ಉಂಡ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ. ನಗ – ನಗದು ದೋಚಿರುವ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು: ಆರೋಪಗಳಿಬ್ಬರ ಬಂಧನ
ಬಂಟ್ವಾಳ: ಉಂಡ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ ನಗ – ನಗದು ದೋಚಿರುವ ಪ್ರಕರಣವನ್ನು ಬೇಧಿಸಿರುವ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಜೇಶ್ವರ ಮೂಲದ ಪ್ರಸ್ತುತ ಪರಂಗಿಪೇಟೆ ಜುಮಾದಿಗುಡ್ಡೆ ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಶ್ರಫ್ ಆಲಿ ಮತ್ತು ಮಂಗಳೂರು ಕಸಬಾ ಬೆಂಗ್ರೆಯ ನಿವಾಸಿ ಮಹಮ್ಮದ್ ಎಂಬವರ ಪುತ್ರ ಕಬೀರ್ ಎಂದು ಹೆಸರಿಸಲಾಗಿದೆ.
ಬಂಧಿತರಿಂದ ಸುಮಾರು 4.50 ಲ.ರೂ. ಮೌಲ್ಯ ಚಿನ್ನ ಮತ್ತು ರೂ 4.00 ಲ.ರೂ.ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ದ.ಕ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನ, ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿರ್ದೇಶನ, ಪೊಲೀಸ್ ಉಪಾಧೀಕ್ಷಕರ ಬಂಟ್ವಾಳ ಉಪ ವಿಭಾಗ ರವರ ಆದೇಶದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಹರೀಶ್ ಮತ್ತವರ ಮತ್ತು ಸಿಬ್ಬಂದಿಗಳನ್ನೊಳಗೊಂಡಂತೆ ಜಿಲ್ಲಾ ಸಿ.ಡಿ.ಆರ್ ವಿಭಾಗದ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
2023 ರ ಅಕ್ಟೋಬರ್ 18 ರಿಂದ 23 ರ ನಡುವೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕೋಡಿಮಜಲು ನಿವಾಸಿ ಮೊಹಮ್ಮದ್ ಜಾಪರುಲ್ಲಾ ಎಂಬವರ ಮನೆಯ ಕಪಾಟನ್ನು ಒಡೆದು 27.50 ಲ.ರೂ. ನಗದು ಹಾಗೂ 4.96 ಲ.ರೂ.ಮೌಲ್ಯದ ಚಿನ್ನಾಭರಣಗಳ ಕಳವು ಪ್ರಕರಣ ನಡೆದಿತ್ತು.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಆರೋಪಿಗಳ ಪೈಕಿ ಅಶ್ರಪ್ ಆಲಿ ಎಂಬಾತ ಮನೆ ಮಾಲೀಕ ಮೊಹಮ್ಮದ್ ಜಾಪರುಲ್ಲಾ ಅವರ ಜೊತೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಅವರ ಕಟ್ಟಡ ಕಾಮಗಾರಿಯ ಜೊತೆ ಅವರ ಮನೆ ಗೆಲಸ ಕೂಡ ಮಾಡಿಕೊಂಡಿದ್ದು, ಮಾಲಕ ಸಹಿತ ಮನೆಯವರೊಂದಿಗೆ ವಿಶ್ವಾಸದಿಂದ ಇದ್ದ. ಅ.18 ರಂದು ಮನೆ ಮಾಲಕ ಜಾಪರುಲ್ಲಾ ಅಗತ್ಯ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು, ಮನೆಯವರು ಸಂಬಂಧಿಕರ ಮನೆಗೆ ಹೋಗುವಾಗ ಮನೆಗೆ ಬೀಗ ಹಾಕಿ ಕೀಯನ್ನು ಆಶ್ರಫ್ ನಲ್ಲಿ ನೀಡಿದ್ದರು.
ಮಾಲಕ ಸಹಿತ ಮನೆಯವರು ಆ. 23 ರಂದು ಮನೆಗೆ ಬಂದಾಗ ಮನೆಯ ಎದುರುಗಡೆ ಬಾಗಿಲಿಗೆ ಲಾಕ್ ಹಾಕಿದ್ದು, ಕೀ ಗಾಗಿ ಅಶ್ರಪ್ ಆಲಿಗೆ ಕರೆ ಮಾಡಿದಾಗ ಆತನ ಮೊಬೈಲ್ ನಂಬ್ರ ಸ್ವಿಚ್ ಆಪ್ ಆಗಿತ್ತು. ಅನುಮಾನದಿಂದ ಕಿಟಕಿ ಮೂಲಕ ನೋಡಿದಾಗ ಬೆಡ್ ರೂಮಿನಲ್ಲಿರುವ ಕಪಾಟಿನ ಬಾಗಿಲು ತೆರೆದಿದ್ದು ಕಂಡು ಬಂದಿತ್ತು.
ಮನೆಯ ಒಳಗೆ ನೋಡಿದಾಗ ಮನೆಯ ರೂಂಗಳಲ್ಲಿದ್ದ ಗೋದ್ರೇಜ್ ಕಪಾಟಿನಿಂದ ನಗದು ಚಿನ್ನಾಭರಣಗಳು ಕಳವಾಗಿತ್ತು. ಆರೋಪಿ ಅಶ್ರಪ್ ಆಲಿ ಬೆಂಗ್ರೆಯ ಕಬೀರ್ ಸೇರಿ ಈ ಕೃತ್ಯ ನಡೆಸಿರುವುದನ್ನು ಪೊಲೀಸರ ವಿಚಾರಣೆ ವೇಳೆ ಒಪ್ಪಕೊಂಡಿದ್ದಾರೆ.
ಬಂಧಿತರನ್ಬು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.