾಧವ ಭಟ್ ಭಾಗವಹಿಸಲಿದ್ದಾರೆ.
ಜ.22ಕ್ಕೆ ಬೆಳಗ್ಗೆ 8:00ರಿಂದ ಗಣಪತಿ ಅಥರ್ವಶೀರ್ಷ ಹೋಮ, ಮಧ್ಯಾಹ್ನ 3:00ರಿಂದ ಭಜನೆ, ಸಂಜೆ 5:00ಕ್ಕೆ ವಾಸ್ತು ಹೋಮ, 6:00ರಿಂದ ನೃತ್ಯಂ ಗುರುಪುರ ಶಾಖೆಯ ವಿದುಷಿ ಲತಾ ಶಶಿಧರನ್ ಶಿಷ್ಯ ವೃಂದದಿಂದ – ‘ನೃತ್ಯಾರ್ಪಣಂ’ ಕಾರ್ಯಕ್ರಮ ನಡೆಯಲಿದೆ.
23ರಂದು ಬೆಳಗ್ಗೆ 7:00ಕ್ಕೆ ಗಣಪತಿ ಹೋಮ, ಮಧ್ಯಾಹ್ನ 3:00ರಿಂದ ಭಜನೆ, ಸಂಜೆ 5:00ಕ್ಕೆ ದುರ್ಗಾಪೂಜೆ, 6:00ರಿಂದ ‘ಶಿವದೂತೆ ಗುಳಿಗೆ’ ನಾಟಕ ಪ್ರದರ್ಶನ ನಡೆಯಲಿದೆ.
24ರ ಬೆಳಗ್ಗೆ 7:00ರಿಂದ ನವಗ್ರಹ ಹೋಮ, ಮಧ್ಯಾಹ್ನ 3:00ಕ್ಕೆ ಭಜನೆ, ಸಂಜೆ 5:00ರಿಂದ ನಿದ್ರಾಕಲಶ ಪೂಜೆ, ಸಂಜೆ 6:00ಕ್ಕೆ ಶ್ರೀ ಶಾರದಾ ಅಂಧ ಕಲಾವಿದರ ಸಂಘದಿಂದ ‘ಭಕ್ತಿ ಗಾನ ಸುಧಾ’ ನಡೆಯಲಿದೆ.
25ರಂದು ಬೆಳಗ್ಗೆ 7:00ಕ್ಕೆ ಶ್ರೀ ದೇವರ ಪ್ರತಿಷ್ಠಾಪನೆ, ಅಷ್ಟಬಂಧ ಪ್ರತಿಷ್ಠಾಪನೆ, ಮಹಾಪೂಜೆ, 10:00ರಿಂದ ʼಯಕ್ಷ-ಗಾನ-ವೈಭವ’, ಮಧ್ಯಾಹ್ನ 3:00ಕ್ಕೆ ಭಜನೆ, ಸಂಜೆ 5:00ರಿಂದ ದುರ್ಗಾಹೋಮ. 5.30ಕ್ಕೆ ಧಾರ್ಮಿಕ ಸಭೆ, 6:00ರಿಂದ ಮಂಜುಳಾ ಸುಬ್ರಹ್ಮಣ್ಯ ಶಿಷ್ಯ ವೃಂದದಿಂದ ಭರತನಾಟ್ಯ ನಡೆಯಲಿದೆ.
26ಕ್ಕೆ ಬೆಳಗ್ಗೆ 7:00ರಿಂದ ಚೋರಶಾಂತಿ, ಮಧ್ಯಾಹ್ನ 3:00ರಿಂದ ಭಜನೆ, ಸಂಜೆ 5:00ಕ್ಕೆ ಮಂಟಪ ಸಂಸ್ಕಾರ, 6:00ರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
27ರಂದು ಬೆಳಗ್ಗೆ 7:00ಕ್ಕೆ ಮಹಾಬಲಿ ಪೀಠ ಪ್ರತಿಷ್ಠಾಪನೆ. ಮಧ್ಯಾಹ್ನ 3:00ರಿಂದ ಭಜನೆ, ಸಂಜೆ 5:00ಕ್ಕೆ ಬ್ರಹ್ಮಕಲಶಪೂಜೆ, ದ್ರವ್ಯಕಲಶಪೂಜೆ, ಅಮ್ಮುಂಜೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7:00ರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಜ.28ರಂದು ಬೆಳಗ್ಗೆ 6:00ರಿಂದ ಗಣಪತಿ ಹೋಮ, 7:00ಕ್ಕೆ ಕಲಶಾಭಿಷೇಕ ಮತ್ತು 10.05ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಬಳಿಕ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಜಿ ಸಚಿವ ಬಿ.ರಮಾನಾಥ ರೈ, ಬಿ.ನಾಗರಾಜ್ ಶೆಟ್ಟಿ, ಉದ್ಯಮಿ ಭುವನೇಶ್ ಪಚ್ಚಿನಡ್ಕ ಭಾಗವಹಿಸಲಿರುವರು.
ಮಧ್ಯಾಹ್ನ 12:00ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಮಧ್ಯಾಹ್ನ 3:00ರಿಂದ ಭಜನೆ, ಸಂಜೆ 6.30ಕ್ಕೆ ರಂಗಪೂಜೆ, ಬಲಿ ಉತ್ಸವ ನಡೆಯಲಿದೆ. ಜ.29ರಂದು 8.30ರಿಂದ ಸಂಪ್ರೋಕ್ಷಣೆ, ಮಹಾಪೂಜೆ ಮತ್ತು ಮಂತ್ರಾಕ್ಷತೆ ಜರುಗಲಿರುವುದು.