ಅಡ್ಡೂರು ಸಹರಾ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ, ಪ್ರತಿಭೆಗಳಿಗೆ ಉತ್ತೇಜನ ಇಲ್ಲಿದೆ : ಇನಾಯತ್ ಅಲಿ
ಕೈಕಂಬ: ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಡಿ. ೩೦ರಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯು. ಪಿ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಿಂದ ನಡೆಯಿತು.
ವಾರ್ಷಿಕೋತ್ಸವದಲ್ಲಿ ಶಾಲಾ ಮಕ್ಕಳನ್ನುದ್ದೇಶಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ, ಮಕ್ಕಳು ಯಾವುದೇ ಉನ್ನತ ಹುದ್ದೆ ಹಿಡಿದರೂ ತಂದೆ-ತಾಯಿಯರು, ಗುರು-ಹಿರಿಯರು ಮತ್ತು ದೇಶದ ಮೇಲೆ ಅಭಿಮಾನ ಇಟ್ಟುಕೊಳ್ಳಬೇಕು.
ಮನೆ, ಸಮುದಾಯ, ಸಮಾಜ ಮತ್ತು ದೇಶಕ್ಕೆ ಒಳ್ಳೆಯದು ಬಯಸುವ ಮಕ್ಕಳು ಈ ದೇಶದ ಆಸ್ತಿ. ಭವಿಷ್ಯ ದಿನಗಳಲ್ಲಿ ನಿಮ್ಮಿಂದ ಕಲಿತ ಶಾಲೆಯ ಅಭಿವೃದ್ಧಿಯ ಕೆಲಸಗಳಾಗಲಿ ಎಂದು ಹಾರೈಸಿದರು.
ಶಾಲಾ ಮಕ್ಕಳು ಸಾದರಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದಾಗ ಇಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಶಿಕ್ಷಕ ವರ್ಗ ಮತ್ತು ಆಡಳಿತ ಮಂಡಳಿ ಇರುವುದು ವೇದ್ಯವಾಗುತ್ತದೆ. ಶಾಲಾ ಮೈದಾನಕ್ಕೆ ವೈಯಕ್ತಿಕ ನೆರವಿನೊಂದಿಗೆ ಸರ್ಕಾರದಿಂದ ಅಗತ್ಯ ಅನುದಾನ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದವರು ಭರವಸೆ ನೀಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಯು. ಪಿ. ಇಬ್ರಾಹಿಂ ಸ್ವಾಗತಿಸಿದರು. ಶಾಲಾ ಸಂಚಾಲಕ ಎ. ಕೆ. ಇಸ್ಮಾಯಿಲ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್(ಎಂಡಬ್ಲ್ಯೂಎ-ಅಡ್ಡೂರು) ಇದರ ಗೌರವಾಧ್ಯಕ್ಷ ಎಂ. ಎಚ್. ಮೈಯ್ಯದ್ದಿ, ಎಂಡಬ್ಲ್ಯೂಎ ಉಪಾಧ್ಯಕ್ಷರಾದ ಅಹಮ್ಮದ್ ಬಾವಾ ಮತ್ತು ಎನ್. ಇ. ಮೊಹಮ್ಮದ್, ಎಂಡಬ್ಲ್ಯೂಎ ಸಲಹೆಗಾರರಾದ ಡಾ. ಸಿದ್ಧಿಕ್ ಅಡ್ಡೂರು ಮತ್ತು ಅಬ್ದುಲ್ ಖಾದರ್ ಇಡ್ಮ, ಎಂಡಬ್ಲ್ಯೂಎ ಖಜಾಂಚಿ ಹಾಗೂ ಗುರುಪುರ ಗ್ರಾಪಂ ಸದಸ್ಯ ಎ. ಕೆ. ಅಶ್ರಫ್, ಪಿಟಿಎ ಅಧ್ಯಕ್ಷ ವಿಶ್ವಾಂಭರ, ಸಹರಾ ಸಮೂಹ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಕೇಶವ ಎಚ್. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇನಾಯತ್ ಅಲಿ ಅವರನ್ನು ಶಾಲಾ ಆಡಳಿತ ಮಂಡಳಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿತು. ೨೦೨೨-೨೩ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ ೯೬.೬೪(೬೦೪) ಅಂಕ ಗಳಿಸಿದ ಮಾನಸ್ ಡಿ. ಅಮ್ಮುಂಜೆ ಅವರನ್ನು ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಮನಮೋಹಕ ನೃತ್ಯ, ಪ್ರಹಸನದಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಿಕ್ಷಕ ವರ್ಗ ಮತ್ತು ಶಾಲಾ ಆಡಳಿತ ಮಂಡಳಿ, ಎಂಡಬ್ಲ್ಯೂಎ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಶಿಕ್ಷಕಿಯರಾದ ಹರ್ಷಿತಾ, ಶಿಫಾಲಿ ಮತ್ತು ಅಶ್ವಿನಿ ನಿರೂಪಿಸಿದರು. ಉಪನ್ಯಾಸಕಿ ಕಿಶೋರಿ ವಂದಿಸಿದರು.