ಬಿ.ಸಿ.ರೋಡಿನಲ್ಲಿ ಮುಸುಕು ಧಾರಿಯಿಂದ ಸರಣಿ ಕಳ್ಳತನ, ಸಿ.ಸಿ.ಕ್ಯಾಮರಕ್ಕೆ ಮುಸುಕು ಹಾಕಿ ನಡೆಸಿದ ಕೃತ್ಯ
ಬಂಟ್ವಾಳ: ವಾರದ ಹಿಂದೆಯಷ್ಟೆ ಬಿ.ಸಿ. ರೋಡಿನ ಕೈಕಂಬ ಜಂಕ್ಷನ್ ನಲ್ಲಿ ಸರಣಿ ಕಳ್ಳತನ ಪ್ರಕರಣ ನೆನಪು ಮಾಸುವ ಮೊದಲೇ ಭಾನುವಾರ ಮಧ್ಯ ರಾತ್ರಿ ವೇಳೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿರುವ, ಬಿ ಸಿ ರೋಡು ಮುಖ್ಯ ಪೇಟೆಯಲ್ಲೇ ಸಿ.ಸಿ. ಕ್ಯಾಮರ ಕಣ್ಗಾವಲಿನಲ್ಲಿರುವ ಹೋಟೆಲ್, ಮೆಡಿಕಲ್, ಅಂಗಡಿ ಸೇರಿದಂತೆ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದಾರೆ. ವಿಚಿತ್ರವೆಂದರೆ ಮುಸುಕುಧಾರಿಯಾಗಿದ್ದ ಕಳ್ಳ ಸಿ.ಸಿ.ಕ್ಯಾಮರಕ್ಕು ಮುಸುಕು ಹಾಕಿ ತನ್ನ ಕೈಚಳಕ ತೋರಿದ್ದಾನೆ.
ಬಿ.ಸಿ.ರೋಡು ಮುಖ್ಯ ಪೇಟೆಯ ಹೆದ್ದಾರಿಗೆ ತಾಗಿಕೊಂಡೆ ಇರುವ “ಆನಿಯಾ ದರ್ಬಾರ್” ಹೋಟೆಲಿನ ಎರಡೆರಡು ಶಟರ್ ಗಳನ್ನು ಬೇಧಿಸಿರುವ ಕಳ್ಳ ಕ್ಯಾಶ್ ಡ್ರಾವರಿನಲ್ಲಿದ್ದ ಸುಮಾರು 70 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವನ್ನು ಎಗರಿಸಿದ್ದಾನೆ. ಮುಸುಕು ಧಾರಿಯಾಗಿದ್ದ ಖದೀಮ ಹೋಟೆಲಿನ ಗೇಟಿನ ಬೀಗವನ್ನು ಮುರಿಯುವ ದೃಶ್ಯ ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿದ್ದು, ಉಳಿದಂತೆ ಒಳ ಪ್ರವೇಶಿಸುವ ಹಂತದಲ್ಲಿ ಸಿ.ಸಿ. ಕ್ಯಾಮೆರಾಕ್ಕೂ ಕವಚ ಹಾಕಿ ತನ್ನ ಕೈ ಚಳಕ ತೋರಿದ್ದಾನೆ.
ಹೋಟೆಲಿನ ಇನ್ನೊಂದು ಪಾಶ್ವದಲ್ಲಿರುವ ಅಂಗಡಿ, ಮೇಲಂತಸ್ತಿನಲ್ಲಿರುವ ಮೆಡಿಕಲ್ ಸಹಿತ ಕೆಲ ಅಂಗಡಿಗಳನ್ನು ಟಾರ್ಗೆಟ್ ಮಾಡಿರುವ ಕಳ್ಳರು ಕೈಚಳಕ ತೋರಿ ಪರಾರಿಯಾಗಿದ್ದಾರೆ.
ಬಿ ಸಿ ರೋಡಿನ ಪೇಟೆಯ ಹೃದಯಭಾಗದಲ್ಲೇ ಅದೂ ಕೂಡಾ ಪೊಲೀಸ್ ಉಪ ವಿಭಾಗಾಧಿಕಾರಿಗಳ ಕಚೇರಿ, ನಗರ ಪೊಲೀಸ್ ಇನ್ಸ್ ಪೆಕ್ಟರ್ ಕಚೇರಿ ಹಾಗೂ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಎಲ್ಲವೂ ಕೂಗಳತೆ ದೂರದಲ್ಲಿದ್ದು, ರಾತ್ರಿ ಪಾಳಿಯಲ್ಲಿ ಪೊಲೀಸ್ ಗಸ್ತು ವಾಹನಗಳೂ ತಿರುಗಾಡುತ್ತಿರುವ ಮಧ್ಯೆ ಕಳ್ಳರು ತಮ್ಮ ಚಲಾಕಿತನ ತೋರಿರುವುದು ಇದೀಗ ಪೊಲೀಸ್ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದರೆ. ಜನಸಾಮಾನ್ಯರಲ್ಲಿ ಆತಂಕವನ್ನುಂಟು ಮಾಡಿದೆ.
ಇತ್ತೀಚೆಗಷ್ಟೆ ಬಿ ಸಿ ರೋಡು ಸಮೀಪದ ಅಜ್ಜಿಬೆಟ್ಟು ಅಂಗಡಿಯಲ್ಲಿ ಹಾಡ ಹಗಲೇ ಮಹಿಳೆಯ ಕತ್ತಿನಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದ ಕಳ್ಳರನ್ನು ಎರಡೇ ದಿನಗಳ ಹಿಂದಯಷ್ಟೆ ಬಂಧಿಸಿ ಪ್ರಕರಣ ಬೇಧಿಸಿರುವ ಪೊಲೀಸ್ ಅಧಿಕಾರಿಗಳಿಗೆ ಇದೀಗ ಭಾನುವಾರ ರಾತ್ರಿ ಪೇಟೆಯ ಹೃದಯ ಭಾಗದಲ್ಲಿ ನಡೆದಿರುವ ಸರಣಿ ಕಳ್ಳತನವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿ ಅಂಗಡಿ, ಹೋಟೆಲ್, ಮೆಡಿಕಲ್ ಸಹಿತ ಪೇಟೆಯ ಸಿ.ಸಿ.ಕ್ಯಾಮರಾಗಳ ಫೂಟೇಜ್ ಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು ಶೀಘ್ರದಲ್ಲೇ ಕಳ್ಳರನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕೈಕಂಬದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದಲ್ಲು ಆರೋಪಿಗಳ ಪತ್ತೆ ಕಾರ್ಯ ನಡೆಯಬೇಕಾಗಿದ್ದು ,ಈ ಎರಡು ಸರಣಿ ಕಳ್ಳತನದಲ್ಲಿ ಏಕಾಂಗಿಯೇ ಕೃತ್ಯ ನಡೆಸಿದ್ದು, ಎರಡೂ ಸರಣಿ ಕಳವು ಪ್ರಕರಣವು ಒರ್ವನೆ ನಡೆಸಿರುವ ಅನುಮಾನ ವ್ಯಕ್ತವಾಗಿದೆ.