ಅಕ್ಷಯ ಪಾತ್ರದಿಂದ ಹಸಿವು ನೀಗುವುದರ ಜೊತೆ ಪುಣ್ಯ ಸಂಪಾದನೆಯ ಕಾರ್ಯ: ಸುಗುಣೇಂದ್ರ ಶ್ರೀಗಳಿಂದ ಬೆಂಜನಪದವಿನಲ್ಲಿ ಅಕ್ಷಯ ಪಾತ್ರ ಪ್ರತಿಷ್ಠಾನದಿಂದ ನಿರ್ಮಾಣಗೊಂಡ ಬಿಸಿಯೂಟ ತಯಾರಿ ಘಟಕಕ್ಕೆ ಚಾಲನೆ
ಬಂಟ್ವಾಳ: ಅಕ್ಷಯಪಾತ್ರ ನೀಡುವ ಸಾತ್ವಿಕ ಆಹಾರದ ಮೂಲಕ ಮಕ್ಕಳಿಗೆ ಆದ್ಯಾತ್ಮಿಕ ಸಾಧನೆಯನ್ನು ನೀಡುವ ಕಾರ್ಯವನ್ನು ಇಸ್ಕಾನ್ ನಡೆಸುತ್ತಿದೆ ಎಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು.

ಭಾನುವಾರ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ನಿರ್ಮಾಣಗೊಂಡಿರುವ ಮಂಗಳೂರು ಅಕ್ಷಯ ಪಾತ್ರ ಫೌಂಡೇಶನ್ ನ ಅತ್ಯಾಧುನಿಕ ಬಿಸಿಯೂಟ ತಯಾರಿಕಾ ಘಟಕವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನಗೈದರು.

ಅಕ್ಷಯಪಾತ್ರ ಫೌಂಡೇಶನ್ ಶ್ರೀ ಕೃಷ್ಣನ ಪ್ರಸಾದವನ್ನು ಮಕ್ಕಳಿಗೆ ವಿತರಿಸುವ ಸತ್ಕಾರ್ಯವನ್ನು ಹಲವು ವರ್ಷಗಳಿಂದ ನಡೆಸುತ್ತಿದೆ. ಇಸ್ಕಾನ್ ಫೌಂಡೇಶನ್ ಮೂಲಕ ಇಡೀ ದೇಶದಲ್ಲಿ 23 ಲಕ್ಷ ಮಂದಿಗೆ ಮಧ್ಯಾಹ್ನದ ಬಿಸಿಯೂಟ ತಲುಪುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ ನೂತನ ಅತ್ಯಾಧುನಿಕ ಅಡುಗೆ ಮನೆಯು ಅಕ್ಷಯ ಪಾತ್ರ ಫೌಂಡೇಶನ್ನಿನ ಪ್ರಗತಿಯನ್ನು ಸೂಚಿಸುತ್ತದೆ. ಮಕ್ಕಳ ಕಲ್ಯಾಣ ಮತ್ತು ಸಮುದಾಯದ ಅಭಿವೃದ್ಧಿಯಲ್ಲಿ ಪ್ರತಿಷ್ಠಾನದ ಬದ್ಧತೆ ಪ್ರತಿಬಿಂಬವಾಗಿದೆ ಎಂದರು.
ಮಕ್ಕಳ ಹಸಿವು ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ಕರ್ನಾಟಕ ಸರಕಾರಗಳ ಸಹಕಾರ ಮತ್ತು ಅಭಿಯಾನಕ್ಕೆ ದಾನಿಗಳಾದ ದಿವಂಗತ ಡಾ. ವಿ ರವಿಚಂದ್ರನ್, ಮಂಗಳೂರು ಜಿಟಿ ಫೌಂಡೇಶನ್ ಮತ್ತು ದಿಯಾ ಸಿಸ್ಟಮ್ಸ್ ಪ್ರೈ.ಲಿಮಿಟೆಡ್ ವಿಜಯ್ ಮತ್ತು ಶಾಮ ಕೇಡಿಯಾ ನೀಡುತ್ತಿರುವ ನಿರಂತರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.
ಅಕ್ಷಯ ಪಾತ್ರ ಫೌಂಡೇಶನ್‌ನ ಉಪಾಧ್ಯಕ್ಷ ಚಂಚಲಪತಿ ದಾಸ, ಕೊಡಚಾದ್ರಿ ಗುರುಕುಲದ ಉಸ್ತುವಾರಿಗಳಾದ ತತ್ವದರ್ಶನ ಸ್ವಾಮಿಜಿ, ಮೇರಮಜಲು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ನಾಯ್ಗ, ಅಮ್ಮುಂಜೆ ಗ್ರಾ.ಪಂ.ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ ಉಪಸ್ಥಿತರಿದ್ದರು.
ಮಂಗಳೂರು ಇಸ್ಕಾನ್ ಅಧ್ಯಕ್ಷ ಗುಣಕರ ರಾಮದಾಸ್ ಸ್ವಾಗತಿಸಿದರು. ಸನಾನಂದ ದಾಸ ವಂದಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
25 ಸಾವಿರ ಬಿಸಿಯೂಟ ಉತ್ಪಾದನೆ
ದಾನಿಗಳಾದ ಮಂಗಳೂರಿನ ಜಿಟಿ ಫೌಂಡೇಶನ್ ಮತ್ತು ದಿಯಾ ಸಿಸ್ಟಮ್ಸ್ ಪ್ರೈ.ಲಿ. ನ ವಿಜಯ್ ಮತ್ತು ಶಾಮ ಕೇಡಿಯಾ, ದಿವಂಗತ ಡಾ. ವಿ ರವಿಚಂದ್ರನ್ ಅವರ ದೂರದೃಷ್ಟಿ ಕೊಡುಗೆಯಾಗಿ ಬೆಂಜನಪದವಿನಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿ ಘಟಕ ನಿರ್ಮಾಣಗೊಂಡಿದೆ.
124 ಸರಕಾರಿ ಮತ್ತು 41 ಸರಕಾರಿ ಅನುದಾನಿತ ಸಂಸ್ಥೆಗಳು ಸೇರಿದಂತೆ ಒಟ್ಟು 165 ಕ್ಕೂ ಹೆಚ್ಚು ಶಾಲೆಗಗಳಿಗೆ ಅಗತ್ಯ ಪೌಷ್ಟಿಕಯುತವಾದ 25 ಸಾವಿರ ಬಿಸಿಯೂಟವನ್ನು ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಸೌರಶಕ್ತಿ ಮತ್ತು ಸ್ವಚ್ಛ ಎಲ್ ಪಿ ಜಿಯೊಂದಿಗೆ ಪರಿಸರಸ್ನೇಹಿ ಅಡುಗೆಮನೆ ರೂಪುಗೊಂಡಿದೆ.